
ಮಳವಳ್ಳಿ: ಸಹಕಾರ ಸಂಘಗಳಲ್ಲಿ ಅವಧಿ ಮುಗಿದರೂ ನಡೆಯದ ಚುನಾವಣೆ
ಹಲಗೂರು: ಮಳವಳ್ಳಿ ತಾಲ್ಲೂಕಿನ ಬಹುತೇಕ ಸಹಕಾರ ಸಂಘಗಳ ಅವಧಿ ಮುಕ್ತಾಯಗೊಂಡಿದ್ದರೂ ಇನ್ನೂ ಚುನಾವಣೆ ನಡೆಯದಿರುವುದು ರೈತರು ಹಾಗೂ ಸದಸ್ಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕಾದ ಸಹಕಾರ ಸಂಸ್ಥೆಗಳು ಚುನಾಯಿತ ಆಡಳಿತ ಮಂಡಳಿಗಳ ಬದಲಿಗೆ ಆಡಳಿತಾಧಿಕಾರಿಗಳ ಮೂಲಕವೇ ಮುಂದುವರಿಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಅವಧಿ ಮುಗಿದು ವರ್ಷ ಕಳೆದರೂ ಇನ್ನೂ ಚುನಾವಣೆ ನಡೆಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಿಯಮಾವಳಿ ಪ್ರಕಾರ ಆಡಳಿತ ಅವಧಿ ಮುಗಿದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕೆಂಬ ನಿಯಮವಿದ್ದರೂ, ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ರೈತರು ತಮ್ಮ ಅಭಿವೃದ್ಧಿಗಾಗಿ ಪರಸ್ಪರ ಸಹಕಾರ ತತ್ವದ ಅಡಿಯಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿ 34 ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ಈ ಪೈಕಿ ಸುಮಾರು 8 ಸಂಘಗಳಿಗೆ ಸಹಕಾರ ಸಂಘಗಳ ಜಿಲ್ಲಾ ನಿಬಂಧಕರು ಚುನಾವಣೆ ನಡೆಸದೇ ಆಡಳಿತ ಅಧಿಕಾರಿ ನೇಮಕ ಮಾಡಿದ್ದಾರೆ. ಆಡಳಿತಾಧಿಕಾರಿ ಕಾಲಾವಧಿಯೂ ಸಹ ಕೆಲ ಸಂಘಗಳಲ್ಲಿ ಆರು ತಿಂಗಳು ಮೀರಿದೆ.
ಹಲಗೂರು, ದಳವಾಯಿ ಕೋಡಿಹಳ್ಳಿ, ಲಿಂಗಪಟ್ಟಣ, ಹಾಡ್ಲಿ-ಮೇಗಳಾಪುರ, ನಡಕಲಪುರ, ಸೇರಿದಂತೆ ತಾಲ್ಲೂಕಿನ 8ಕ್ಕೂ ಹೆಚ್ಚು ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಆಡಳಿತಾವಧಿ ಮುಗಿದು ವರ್ಷವೇ ಕಳೆದಿದೆ.
ಅಂತರವಳ್ಳಿ, ಸಾವಂದಿಪುರ, ಕೋಡಿಪುರ, ಗುಂಡಾಪುರ, ಹುಸ್ಕೂರು, ವಿ.ಬಸಾಪುರ, ಹುಲ್ಲಾಗಾಲ, ನಡಕಲಪುರ, ನಂಜೇಗೌಡನದೊಡ್ಡಿ, ಬಾಣಸಮುದ್ರ ಸೇರಿದಂತೆ ತಾಲ್ಲೂಕಿನ 25 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಚುನಾವಣೆ ನಡೆಯಬೇಕಿದೆ.
ಇತರೆ ವಲಯದಲ್ಲಿ ಬರುವ ಹತ್ತಿ, ಕೈಮಗ್ಗ ನೇಕಾರರು, ಕುರಿ ಮತ್ತು ಉಣ್ಣೆ ಉತ್ಪಾದಕರು, ಮೀನುಗಾರರು, ಮಹಿಳೆಯರು, ಶಿಕ್ಷಕರು, ಪರಿಶಿಷ್ಟ ಜಾತಿ ವರ್ಗದವರು ರಚಿಸಿಕೊಂಡಿರುವ ತಾಲ್ಲೂಕಿನ 10 ಸಂಘಗಳು ಚುನಾವಣೆಗಾಗಿ ಕಾಯುತ್ತಿವೆ.
ನ. 2, 2025ರಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆ ನಡೆದಿದ್ದು, ಚುನಾವಣೆ ನಡೆಯದ ಸಂಘಗಳು ಪ್ರತಿನಿಧಿ ಇಲ್ಲದ ಪರಿಣಾಮ ಮತದಾನದ ಹಕ್ಕು ಕಳೆದುಕೊಂಡಿವೆ. ಈ ಹಿಂದೆ ನಡೆದ ಟಿಎಪಿಸಿಎಂಎಸ್ ಸಂಘದ ಚುನಾವಣೆಯಲ್ಲಿ ಸಂಘಗಳು ಮತ ಚಲಾಯಿಸುವ ಅವಕಾಶ ಕೈ ತಪ್ಪಿ ಹೋಗಿದೆ ಎಂದು ಲಿಂಗಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಲಿಂಗಪಟ್ಟಣ ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-40-1581647231