
ಮಂಡ್ಯ: ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತ
ಮಂಡ್ಯ: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಕಾರಣ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುವ ಸಾಧ್ಯತೆಯಿದ್ದು, ರೈತರಿಗೆ ಆತಂಕ ಮೂಡಿಸಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಈ ಬಾರಿಯ ಮೇ ತಿಂಗಳಲ್ಲಿ –1.37 ಮೀಟರ್, ಜೂನ್‌ನಲ್ಲಿ –0.97 ಮೀ. ಮತ್ತು ಜುಲೈನಲ್ಲಿ –1.88 ಮೀಟರ್‌ನಷ್ಟು ಅಂತರ್ಜಲ ಇಳಿಕೆಯಾಗಿದೆ.
ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಹಿಂದಿನ ವರ್ಷ ಜುಲೈನಲ್ಲಿ 9.77 ಮೀಟರ್‌ನಷ್ಟಿದ್ದ ಅಂತರ್ಜಲ ಈ ಬಾರಿ 14.68 ಮೀಟರ್‌ಗೆ ಕುಸಿತವಾಗಿದೆ. ಅಂದರೆ –4.91 ಮೀಟರ್‌ನಷ್ಟು ಕೊರತೆಯಾಗಿದ್ದು, ಬಾಧಿತ ತಾಲ್ಲೂಕಿನಲ್ಲಿ ಮೊದಲ ಸ್ಥಾನದಲ್ಲಿದೆ. ನಾಗಮಂಗಲ ತಾಲ್ಲೂಕಿನಲ್ಲಿ –2.72 ಮೀಟರ್ ಮತ್ತು ಪಾಂಡವಪುರ ತಾಲ್ಲೂಕಿನಲ್ಲಿ –2.30 ಮೀಟರ್‌ನಷ್ಟು ಅಂತರ್ಜಲದಲ್ಲಿ ವ್ಯತ್ಯಾಸ ಕಂಡುಬಂದಿದೆ.
2025ನೇ ಸಾಲಿನಲ್ಲಿ ಸಮೃದ್ಧವಾಗಿ ಮಳೆ ಸುರಿದಿದ್ದ ಕಾರಣ ಜಲಾಶಯ, ಕೆರೆ–ಕಟ್ಟೆಗಳು ಭರ್ತಿಯಾಗಿ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿತ್ತು. ಈ ಬಾರಿ ಮಳೆಯ ತೀವ್ರ ಕೊರತೆಯಿಂದ ಕೆರೆ–ಕಟ್ಟೆಗಳು ಭಣಗುಡುತ್ತಿದ್ದು, ಅಂತರ್ಜಲ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಶೇ 42ರಷ್ಟು ಮಳೆ ಕೊರತೆ (ಮಿ.ಮೀ.ಗಳಲ್ಲಿ):
ಪೂರ್ವ ಮುಂಗಾರು ಸಂದರ್ಭದಲ್ಲಿ 159.0 ವಾಡಿಕೆ ಮಳೆಗೆ 139.8ರಷ್ಟು ಮಾತ್ರ ಮಳೆಯಾಯಿತು. ಮುಂಗಾರು ಅವಧಿಯಲ್ಲಿ ಇದುವರೆಗೆ 129.2ರಷ್ಟು ವಾಡಿಕೆ ಮಳೆಗೆ 80.8ರಷ್ಟು ಮಾತ್ರ ಮಳೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಶೇ 42 ಮಳೆ ಕೊರತೆಯಾಗಿದೆ. ಇದರಿಂದ ಕೆರೆ–ಕಟ್ಟೆಗಳು ನೀರಿಲ್ಲದೆ ಭಣಗುಡುತ್ತಿವೆ.
ಕರ್ನಾಟಕ ರಾಜ್ಯದ ಒಟ್ಟಾರೆ ಅಂತರ್ಜಲ ಬಳಕೆಯಲ್ಲಿ ಮಂಡ್ಯ ಜಿಲ್ಲೆಯು 17ನೇ ಸ್ಥಾನದಲ್ಲಿದ್ದು (ಶೇ 65.85ರಷ್ಟು ಬಳಕೆ) ಸುರಕ್ಷಿತ ವಲಯದಲ್ಲಿದೆ. ಕೋಲಾರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಂತೆ ಮಂಡ್ಯದಲ್ಲಿ ಅತಿಯಾದ ಅಂತರ್ಜಲ ಬಳಕೆ ಇಲ್ಲ. ಜಿಲ್ಲೆಯು ಕೆ.ಆರ್.ಎಸ್ ಮತ್ತು ಹೇಮಾವತಿ ಜಲಾಶಯಗಳ ನಾಲೆಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಇಲ್ಲಿ ಮೇಲ್ಮೈ ನೀರಿನ ಬಳಕೆ ಹೆಚ್ಚಾಗಿದ್ದು, ಅಂತರ್ಜಲದ ಮೇಲಿನ ಅವಲಂಬನೆ ತಕ್ಕಮಟ್ಟಿಗೆ ಕಡಿಮೆಯಿದೆ.
ಅಂತರ್ಜಲ ಹೊರತೆಗೆಯುವ ಪಟ್ಟಿಯಲ್ಲಿ ಮಳವಳ್ಳಿ ತಾಲ್ಲೂಕು (ಶೇ 87.51) ಅರೆ ಕ್ಲಿಷ್ಟಕರ ಸ್ಥಿತಿಯಲ್ಲಿದ್ದು, ಉಳಿದ ತಾಲ್ಲೂಕುಗಳು ಸುರಕ್ಷಿತ ವಲಯದಲ್ಲಿವೆ. ಜಿಲ್ಲೆಯ ಸರಾಸರಿ ಅಂತರ್ಜಲ ಬಳಕೆಗಿಂತ ಮಳವಳ್ಳಿ ತಾಲ್ಲೂಕಿನಲ್ಲಿ ಹೆಚ್ಚು ಅಂತರ್ಜಲ ಬಳಸಲಾಗುತ್ತಿದೆ. ಇಲ್ಲಿ ಅಂತರ್ಜಲ ಸಂರಕ್ಷಣಾ ಕ್ರಮಗಳನ್ನು ಹೆಚ್ಚು ಅನುಸರಿಸುವ ಅಗತ್ಯವಿದೆ ಎನ್ನುತ್ತಾರೆ ಭೂವಿಜ್ಞಾನಿಗಳು.
‘ಇಲಾಖೆಯ 15 ತೋಡುಬಾವಿಗಳು ಮತ್ತು 43 ಅಧ್ಯಯನ ಕೊಳವೆಬಾವಿ ಬಾವಿಗಳಿಗೆ ಸ್ವಯಂಚಾಲಿತ ಅಂತರ್ಜಲ ಮಟ್ಟ ಮಾಪಕ ಅಳವಡಿಸಲಾಗಿದೆ. ಪ್ರತಿ ತಿಂಗಳು ಅಂತರ್ಜಲ ಮಟ್ಟಗಳನ್ನು ದಾಖಲಿಸಿ, ಏರಿಳಿತದ ಬಗ್ಗೆ ವರದಿ ತಯಾರಿಸುತ್ತೇವೆ. ಮಳೆಯ ಕೊರತೆ, ಕೊಳವೆಬಾವಿಗಳ ಹೆಚ್ಚಳ, ನೀರಿನ ಅಪವ್ಯಯ ಮುಂತಾದ ಕಾರಣಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ’ ಎನ್ನುತ್ತಾರೆ ಹಿರಿಯ ಭೂವಿಜ್ಞಾನಿ ರಾಜಶ್ರೀ.
ಸಂಪೂರ್ಣ ಬರಿದಾದ 189 ಕೆರೆಗಳು
ಮಂಡ್ಯ ಜಿಲ್ಲೆಯಲ್ಲಿ 968 ಕೆರೆಗಳಿದ್ದು, ಇವುಗಳಲ್ಲಿ 189 ಕೆರೆಗಳು ಸಂಪೂರ್ಣ ಬರಿದಾಗಿವೆ. ಹೀಗಾಗಿ ಈ ಕೆರೆಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಜನ–ಜಾನುವಾರುಗಳಿಗೆ ನೀರಿನ ಸಂಕಷ್ಟ ಎದುರಾಗಿದೆ. ಈ ಬಾರಿ ಭರ್ತಿಯಾಗಿರುವುದು ಕೇವಲ 15 ಕೆರೆ ಮಾತ್ರ.
53 ಕೆರೆಗಳಲ್ಲಿ ಶೇ 75ರಷ್ಟು ನೀರು, 137 ಕೆರೆಗಳಲ್ಲಿ ಶೇ 50ರಷ್ಟು ನೀರು, 213 ಕೆರೆಗಳಲ್ಲಿ ಶೇ 25ರಷ್ಟು ನೀರು, 361 ಕೆರೆಗಳಲ್ಲಿ ಅಲ್ಪಸ್ವಲ್ಪ (ಶೇ 25ಕ್ಕಿಂತ ಕಡಿಮೆ) ನೀರು ಸಂಗ್ರಹವಾಗಿದೆ. ಕೆರೆಗಳು ಭರ್ತಿಯಾಗದ ಕಾರಣ ಇವುಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೇಸಿಗೆಯಲ್ಲಿ ಕೊಳವೆಬಾವಿಗಳು ಬತ್ತುವುದರಿಂದ ಕೃಷಿ ಚಟುವಟಿಕೆಗೂ ಧಕ್ಕೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತರ್ಜಲ ಸಂರಕ್ಷಣೆ ಎಲ್ಲರ ಹೊಣೆ
‘ಅಂತರ್ಜಲ ಸಂರಕ್ಷಣೆ ಬಗ್ಗೆ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮನೆಗಳಲ್ಲಿ ನೀರು ಸೋರಿಕೆ ತಡೆಗಟ್ಟಬೇಕು. ನೀರನ್ನು ಮಿತವ್ಯಯವಾಗಿ ಬಳಸಬೇಕು. ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅಮೂಲ್ಯವಾದ ಜೀವಜಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮಂಡ್ಯದ ಹಿರಿಯ ಭೂವಿಜ್ಞಾನಿ ರಾಜಶ್ರೀ ಮನವಿ ಮಾಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-40-2009662518