ಗೋಬಿ–ಕಬಾಬ್‌ಗೆ ನಿಷೇಧಿತ ಬಣ್ಣ ಬಳಕೆ: ಆಹಾರ ಸುರಕ್ಷತಾ ಇಲಾಖೆ ತಪಾಸಣೆಯಿಂದ ದೃಢ

ಗೋಬಿ–ಕಬಾಬ್‌ಗೆ ನಿಷೇಧಿತ ಬಣ್ಣ ಬಳಕೆ: ಆಹಾರ ಸುರಕ್ಷತಾ ಇಲಾಖೆ ತಪಾಸಣೆಯಿಂದ ದೃಢ

ಗೋಬಿ–ಕಬಾಬ್‌ಗೆ ನಿಷೇಧಿತ ಬಣ್ಣ ಬಳಕೆ: ಆಹಾರ ಸುರಕ್ಷತಾ ಇಲಾಖೆ ತಪಾಸಣೆಯಿಂದ ದೃಢ

ಬೆಂಗಳೂರು: ಜನರ ಆರೋಗ್ಯದ ದೃಷ್ಟಿಯಿಂದ, ಗೋಬಿ ಮಂಚೂರಿ, ಕಬಾಬ್‌ಗೆ ಕೃತಕ ಬಣ್ಣ ಬಳಕೆ ನಿಷೇಧಿಸಿದ್ದರೂ ಗ್ರಾಹಕರನ್ನು ಸೆಳೆಯಲು ಕೆಲ ಆಹಾರ ತಯಾರಕರು ಅದನ್ನು ಬಳಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸಿದ ತಪಾಸಣೆಯಿಂದ ದೃಢಪಟ್ಟಿದೆ. 

ಈ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಬಳಕೆ ಮಾಡದಂತೆ ಇಲಾಖೆಯು 2024ರಲ್ಲಿಯೇ ಆದೇಶ ಹೊರಡಿಸಿದೆ. ಇಷ್ಟಾಗಿಯೂ ಕೆಲ ಹೋಟೆಲ್, ರೆಸ್ಟೊರೆಂಟ್, ಫುಡ್ ಪಾರ್ಕ್, ಬೀದಿಬದಿ ಸೇರಿ ವಿವಿಧೆಡೆ ಅವುಗಳ ಬಳಕೆ ಮುಂದುವರಿದಿದೆ. ಇಲಾಖೆ ಅಧಿಕಾರಿಗಳು ವಿಶೇಷ ಅಭಿಯಾನದಡಿ ರಾಜ್ಯದ ವಿವಿಧೆಡೆ ದಾಳಿ ನಡೆಸಿ, ಗೋಬಿ ಮಂಚೂರಿ ಮತ್ತು ಕಬಾಬ್‌ ಮಾದರಿಗಳನ್ನು ಪ‍್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿದ್ದರು. ಎರಡು ವರ್ಷಗಳಲ್ಲಿ 42 ಕಡೆ ಬಣ್ಣ ಬಳಸುತ್ತಿರುವುದು ದೃಢಪಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಗೋಬಿ ಮಂಚೂರಿ, ಕಬಾಬ್‌ನಂತಹ ತಿನಿಸುಗಳನ್ನು ಸ್ಥಳದಲ್ಲಿಯೇ ಸಿದ್ಧಪಡಿಸಲಾಗುತ್ತದೆ. ಆದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ– 2011ರ ನಿಯಮ 16ರ ಅನ್ವಯ, ಯಾವುದೇ ಕೃತಕ ಬಣ್ಣವನ್ನು ಅವುಗಳಿಗೆ ಉಪಯೋಗಿಸುವಂತಿಲ್ಲ. ಆದರೂ ಅವುಗಳಿಗೆ ಬಳಸಲಾಗುತ್ತಿದ್ದ ‘ರೋಡಾಮಿನ್-ಬಿ’, ‘ಟಾರ್ಟ್ರಾಜಿನ್’ ಮತ್ತು ‘ಸನ್‌ಸೆಟ್ ಯೆಲ್ಲೊ’ದಂತಹ ಕೃತಕ ಬಣ್ಣಗಳು ಕ್ಯಾನ್ಸರ್‌ನಂತಹ ಗಂಭೀರವಾದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದು ವೈದ್ಯಕೀಯ ವಿಶ್ಲೇಷಣೆಯಿಂದ ದೃಢಪಟ್ಟಿದೆ.

ಬೇಡಿಕೆ ಕುಸಿತ: ಗೋಬಿ ಮಂಚೂರಿ ಮತ್ತು ಕಬಾಬ್‌ಗೆ ಕೃತಕ ಬಣ್ಣ ಬಳಕೆ ನಿಷೇಧಿಸಿದ ಬಳಿಕ, ಅವುಗಳಿಗಿದ್ದ ಬೇಡಿಕೆ ಗಣನೀಯವಾಗಿ ಕುಸಿದಿತ್ತು. ಕೆಂಪು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿದ ಕಾರಣ, ಗ್ರಾಹಕರು ಅವುಗಳನ್ನು ತಿನ್ನಲು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಆಹಾರೋದ್ಯಮಿಗಳ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿತ್ತು. ಇದರಿಂದಾಗಿ, ಕೃತಕ ಬಣ್ಣ ಬಳಕೆಯನ್ನು ನಿಲ್ಲಿಸಿದವರಲ್ಲಿ ಕೆಲವರು ಮತ್ತೆ ಬಣ್ಣ ಬಳಸಲು ಪ್ರಾರಂಭಿಸಿದ್ದಾರೆ.

‘ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸದಂತೆ ತಯಾರಕರು, ಮಾರಾಟಗಾರರು ಹಾಗೂ ಉದ್ದಿಮೆದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾಗಿಯೂ ಬಳಸಿದಲ್ಲಿ ಪ್ರಯೋಗಾಲಯ ಪರೀಕ್ಷೆ ನಡೆಸಿ, ದೃಢ ಪ್ರಕರಣಗಳಲ್ಲಿ ದಂಡ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜೈಲು ಶಿಕ್ಷೆ ₹ 10 ಲಕ್ಷ ದಂಡ

ಇಲಾಖೆಯು 2024ರಲ್ಲಿ ಗೋಬಿ ಮಂಚೂರಿ ಹಾಗೂ ಕಬಾಬ್‌ನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಿತ್ತು. ಆಗ ಹಲವು ಮಾದರಿಗಳು ಅಸುರಕ್ಷಿತವೆಂದು ವರದಿ ಬಂದಿತ್ತು.

ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕೃತಕ ಬಣ್ಣಗಳು ಕಂಡುಬಂದಿದ್ದವು. ಆದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ಅಡಿ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದೆ. ಕಾನೂನುಬಾಹಿರವಾಗಿ ಕೃತಕ ಬಣ್ಣ ಬಳಸಿದಲ್ಲಿ ಏಳು ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೆ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.  

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ