ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಹಳೆಯ ಫ್ರಿಜ್ ಸ್ಫೋಟ: ಕುಟುಂಬದ ನಾಲ್ವರು ಸಜೀವ ದಹನ
ಬೆಳಗಾವಿ: ಇಲ್ಲಿನ ಚವಾಟ ಗಲ್ಲಿಯಲ್ಲಿ ಸೋಮವಾರ ತಡರಾತ್ರಿ ಹಳೆಯ ಫ್ರಿಜ್ ಸ್ಫೋಟಗೊಂಡು ಹೊತ್ತಿಕೊಂಡ ಬೆಂಕಿಯಿಂದ ಒಂದೇ ಕುಟುಂಬದ ನಾಲ್ವರು ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ಪುರುಷರ ಸ್ಥಿತಿ ಗಂಭೀರವಾಗಿದೆ.
ಶಾರದಾ ದಾಮೋನೆ (45), ಪುತ್ರಿಯರಾದ ಪ್ರಿಯಾ ಗಜಾನನ ದಾಮೋನೆ (28) ಹಾಗೂ ಗಂಗಾ ಗಜಾನನ ದಾಮೋನೆ (25) ಇವರ ಅತ್ತೆ ಭಾರತಿ ರಾಜಾರಾಮ ದಾಮೋನೆ (50) ಸಜೀವ ದಹನಗೊಂಡರು.
ಕುಟುಂಬದ ಮಾಲೀಕ ಗಜಾನನ ರಾಜಾರಾಮ ದಾಮೋನೆ (65) ಹಾಗೂ ಇವರ ಪುತ್ರ ರೋಷನ್ ದಾಮೋನೆ (21) ಬೆಂಕಿಯಿಂದ ತಪ್ಪಿಸಿಕೊಂಡು ಹೊರ ಓಡಿದರು. ಅವರಿಗೂ ಶೇ 90ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಚವಾಟ ಗಲ್ಲಿಯಲ್ಲಿ ತಗಡು ಹಾಗೂ ಕಟ್ಟಗೆಯಿಂದ ಮಾಡಿದ ಸಣ್ಣ ಮನೆಯಲ್ಲಿ ಇವರೆಲ್ಲರೂ ವಾಸವಾಗಿದ್ದರು. ಈಚೆಗಷ್ಟೇ ಸೆಕೆಂಡ್ ಹ್ಯಾಂಡ್ ಫ್ರಿಜ್ ಒಂದನ್ನು ತಂದುಕೊಂಡಿದ್ದರು. ಸೋಮವಾರ ರಾತ್ರಿ ಅದು ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪೋಟದ ಸದ್ದು ಹಾಗೂ ಬೆಂಕಿ ಕೆನ್ನಾಲಿಗೆ ಕಂಡು ಅಕ್ಕಪಕ್ಕದ ಜನ ಹತ್ತಿರ ಸುಳಿಯಲು ಹೆದರಿದರು. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟುಹೋಗಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.