
ಕೋಲಾರ: ಕಾಲುದಾರಿ, ಬಂಡಿದಾರಿ ಒತ್ತುವರಿಗೆ ಡಿ.ಸಿ ಬ್ರೇಕ್
ಕೋಲಾರ: ಜಿಲ್ಲೆಯಾದ್ಯಂತ ನಕಾಶೆಯಲ್ಲಿ ಗುರುತಿಸಿರುವ ದಾರಿ, ಕಾಲುದಾರಿ, ಬಂಡಿದಾರಿಗಳ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರು ಹಾಗೂ ರೈತರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕಾಲುದಾರಿ, ಬಂಡಿದಾರಿ ಬಂದ್ ಮಾಡಿದ್ದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂಬಂಧ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ–ಭೂ ಮಂಜೂರಾತಿ-1) 2023ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ ಆ.31ರಂದು ಈ ಆದೇಶ ಮಾಡಿದ್ದಾರೆ.
ಅಧಿಕಾರ ವಹಿಸಿಕೊಂಡಾಗಿನಿಂದ ಭೂಮಾಫಿಯಾ ಹಾಗೂ ಒತ್ತುವರಿ ವಿರುದ್ಧ ಗುಡುತ್ತಿರುವ ಅವರು ಒತ್ತುವರಿದಾರರು ಹಾಗೂ ಅಧಿಕಾರಿಗಳಿಗೆ ಈ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಜಿಲ್ಲೆ ವ್ಯಾಪ್ತಿಯಲ್ಲಿ ನಕಾಶೆ ಮತ್ತು ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲಾಗಿರುವ ದಾರಿಗಳನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ರೈತರು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಂಡುಬಂದಿದೆ. ಪ್ರಮುಖವಾಗಿ ರೈತರು ಕೃಷಿ ಚಟುವಟಿಕೆ ಉದ್ದೇಶಕ್ಕೆ ತಮ್ಮ ಜಮೀನುಗಳಿಗೆ ಹೋಗಿ ಬರಲು ಕೆಲವೆಡೆ ಪರದಾಡುತ್ತಿರುವುದು ಕಂಡು ಬಂದಿದೆ. ಹಲವೆಡೆ ಬಲಾಢ್ಯರು ಕಾಲುದಾರಿ, ಬಂಡಿದಾರಿ ಒತ್ತುವರಿ ಮಾಡಿಕೊಂಡಿರುವ ದೂರುಗಳಿವೆ. ಇದಲ್ಲದೇ, ಕೆಲ ಹಳ್ಳಿಗಳಲ್ಲಿ ಮನೆಗೆ ಹೋಗಿಬರುವ ದಾರಿಯನ್ನೂ ಒತ್ತುವರಿ ಮಾಡಿರುವ ಬಗ್ಗೆ ಹಲವರು ನೋವು ಹೇಳಿಕೊಂಡಿದ್ದಾರೆ. ಇಂತಹ ಒತ್ತುವರಿಗಳನ್ನು ಯಾವುದೇ ವಿಳಂಬವಿಲ್ಲದೆ ತೆರವುಗೊಳಿಸಬೇಕು ಎಂದು ಎಂ.ಆರ್.ರವಿಕುಮಾರ್ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರರು ಕಡ್ಡಾಯವಾಗಿ ನಿಬಂಧನೆಗಳನ್ನು ಪಾಲಿಸಿ ಕ್ರಮ ವಹಿಸಬೇಕೆಂದು ಸುತ್ತೋಲೆ ಮೂಲಕ ತಾಕೀತು ಮಾಡಿದ್ದಾರೆ. ಈ ಸುತ್ತೋಲೆ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ದಾಖಲೆ ಪರಿಶೀಲನೆ: ಸಂಬಂಧಪಟ್ಟ ದಾರಿಯ ಸ್ವರೂಪ ಮತ್ತು ಅಸ್ತಿತ್ವದ ಬಗ್ಗೆ ನಕಾಶೆ, ಪಹಣಿ, ಆರ್‌ಟಿಸಿ, ಸರ್ವೇ ದಾಖಲೆಗಳು ಮತ್ತು ಲಭ್ಯವಿರುವ ಇತರೆ ಕಂದಾಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು.
ಸ್ಥಳ ಪರಿಶೀಲನೆ ಮತ್ತು ಸ್ಕೆಚ್: ಅಗತ್ಯವಿದ್ದಲ್ಲಿ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮತ್ತು ಸರ್ವೇ ನಡೆಸಿ, ದಾರಿಯ ಸ್ಥಳದ ನಕಾಶೆ/ಸ್ಕೆಚ್ ಸಿದ್ಧಪಡಿಸಬೇಕು.
ನೋಟಿಸ್ ಜಾರಿ: ದಾರಿಯಲ್ಲಿ ಒತ್ತುವರಿ ಕಂಡುಬಂದಲ್ಲಿ, ಒತ್ತುವರಿದಾರರಿಗೆ ಕಾನೂನು ಮತ್ತು ನಿಯಮಗಳನ್ವಯ ನೋಟಿಸ್ ಜಾರಿಗೊಳಿಸಬೇಕು
ತೆರವು ಕಾರ್ಯ: ಒತ್ತುವರಿ ದೃಢಪಟ್ಟಲ್ಲಿ, ಕಾನೂನುಬದ್ಧ ಪ್ರಾಧಿಕಾರದ ಆದೇಶದಂತೆ ಒತ್ತುವರಿಯನ್ನು ತೆರವುಗೊಳಿಸಿ, ದಾರಿಯನ್ನು ಸಾರ್ವಜನಿಕರ ಮತ್ತು ರೈತರ ಮುಕ್ತ ಸಂಚಾರಕ್ಕೆ ಲಭ್ಯವಾಗುವಂತೆ ಮಾಡಬೇಕು.
ಮತ್ತೆ ಒತ್ತುವರಿ ಆಗದಂತೆ ನಿಗಾ: ತೆರವುಗೊಳಿಸಿದ ದಾರಿಗಳು ಮತ್ತೆ ಒತ್ತುವರಿಗೆ ಒಳಗಾಗದಂತೆ ಗ್ರಾಮ ಆಡಳಿತ ಮತ್ತು ಕಂದಾಯ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಮತ್ತೆ ಒತ್ತುವರಿ ಕಂಡುಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು.
ದೂರುಗಳಿಗೆ ತ್ವರಿತ ಸ್ಪಂದನೆ: ಈ ಕುರಿತು ಬರುವ ಸಾರ್ವಜನಿಕ ದೂರುಗಳು ಮತ್ತು ಅರ್ಜಿಗಳನ್ನು ವಿಳಂಬ ಮಾಡದೆ ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರಿಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ದಾರಿಗಳ ಒತ್ತುವರಿ ಪ್ರಕರಣಗಳ ಪಟ್ಟಿ ಸಿದ್ಧಪಡಿಸಿ, ಆದ್ಯತೆಯ ಮೇರೆಗೆ ತೆರವು ಕಾರ್ಯ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಈ ಆದೇಶದ ಪ್ರತಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ವರಿಷ್ಠಾಧಿಕಾರಿ, ಭೂದಾಖಲೆಗಳ ನಿರ್ದೇಶಕರು, ಉಪವಿಭಾಗಾಧಿಕಾರಿ, ಕೋಲಾರ, ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಮತ್ತು ಕೆಜಿಎಫ್ ತಹಶೀಲ್ದಾರರಿಗೆ ಕಳುಹಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮದ ಎಚ್ಚರಿಕೆವಿಫಲವಾದರೆ ಕಾನೂನು ಕ್ರಮ
ವಿಫಲವಾದರೆ ಕಾನೂನು ಕ್ರಮ
ಒತ್ತುವರಿದಾರರು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ವಿಫಲರಾದಲ್ಲಿ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಂಡು ತೆರವು ಕಾರ್ಯ ಪೂರ್ಣಗೊಳಿಸಬೇಕು. ತೆರವು ಕಾರ್ಯಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಕರ್ತವ್ಯ ನಿರ್ವಹಣೆಗೆ ತಡೆ ಉಂಟುಮಾಡುವುದು ಅಥವಾ ಸಾರ್ವಜನಿಕ ದಾರಿಯ ಬಳಕೆಯನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಕಂಡುಬಂದಲ್ಲಿ, ಅನ್ವಯಿಸುವ ಕಾನೂನುಗಳಡಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-18-1861279060