
ಚಿಕ್ಕಬಳ್ಳಾಪುರ | ಸರ್ಕಾರಿ ಜಾಗ: ಖಾಸಗಿಯವರಿಗೆ ‘ಇ–ಖಾತೆ’
ಚಿಕ್ಕಬಳ್ಳಾಪುರ: ಇ–ಖಾತೆ ಅಧ್ವಾನಗಳು, ಭ್ರಷ್ಟಾಚಾರ ಸೇರಿದಂತೆ ನಾನಾ ಕಾರಣಕ್ಕೆ ಚಿಕ್ಕಬಳ್ಳಾಪುರ ನಗರಸಭೆ ಆಗಾಗ್ಗೆ ಸದ್ದು ಮಾಡುತ್ತದೆ. ಈಗ ಮತ್ತೆ ಇಂತಹದ್ದೇ ಪ್ರಕರಣ ನಗರಸಭೆಯಲ್ಲಿ ನಡೆದಿದೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೆ ಸಂಖ್ಯೆ 109ರಲ್ಲಿ 97,130.30 ಚದುರ ಮೀಟರ್ (ಸುಮಾರು 24 ಎಕರೆ) ಜಾಗಕ್ಕೆ ಇ–ಖಾತೆ ನೀಡಲಾಗಿದೆ. ಇ–ಖಾತೆ ನೀಡುವಾಗ 29ನೇ ವಾರ್ಡ್ ಎಂದು ನಮೂದಿಸಲಾಗಿದೆ. ಸರ್ವೆ ನಂಬರ್ ವ್ಯಾಪ್ತಿಯ ಜಮೀನುಗಳಿಗೆ ನಗರಸಭೆ ಇ–ಖಾತೆ ನೀಡುವುದು ನಿಯಮಗಳ ಉಲ್ಲಂಘನೆಯೂ ಆಗುತ್ತದೆ.
ಸರ್ವೆ ನಂ 109ರಲ್ಲಿ 70 ಎಕರೆ ಜಮೀನಿದ್ದು, ಪಹಣಿಗಳಲ್ಲಿ ಸರ್ಕಾರಿ ಖರಾಬು ಎಂದು ನಮೂದಾಗಿದೆ. ನಗರಸಭೆಯಿಂದ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ಇದೇ ಸರ್ವೆ ನಂಬರ್‌ನಲ್ಲಿ 97,130.30 ಚದುರ ಮೀಟರ್ ಜಾಗಕ್ಕೆ ‘ಇ’ ಖಾತೆ ಸೃಜನೆಯಾಗಿದೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲ. ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿ. ಕೆಲ ದಿನಗಳ ಹಿಂದೆ ನಗರಸಭೆಗೆ ಭೇಟಿ ನೀಡಿ ಅಧ್ವಾನಗಳ ವಿರುದ್ಧ ಕೆಂಡಕಾರಿದ್ದರು. ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದರು. ಆದರೆ ಅವರ ಎಚ್ಚರಿಕೆಗಳು, ಶಿಸ್ತಿನ ಮಾತುಗಳನ್ನು ನಗರಸಭೆ ಅಧಿಕಾರಿಗಳು ಗಂಭೀರವಾಗಿಯೇ ಪರಿಗಣಿಸಿಲ್ಲ.
ಭರಣಿ ವಿ. ಎಂಬುವವರಿಗೆ 97,130 ಚದುರ ಮೀಟರ್ ಜಾಗವನ್ನು ‘ಇ–ಖಾತೆ’ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ನಗರಸಭೆಯ ನಡೆಗಳ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ‘ಅಕ್ರಮ’ದ ಚರ್ಚೆಗಳು ಜೋರಾಗಿವೆ.
ಇ–ಖಾತೆಯಲ್ಲಿರುವ ಮಾಹಿತಿ ಪ್ರಕಾರ ಉತ್ತರಕ್ಕೆ ಚೆಕ್ಕು ಬಂದಿ ರೈಲ್ವೆ ಇಲಾಖೆ ಆಸ್ತಿ, ರೈಲ್ವೆ ಹಳಿ, ಯಾರ್ಡ್ ಡ್ರೈನೇಜ್, ಶಿಡ್ಲಘಟ್ಟ ರಸ್ತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎಂದು ನಮೂದಾಗಿದೆ. ಪೂರ್ವಕ್ಕೆ ಸರ್ವೆ ನಂ 106, 107, 108 ಹಾಗೂ 109, ಪಶ್ಚಿಮಕ್ಕೆ 100 ಅಡಿ ಸರ್ವಿಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 44 ಮತ್ತು ದಕ್ಷಿಣಕ್ಕೆ ಮಿನಿ ಬೆಟಾನಿಕಲ್ ಉದ್ಯಾನ 70 ಎಕರೆ ಜಾಗ ಎಂದು ನಮೂದಾಗಿದೆ. ‘ಇ–ಖಾತೆ’ ಯಲ್ಲಿ ಜಮೀನು ಮಾಲೀಕರು ಎಂದು ಭರಣಿ ಅವರ ಭಾವಚಿತ್ರ ಹಾಗೂ ಜಿಪಿಎಸ್ ಭಾವಚಿತ್ರವೂ ಇದೆ.
2027ರ ಏಪ್ರಿಲ್‌ನಲ್ಲಿ ತೆರಿಗೆ ಸಂದಾಯ: ಇ–ಖಾತೆ ನೀಡಲು ಚಿಕ್ಕಬಳ್ಳಾಪುರ ನಗರಸಭೆಗೆ 8,24,087 ಆಸ್ತಿತೆರಿಗೆಯನ್ನು (ರಸೀದಿ ಸಂಖ್ಯೆ 928) ಪಾವತಿಸಲಾಗಿದೆ ಎಂದು ಇ–ಖಾತೆಯಲ್ಲಿ ನಮೂದಾಗಿದೆ. ಅಚ್ಚರಿ ಎನ್ನುವಂತೆ ಇ–ಖಾತೆಯಲ್ಲಿ ತೆರಿಗೆ ಸಂದಾಯದ ದಿನಾಂಕ 2027ರ ಏ.6ರಂದು ನಮೂದಾಗಿದೆ. ಅಣಕನೂರು ಗ್ರಾಮ ವ್ಯಾಪ್ತಿಯ ಜಾಗಕ್ಕೆ ನಗರಸಭೆ ಆಸ್ತಿ ತೆರಿಗೆ ಪಾವತಿಸಿಕೊಂಡಿದೆ!
ನಗರಸಭೆ ಮಾಜಿ ಸದಸ್ಯರಿಂದ ದೂರು: ಇ–ಖಾತೆ ಸೃಜನೆ, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನಿಯಮಗಳ ಉಲ್ಲಂಘನೆ ವಿಚಾರವಾಗಿ ನಗರಸಭೆ ಪೌರಾಯುಕ್ತರ ವಿರುದ್ಧ ಜಿಲ್ಲಾಧಿಕಾರಿಗೆ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕರಿಗೆ ನಗರಸಭೆ ಮಾಜಿ ಸದಸ್ಯ ಮಹಮದ್ ಸಾದಿಕ್ ದೂರು ನೀಡಿದ್ದಾರೆ.
‘ಪೌರಾಯುಕ್ತರು ಅಡಳಿತಾಧಿಕಾರಿ ಅವಧಿಯಲ್ಲಿ ಬಹಳಷ್ಟು ಕೆಲಸಗಳನ್ನು ಕಾನೂನು ಮೀರಿ ಮಾಡಿದ್ದಾರೆ. ಇ ಖಾತೆ ನೀಡಿರುವ ಜಮೀನಿನ ಒಂದು ಎಕರೆ ಇಂದಿನ ಮಾರುಕಟ್ಟೆ ಮೌಲ್ಯ ₹5 ಕೋಟಿಗೂ ಅಧಿಕವಿದೆ. ಇ–ಖಾತೆ ನೀಡುವ ವಿಚಾರವಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಇದೆ. ಇ–ಖಾತೆ ಆಧಾರದ ಮೇಲೆ ಶಿಡ್ಲಘಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಪತ್ರ ಸಹ ಮಾಡಿಸಿದ್ದಾರೆ. ಇದು ದಾಖಲೆಗಳನ್ನು ಸೃಷ್ಟಿಸುವ ಕಾರ್ಯವಾಗಿದೆ’ ಎಂದು ಸಾದಿಕ್ ದೂರಿನಲ್ಲಿ ತಿಳಿಸಿದ್ದಾರೆ.
‘ತಮ್ಮ ಕಚೇರಿಯ ನೋಂದಣಿ ಪತ್ರದ ಸಂಖ್ಯೆ ಎಸ್‌ಡಿಜಿ–1–01867–2026–27 ದಿನಾಂಕ 23–6–2026ರಂದು ನೋಂದಣಿಗಾಗಿ ಅರ್ಜಿದಾರರು ಸಲ್ಲಿಸಿರುವ ಎಲ್ಲ ದಾಖಲೆಗಳು (ಇ–ಖಾತೆ, ಆಧಾರ್ ಕಾರ್ಡ್, ಹಣ ಸಂದಾಯದ ರಸೀದಿ, ಬ್ಯಾಂಕ್ ಡಿಡಿ ಇತ್ಯಾದಿ ವಿವರ) ಮಾಹಿತಿಯನ್ನು ದೃಢೀಕರಿಸಿ ನೀಡಬೇಕು ಎಂದು ಶಿಡ್ಲಘಟ್ಟ ಉಪನೋಂದಣಾಧಿಕಾರಿ ಅವರಿಗೆ ಮಹಮದ್ ಸಾಧಿಕ್ ಮಾಹಿತಿ ಹಕ್ಕಿನಡಿ ಮನವಿ ಸಲ್ಲಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ‘ಎ’, ಮತ್ತು ‘ಬಿ’ ಖಾತೆ ನೀಡುವ ವೇಳೆ ಕಣ್ತಪ್ಪಿ 97,130.30 ಚದರ ಮೀಟರ್ ಜಾಗಕ್ಕೆ ಇ–ಖಾತೆ ನೀಡಲಾಗಿದೆ ಎನ್ನುವ ಸಬೂಬು ನಗರಸಭೆ ಅಧಿಕಾರಿಗಳು ಹೇಳಿದರೂ, ಕನಿಷ್ಠ ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸದೆಯೇ ಇ–ಖಾತೆ ನೀಡಿದರೆ ಎನ್ನುವ ಅನುಮಾನಗಳು ಮೂಡಿವೆ.
ಇ–ಖಾತೆ ನೀಡಲು ಸಕ್ಷಮ ಪ್ರಾಧಿಕಾರದ ಅನುಮೋದಿತ ನಕ್ಷೆ ಅಗತ್ಯ. ತೆರಿಗೆ ಸಂದಾಯದ ರಸೀದಿ, ಚೆಕ್ಕುಬಂದಿ ಹೀಗೆ ಯಾವುದೇ ವಿವರಗಳನ್ನು ಕನಿಷ್ಠವಾಗಿಯೂ ಪರಿಶೀಲಿಸದೆ ಖಾತೆ ನೀಡಿದರೆ ಅಕ್ರಮಗಳು ನಡೆದಿವೆಯೇ ಎನ್ನುವ ಚರ್ಚೆ ಚಿಕ್ಕಬಳ್ಳಾಪುರ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಯೋಜನಾ ಕೋಶದ ನಿರ್ದೇಶಕರಿಗೆ ದೂರು ನೀಡಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ಮಹಮದ್ ಸಾದಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.
24 ಎಕರೆ ₹ 150 ಕೋ ಬೆಲೆ ಬಾಳುತ್ತದೆ. ಕೋಟ್ಯಂತರ ರೂಪಾಯಿ ಲಂಚ ಪಡೆದು ‘ಇ–ಖಾತೆ’ ಮಾಡಿದ್ದಾರೆ ಎನ್ನುವ ಮಾತು ನಾಗರಿಕ ವಲಯದಲ್ಲಿ ಇದೆ. ಕಾನೂನು ರೀತಿ ಆಡಳಿತಾಧಿಕಾರಿ 3ರಿಂದ 5 ಎಕರೆ ಜಮೀನು ಮಂಜೂರು ಮಾಡಲು ಅವಕಾಶವಿದೆ. ಅದಕ್ಕೂ ಮೀರಿದ ಜಮೀನನ್ನು ಮಂಜೂರು ಆಗಬೇಕಾದರೆ ಸಚಿವ ಸಂಪುಟದಲ್ಲಿ ಅನುಮೋದನೆ ಆಗಬೇಕು. ಆದರೆ, ಪೌರಾಯುಕ್ತರು ಚಿಕ್ಕಬಳ್ಳಾಪುರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ನಡೆಯುತ್ತಲೂ ಇವೆ. ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ತಕ್ಷಣವೇ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದರು.
‘3 ದಿನದಲ್ಲಿ ವರದಿ ಸಲ್ಲಿಸಿ’
ಇ–ಖಾತೆಗೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಕೈಗೊಂಡಿರುವ ಪ್ರಕ್ರಿಯೆ ಬಗ್ಗೆ ಸಂಪೂರ್ಣ (ಅರ್ಜಿದಾರರು ನೀಡಿರುವ ದಾಖಲೆಗಳು, ಕಚೇರಿ ಟಿಪ್ಪಣಿ, ಕಂದಾಯ ವಿವರ, ಶುಲ್ಕದ ವಿವರ) ಕಡತಗಳನ್ನು ದೃಢೀಕರಿಸಿ ನೀಡಬೇಕು ಎಂದು ಮಹಮದ್ ಸಾದಿಕ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ಕೋರಿದ್ದರು.
ಈ ಮನವಿ ಪರಿಗಣಿಸಿ ‘ಈ ಎಲ್ಲ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಂಡು ಮನವಿದಾರರು ಕೋರಿರುವ ಮಾಹಿತಿಯನ್ನು ಮೂರು ದಿನಗಳ ಒಳಗೆ ನೀಡಿ ಈ ಕಚೇರಿಗೆ ವರದಿ ಸಲ್ಲಿಸಿ’ ಎಂದು ಯೋಜನಾ ನಿರ್ದೇಶಕರು ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಪಿಐಡಿ ನಂಬರ್ ಬ್ಲಾಕ್ ಮಾಡಿಸಿದ್ದೇವೆ’
‘ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಇ–ಖಾತೆ ಆಗಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆ ದೂರು ಪರಿಶೀಲಿಸಿದಾಗ ಖಾತೆ ಪಡೆದವರು ‘ಇ’ ಲಾಗಿನ್ ಸಿಜಿಟನ್ ಪೋರ್ಟಲ್ ಮೂಲಕ ‘ಇ–ಖಾತೆ’ಗೆ ಅರ್ಜಿ ಸಲ್ಲಿಸಿದ್ದಾರೆ. ಖಾತೆಗೆ ಮ್ಯಾನುವಲ್ ಕಡತ ಸಲ್ಲಿಸಿಲ್ಲ. ಯಾವುದೇ ದಾಖಲೆಗಳನ್ನು ನೀಡಿಲ್ಲ. ಸಾವಿರಾರು ‘ಎ’ ಮತ್ತು ‘ಬಿ’ ಖಾತೆ ನೀಡುವಾಗ ವ್ಯತ್ಯಾಸ ಆಗಿರಬಹುದು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ತಿಳಿಸಿದ್ದಾರೆ.
ಈಗಾಗಲೇ ಪಿಐಡಿ ನಂಬರ್ ಬ್ಲಾಕ್ ಮಾಡಲು ಸಹ ಹೇಳಿದ್ದೇವೆ. ಮುಂದೆ ಯಾವ ಕ್ರಮಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ ಎಂದಿದ್ದಾರೆ.
‘ಜಿಲ್ಲಾಧಿಕಾರಿಗಳೇ ನಗರಸಭೆಯತ್ತ ಗಮನ ನೀಡಿ’
ಜಿಲ್ಲಾಧಿಕಾರಿ ಜಿ.ಪ್ರಭು, ಕಂದಾಯ ಇಲಾಖೆಯ ಹಕ್ಕುಪತ್ರಗಳನ್ನು ನೀಡುವಲ್ಲಿ ರಾಜ್ಯ ಮಟ್ಟದಲ್ಲಿ ದಾಖಲೆ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲೂ ಅವರ ಕಾರ್ಯಗಳ ಬಗ್ಗೆ ಮೆಚ್ಚುವೆ ವ್ಯಕ್ತವಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಅವರು ನಗರಸಭೆಯಲ್ಲಿನ ಭ್ರಷ್ಟಾಚಾರ, ಹಣ ನೀಡದೆ ಕೆಲಸಗಳು ಆಗದಿರುವ ಬಗ್ಗೆ ಗಮನವಹಿಸಬೇಕು. ಅವರು ಆಗಾಗ್ಗೆ ನಗರಸಭೆಗೆ ಭೇಟಿ ನೀಡಬೇಕು ಎನ್ನುವುದು ನಾಗರಿಕರ ಆಗ್ರಹವೂ ಆಗಿದೆ. ಮೇ ನಲ್ಲಿ ಜಿಲ್ಲಾಧಿಕಾರಿ ನಗರಸಭೆಗೆ ಏಕಾಏಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಸಾರ್ವಜನಿಕರು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ್ದರು. ಆಗ ಜಿಲ್ಲಾಧಿಕಾರಿ ಅವರೇ ಅಧ್ವಾನಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಆ ಭೇಟಿಯ ಪರಿಣಾಮವಾಗಿ ನಗರಸಭೆ ಪ್ರಥಮ ದರ್ಜೆ ಸಹಾಯಕ ರಾಜೇಶ್ ಎಂ., ಮತ್ತು ಕರವಸೂಲಿಗಾರ ರಾಮಾಂಜಿನಪ್ಪ ಅವರನ್ನು ಕೆಲಸದಿಂದ ಅಮಾನತುಗೊಳಿಸಿದ್ದರು.
ಸಬೂಬು ಹೇಳುವ ಅಧಿಕಾರಿಗಳು
ಕೇಸ್ ವರ್ಕರ್, ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿ, ನಗರಸಭೆ ಪೌರಾಯುಕ್ತರು ಬೆರಳಚ್ಚು ನೀಡಿದರೆ ಮಾತ್ರ ‘ಇ–ಖಾತೆ’ ಸೃಜನೆ ಆಗುತ್ತದೆ. ಅಧಿಕಾರಿಗಳು ಇಂತಿಷ್ಟು ಹಣ ಎಂದು ತೆರಿಗೆಯ ರಸೀದಿ ಹಾಕಿದರೆ ಮಾತ್ರ ತೆರಿಗೆ ಪಾವತಿ ಸಾಧ್ಯ. ಅಲ್ಲದೆ ಈ ಮೇಲಿನ ನಾಲ್ಕು ಮಂದಿಯ ಲಾಗಿನ್ ಸಹ ಬೇಕು. ಈ ಎಲ್ಲ ನಡೆದ ಮೇಲೆಯೇ ಇ–ಖಾತೆ ಆಗುತ್ತದೆ. ಇಷ್ಟೆಲ್ಲ ಆದರೂ ನಗರಸಭೆ ಅಧಿಕಾರಿಗಳು ಮಾತ್ರ ಕಣ್ತಪ್ಪಿ ಆಗಿದೆ. ಗಮನಕ್ಕೆ ಬಂದಿಲ್ಲ ಎನ್ನುವ ಸಬೂಬು ಹೇಳುವರು.
ದಾಖಲೆಗಳು ಸರಿ ಇದ್ದರೂ ಚಿಕ್ಕಬಳ್ಳಾಪುರ ನಗರಸಭೆಯಿಂದ ಇ–ಖಾತೆಗಳನ್ನು ಮಾಡಿಸಿಕೊಳ್ಳಲು ನಾಗರಿಕರು ಕಚೇರಿಗೆ ಅಲೆಯುವರು. ಹಣ ಬಿಚ್ಚದೆ ಖಾತೆಗಳು ಆಗುವುದಿಲ್ಲ ಎನ್ನುವ ದೂರು ವ್ಯಾಪಕವಾಗಿಯೇ ಇದೆ. ಆದರೆ 97 ಸಾವಿರ ಚದುರ ಮೀಟರ್ ಜಾಗದ ಖಾತೆ ಆಗಿರುವುದಕ್ಕೆ ಈಗ ಕಾರಣಗಳನ್ನು ಹುಡುಕುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-16-387768076