
ಬಾಗೇಪಲ್ಲಿ ಮದ್ಯದಂಗಡಿ ಕೊಲೆ ಪ್ರಕರಣದ ಆರೋಪಿ ಬಂಧನ
ಬಾಗೇಪಲ್ಲಿ: ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಬಳಿಯ ಮದ್ಯ ಮಾರಾಟ ಮಳಿಗೆಯಲ್ಲಿ ಸೆ.5ರಂದು ನಡೆದ ಕೊಲೆ ಪ್ರಕರಣ ಸಂಬಂಧ ಬಾಗೇಪಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿಲಮತ್ತೂರು ಮಂಡಲದ ಮದುರೇಪಲ್ಲಿ ಗ್ರಾಮದ ಆದಿನಾರಾಯಣ (40) ಕೊಲೆ ಆರೋಪಿ.
ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಗ್ರಾಮದ ಬಳಿ ಇರುವ ಮದ್ಯ ಮಾರಾಟ ಮಳಿಗೆಯಲ್ಲಿ ನಾಗರಾಜ್ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ತಲೆಗೆ ಹೆಲ್ಮೆಟ್ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ, ನಾಗರಾಜ್ ಅವರ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿದ್ದರು. ತೀವ್ರ ರಕ್ತಸ್ರಾವವಾಗಿ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂಬಂಧ ಮೃತರ ಪತ್ನಿ ಮಣಿಯಮ್ಮ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡು, ಸಿ.ಸಿ.ಟಿ.ವಿ ನೀಡಿದ ಸುಳಿವಿನ ಮೇರೆಗೆ ಆರೋಪಿ ಆದಿನಾರಾಯಣನನ್ನು ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್, ಧನಂಜಯ್ ಕುಮಾರ್, ವೆಂಕಟಶಿವ, ನಾಗಾರ್ಜುನ, ಪ್ರಸಾದ್, ಲಕ್ಷ್ಮಿಪತಿ, ಅನಿಲ್ ಕುಮಾರ್, ಕೃಷ್ಣಪ್ಪ, ಖದೀರ್ ಅಹಮದ್, ಸಂತೋಷ್ ಕುಮಾರ್, ಬಾಲಚಂದ್ರ, ರವಿಕುಮಾರ್, ಮುನಿಕೃಷ್ಣ ಪಾಲ್ಗೊಂಡಿದ್ದರು.