ಬಯಲುಸೀಮೆಯ ನೆಲ ಸ್ಪರ್ಶಿಸಿದ ಭದ್ರೆ: ಮಧ್ಯರಾತ್ರಿಯೇ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಯಲುಸೀಮೆಯ ನೆಲ ಸ್ಪರ್ಶಿಸಿದ ಭದ್ರೆ: ಮಧ್ಯರಾತ್ರಿಯೇ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಯಲುಸೀಮೆಯ ನೆಲ ಸ್ಪರ್ಶಿಸಿದ ಭದ್ರೆ: ಮಧ್ಯರಾತ್ರಿಯೇ ಪಟಾಕಿ ಸಿಡಿಸಿ ಜನರ ಸಂಭ್ರಮ

ಚಿತ್ರದುರ್ಗ: ಹಲವು ಅಡೆತಡೆ, ಅಡ್ಡಿ, ಆತಂಕಗಳ ನಡುವೆಯೂ ಭದ್ರಾ ನದಿ ನೀರು ಸೋಮವಾರ ರಾತ್ರಿಯೇ ಬಯಲುಸೀಮೆಯ ನೆಲ ಸ್ಪರ್ಶಿಸಿತು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಜಿಲ್ಲೆಯ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೀರು ಹರಿವಿಗೆ ಚಾಲನೆ ನೀಡಿದ ದಿನವೇ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ಬಳಿ ಸಮಸ್ಯೆಯುಂಟಾಗಿತ್ತು. ಆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದ ಜನಪ್ರತಿನಿಧಿಗಳು, ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೀರನ್ನು ಬರದ ನಾಡಿನತ್ತ ಹರಿಸುವಲ್ಲಿ ಯಶಸ್ವಿಯಾದರು. ಇಂತಹ ಹಲವು ಸವಾಲುಗಳನ್ನು ಮೀರಿ ಮುಂದೆ ಸಾಗಿದ ಜೀವಜಲ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅರಬಾಲ ವ್ಯಾಪ್ತಿಯಿಂದ ಮುಂದಕ್ಕೆ ಹರಿದು ಕೋಟೆನಾಡು ಪ್ರವೇಶಿಸಿತು.

ಅಜ್ಜಂಪುರ ಬಳಿಯ ‘ವೈ’ ಜಂಕ್ಷನ್‌ನಿಂದ ಅರಬಾಲವರೆಗೆ 16 ಕಿ.ಮೀ. ಸಾಗಿದ ನೀರು ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಪ್ರವೇಶಿಸುತ್ತಿದ್ದಂತೆಯೇ ಕೋಟೆನಾಡಿನ ಜನರು ಸಂಭ್ರಮಿಸಿದರು. ನೀರು ನೋಡಲು ಮಂಗಳವಾರ ಬೆಳ್ಳಂಬೆಳಗ್ಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೆಲವರು ನಾಲೆಗೆ ಇಳಿದು ನೀರನ್ನು ಮೈಮೇಲೆ ಸುರಿದುಕೊಂಡರು. ಇನ್ನೊಂದೆಡೆ ಹೊಸದುರ್ಗ ತಾಲ್ಲೂಕಿನ ಚಿಕ್ಕಯಗಟಿ ಗ್ರಾಮಸ್ಥರು ತಮ್ಮ ವ್ಯಾಪ್ತಿಯ ಕೆರೆಗೆ ನೀರು ಹರಿಸುವಂತೆ ನಾಲೆಗೆ ಇಳಿದು ಪ್ರತಿಭಟನೆ ನಡೆಸಿದರು. ಹಲವು ಹಳ್ಳಿಗಳಲ್ಲಿ ಇಂತಹ ಸವಾಲುಗಳು ಎದುರಾದರೂ ನೀರು ಮುಂದಕ್ಕೆ ಸಾಗಿತು.

ಸಾಣೇಹಳ್ಳಿಯಿಂದ ಕಬ್ಬಿನಕೆರೆಗೆ ಸಾಗಿದ ನೀರು ಮುಂದೆ ‘ವೈ’ ಜಂಕ್ಷನ್‌ನಿಂದ 30ನೇ ಕಿ.ಮೀ.ವರೆಗಿನ ಚಿಕ್ಕಯಗಟಿಗೂ ತಲುಪಿತು. ಮುಂದೆ 40 ಕಿ.ಮೀ.ವರೆಗಿನ ಭಗೀರಥ ಗುರುಪೀಠ, ಹೊನ್ನೇನಹಳ್ಳಿ, ದೊಡ್ಡಾಘಟ್ಟ, ಜಾನುಕಲ್‌, ದೊಡ್ಡಕಿಟ್ಟದಹಳ್ಳಿವರೆಗೂ ನೀರು ಸಾಗಿತು. ಮಂಗಳವಾರ ರಾತ್ರಿಯೇ ಭದ್ರಾ ನೀರು ಗೂಳಿಹೊಸಳ್ಳಿ ಮೂಲಕ ಹೊಳಲ್ಕೆರೆ ತಾಲ್ಲೂಕು ಪ್ರವೇಶಿಸುವ ನಿರೀಕ್ಷೆ ಇತ್ತು. ಬುಧವಾರ ಬೆಳಿಗ್ಗೆ ವೇಳೆಗೆ ಕೊಳಾಳು ತಲುಪಿ ಗೌನಹಳ್ಳಿ ಮೂಲಕ ಹಿರಿಯೂರು ತಾಲ್ಲೂಕಿನ ಐಮಂಗಲ ವ್ಯಾಪ್ತಿಯನ್ನು ಪ್ರವೇಶಿಸುವ ಭರವಸೆ ಮೂಡಿದೆ.

ಮುಂದೆ ಯಾವುದೇ ಅಡ್ಡಿ, ಆತಂಕಗಳು ಎದುರಾಗದಿದ್ದರೆ ‘ವೈ’ ಜಂಕ್ಷನ್‌ನಿಂದ 90ನೇ ಕಿ.ಮೀ.ವರೆಗಿನ ಭರಂಪುರವರೆಗೆ ಹರಿದು ನಂತರ 104ನೇ ಕಿ.ಮೀ. ವ್ಯಾಪ್ತಿಯ ದೊಡ್ಡಸಿದ್ದವ್ವನಹಳ್ಳಿ ಮೂಲಕ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿ ಸೇರಲಿದೆ. ನಂತರ 117 ಕಿ.ಮೀ. ವ್ಯಾಪ್ತಿಯ ಗೋನೂರು ಕೆರೆ ತಲುಪಲಿದೆ. ಗೋನೂರು ಅಕ್ವಡಕ್ಟ್‌ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮುಂದೆ ನೀರು ಹರಿಯುವುದಿಲ್ಲ.

ಗೋನೂರು ಅಕ್ವಡಕ್ಟ್‌ ಕಾಮಗಾರಿ ಪೂರ್ಣಗೊಂಡರೆ ಮುಂದೆ ದ್ಯಾಮವ್ವನಹಳ್ಳಿ ಮೂಲಕ ದಾವಣಗೆರೆ ಜಿಲ್ಲೆ ಜಗಳೂರು ವ್ಯಾಪ್ತಿ ಪ್ರವೇಶಿಸಲಿದೆ. ಈ ನಡುವಿನ ಹಂತದಲ್ಲಿ ಶಾಖಾ ನಾಲೆ ಮೂಲಕ ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಗೆ ನೀರು ಕೊಂಡೊಯ್ಯುವ ಕಾಮಗಾರಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿದೆ. ಸದ್ಯಕ್ಕೆ ಚಿತ್ರದುರ್ಗ ತಾಲ್ಲೂಕಿನ ಗೋನೂರುವರೆಗೆ ನೀರು ಹರಿಯಲಿದ್ದು ಈ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ಹರಿಯಲಿದೆ.

‘ಈಗಷ್ಟೇ ಭದ್ರಾ ನೀರು ನಮ್ಮ ಜಿಲ್ಲಾ ವ್ಯಾಪ್ತಿ ತಲುಪಿದೆ. ಇದು ಪರೀಕ್ಷಾರ್ಥ ಹರಿವು ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಮುಂದೆ ವಾಸ್ತವವಾಗಿ ನೀರು ಹರಿಸಲು ಬೇಕಿರುವ ಸಿದ್ಧತೆಗಳನ್ನು ಅತ್ಯಂತ ಶೀಘ್ರಗತಿಯಲ್ಲಿ ಅಧಿಕಾರಿಗಳು ಮಾಡಿಕೊಳ್ಳಬೇಕು. ಕೇಳಿದವರಿಗೆಲ್ಲಾ ನೀರು ಕೊಡಲು ಸಾಧ್ಯವಿಲ್ಲ. ಯೋಜನಾ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಬಿಟ್ಟು ಬೇರೆ ಕೆರೆಗಳಿಗೆ ನೀರು ಕೊಡಬಾರದು. ಅನಧಿಕೃತವಾಗಿ ನೀರು ಬಳಸದಂತೆ ಕಡಿವಾಣ ಹಾಕಬೇಕು’ ಎಂದು ರೈತ ಮುಖಂಡರೊಬ್ಬರು ಹೇಳಿದರು.

ಮಧ್ಯರಾತ್ರಿಯೇ ಪಟಾಕಿ ಸಿಡಿಸಿದರು

ಸೋಮವಾರ ಮಧ್ಯರಾತ್ರಿ ವೇಳೆ ಭದ್ರಾ ನೀರು ಸಾಣೇಹಳ್ಳಿ ವ್ಯಾಪ್ತಿಗೆ ತಲುಪುತ್ತಿದ್ದಂತೆ ಚಿತ್ರದುರ್ಗದ ಒನಕೆ ಓಬವ್ವ ಸರ್ಕಲ್‌ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಯಿತು. ಕೆಲ ಸಂಘಟನೆಗಳ ಮುಖಂಡರು ಮಧ್ಯರಾತ್ರಿಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು.

‘ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಗೆದ್ದರೆ ದೇಶದಾದ್ಯಂತ ಪಟಾಕಿ ಸಿಡಿಸಲಾಗುತ್ತದೆ. ಅದೇ ರೀತಿ ನಾವೂ ತಡರಾತ್ರಿಯಾದರೂ ಸರಿ, ಪಟಾಕಿ ಸಿಡಿಸುವುದರಿಂದ ಹಿಂದೆ ಸರಿಸುವುದಿಲ್ಲ. ರೈತರ ಪಾಲಿಗೆ ಇದು ನಿಜವಾದ ಸಂಭ್ರಮವಾಗಿದೆ. ನಾವು ಸಂತೋಷದಿಂದ ಪಟಾಕಿ ಸಿಡಿಸುತ್ತಿದ್ದೇವೆ’ ಎಂದು ಸಂಘಟನೆಗಳ ಸದಸ್ಯರು ತಿಳಿಸಿದರು.

ಹಲವು ಹಳ್ಳಿಗಳಲ್ಲಿ ರೈತರು ತಮ್ಮ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ನೀರು ಹರಿಸುತ್ತಿರುವ ಉದ್ದೇಶವನ್ನು ಅವರಿಗೆ ವಿವರಿಸಿ ಮುಂದಕ್ಕೆ ನೀರು ಕೊಂಡೊಯ್ಯಲಾಗುತ್ತಿದೆ ಎಚ್‌.ರವಿಶಂಕರ್‌, ಮುಖ್ಯ ಎಂಜಿನಿಯರ್‌, ವಿಜೆಎನ್‌ಎಲ್‌

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ