
ಸೇಡಂ: ಮೋತಕಪಲ್ಲಿ ದೇವಾಲಯದಲ್ಲಿ ಅರ್ಚಕರ ಗೊಂದಲ
ಸೇಡಂ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮೋತಕಪಲ್ಲಿ ಗ್ರಾಮದ ಬಲಭೀಮಸೇನ ದೇವಾಲಯದ ಅರ್ಚಕರ ಕುರಿತು ಸರ್ಕಾರ ಈಚೆಗೆ ಹೊರಡಿಸಿದ ಆದೇಶವು ಬ್ರಾಹ್ಮಣ ಹಾಗೂ ಹೂಗಾರ ಪರಿವಾರಗಳ ನಡುವೆ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.
ಬ್ರಾಹ್ಮಣ ಸಮಾಜದ ಎಂಟು ಕುಟುಂಬದವರನ್ನು ಬಲಭೀಮಸೇನ ದೇವಾಲಯದ ಅರ್ಚಕರು ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಇದುವರೆಗೂ ದೇವಸ್ಥಾನದ ಪೂಜಾ ಕೈಂಕರ್ಯಗಳಲ್ಲಿ ಸಮಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಹೂಗಾರ ಪರಿವಾರದವರಲ್ಲಿ ಅಸಮಾಧಾನ ಮೂಡಿಸಿದೆ.
ಇದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯವಾಗಿದೆ. ಆಗಸ್ಟ್ 14ರಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬ್ರಾಹ್ಮಣ ಸಮುದಾಯದ ಎಂಟು ಜನರನ್ನು ತಲಾ ಒಂದೊಂದು ವರ್ಷ ಅರ್ಚಕ ಕಾರ್ಯ ನಿರ್ವಹಿಸುವಂತೆ ಹಾಗೂ ಅರ್ಚಕರಿಗೆ ಸಂದಾಯವಾಗಬೇಕಾದ ಉಪಲಬ್ಧಗಳನ್ನು ನೀಡುವಂತೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರಿಗೆ ಆದೇಶಿಸಿದ್ದಾರೆ. ಅದರಂತೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರು ನೂರಾರು ಪೊಲೀಸರೊಂದಿಗೆ ಶುಕ್ರವಾರ ತೆರಳಿ ಹೂಗಾರ ಪರಿವಾರದವರಿಗೆ ಅರ್ಚಕ ಕಾರ್ಯದ ಕುರಿತು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಅರ್ಚಕ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ತಹಶೀಲ್ದಾರ್ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತರನ್ನೊಳಗೊಂಡ ತಂಡವು ಹೂಗಾರ ಮತ್ತು ಬ್ರಾಹ್ಮಣ ಸಮುದಾಯದವರಿಂದ ದಾಖಲೆಗಳನ್ನು ಸ್ವೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಆಧರಿಸಿ ಸರ್ಕಾರ ಆಗಸ್ಟ್‌ನಲ್ಲಿ ಹೊರಡಿಸಿದ ಆದೇಶ ಪಾಲಿಸುವಂತೆ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರು ಹೂಗಾರ ಪರಿವಾರದವರಿಗೆ ಸೂಚಿಸಿದ್ದಾರೆ.
ದೇವಸ್ಥಾನದಲ್ಲಿ ಶುಕ್ರವಾರ ನೂರಾರು ಪೊಲೀಸರು ಆಗಮಿಸಿದ್ದರಿಂದ ಗ್ರಾಮದಲ್ಲಿ ಹಾಗೂ ಭಕ್ತರಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
‘ಹೊಟ್ಟೆ ಮೇಲೆ ಹೊಡೆಯಬೇಡಿ’
‘ತಲೆತಲಾಂತರಗಳಿಂದ ನಾವು ಮತ್ತು ಬ್ರಾಹ್ಮಣ ಸಮುದಾಯದವರು ದೇವಸ್ಥಾನದಲ್ಲಿ ಕೆಲಸ ಮಾಡುತ್ತ ತಟ್ಟೆ ಕಾಸಿನಲ್ಲಿ ಸಮಪಾಲು ಪಡೆದುಕೊಳ್ಳುತ್ತಿದ್ದೆವು. ಆದರೆ, ಕಳೆದ ವರ್ಷದಿಂದ ನೀವು ಮಾಡುತ್ತಿರುವ ಕೆಲಸದ ದಾಖಲೆಗಳನ್ನು ನೀಡುವಂತೆ ಹೇಳುತ್ತ ನಮ್ಮನ್ನು ದೇವಾಲಯದಿಂದ ದೂರವಿಡಲಾಗುತ್ತಿದೆ. 12 ಕುಟುಂಬಗಳು ಏಕಾಏಕಿ ಬೀದಿಗೆ ಬರುವಂತಹ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ನಮ್ಮ ಕೆಲಸಕ್ಕೆ ಸೂಕ್ತ ಸ್ಥಾನ ನೀಡಬೇಕು’ ಎಂದು ಹೂಗಾರ ಪರಿವಾರದ ವಿಜಯನರಸಿಂಹ, ಶಂಕರ ಹೂಗಾರ, ರಮೇಶ ಹೂಗಾರ, ಭೀಮಾಶಂಕರ ಹೂಗಾರ, ಶ್ರೀನಿವಾಸ ಹೂಗಾರ, ನರೇಶ ಹೂಗಾರ, ಪವನ ಹೂಗಾರ, ಅಶೋಕ ಹೂಗಾರ ಒತ್ತಾಯಿಸಿದರು.
‘ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ’ ಎಂದು ಬ್ರಾಹ್ಮಣ ಸಮಾಜದ ಜಯತೀರ್ಥ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾಣಿಕೆ ವಿಚಾರಕ್ಕೆ ವಿವಾದ?
ದೇವಸ್ಥಾನದಲ್ಲಿ ಬ್ರಾಹ್ಮಣ ಸಮಾಜದವರು ಪೂಜೆ ಕಾರ್ಯ ನಡೆಸಿದರೆ, ಹೂಗಾರ ಪರಿವಾರದವರು ಗರ್ಭಗುಡಿಯಲ್ಲಿ ದೀಪ ಹಚ್ಚುವುದು, ದೇವಸ್ಥಾನ ತೆರೆಯುವುದು, ಬರುವ ಭಕ್ತರಿಗೆ ತೀರ್ಥ ಕೊಡುವುದು, ಭಸ್ಮ ಹಚ್ಚುವುದು ಸೇರಿ ವಿವಿಧ ಕೆಲಸಗಳನ್ನು ಮಾಡಿಕೊಂಡು ಬರುತಿದ್ದರು. ತಲೆಮಾರುಗಳಿಂದ ಇದು ನಡೆದುಕೊಂಡು ಬಂದಿದೆ. ಆದರೆ, ತಟ್ಟೆ ಕಾಸಿನ (ಕಾಣಿಕೆ) ವಿಚಾರಕ್ಕೆ ಸಂಬಂದಿಸಿದಂತೆ ಬ್ರಾಹ್ಮಣ ಸಮುದಾಯ ಹೂಗಾರರಿಗೆ ಕೂಡುವ ವಿಚಾರದಲ್ಲಿ ಗದ್ದಲ ಉಂಟಾಗಿತ್ತು. ಇದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಗಮನಕ್ಕೂ ಬಂದಿತ್ತು ಎನ್ನಲಾಗಿದೆ.