
ಲಕ್ಷ್ಮೇಶ್ವರ| ಕಲಾ ಕಾಲೇಜು ಸರ್ಕಾರಕ್ಕೆ ಹಸ್ತಾಂತರ; ದಶಕದ ಪ್ರಯತ್ನಕ್ಕೆ ಫಲ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಪದವಿ ಕಲಾ ಮಹಾವಿದ್ಯಾಲಯವನ್ನು ತನ್ನ ಅಧೀನಕ್ಕೆ ಪಡೆಯಲು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದ್ದು, ದಶಕದಿಂದ ನಡೆದಿದ್ದ ಹಸ್ತಾಂತರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ.
ಪುರಸಭೆ ಕಲಾ ಮಹಾವಿದ್ಯಾಲಯವು 1967ರಲ್ಲಿಯೇ ಪ್ರಾರಂಭವಾಗಿದೆ. ಇದನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬ ಪ್ರಯತ್ನ ಹಲವು ವರ್ಷಗಳಿಂದಲೂ ನಡೆದಿತ್ತು. ಈಗ ಅದು ಈಡೇರಿದೆ.
ಸರ್ಕಾರದ ಅಧಿಕೃತ ಆದೇಶ ಪ್ರತಿ ಕೈ ಸೇರುತ್ತಿದ್ದಂತೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ನೇತೃತ್ವದಲ್ಲಿ ಮುಖಂಡರು, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಗಡ್ಡದೇವರಮಠ, ‘ಪುರಸಭೆ ಕಲಾ ಮಹಾವಿದ್ಯಾಲಯವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಹತ್ತು ವರ್ಷಗಳಿಂದ ಪ್ರಯತ್ನಗಳು ನಡೆದಿದ್ದವು. ಈ ನಿಟ್ಟಿನಲ್ಲಿ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಹಾಗೂ ಈಗಿನ ಶಾಸಕ ಡಾ.ಚಂದ್ರು ಲಮಾಣಿ ವಿಶೇಷ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ’ ಎಂದರು.
ಪುರಸಭೆಯ ವತಿಯಿಂದ ಆಡಳಿತ ನಡೆಸುವುದು ಸಾಧ್ಯವಾಗದೇ ಇರುವುದರಿಂದ ಹಾಗೂ ಲಕ್ಷೇಶ್ವರ ಪ್ರಸ್ತುತ ತಾಲ್ಲೂಕು ಕೇಂದ್ರ ಆಗಿರುವುದರಿಂದ ಕಾಲೇಜಿನಲ್ಲಿ ಹೊಸ ಹೊಸ ಕೋರ್ಸ್‍ಗಳನ್ನು ಆರಂಭಿಸಬೇಕಾಗಿದೆ. ಕಾಲೇಜಿನ ಚರ ಮತ್ತು ಸ್ಥಿರಾಸ್ತಿ ಸಮೇತವಾಗಿ ಕರ್ನಾಟಕ ಸರ್ಕಾರದ ಅಧೀನಕ್ಕೆ ಬಿಟ್ಟುಕೊಡಲು ಆಡಳಿತ ಮಂಡಳಿಯಿಂದ ಠರಾವು ಮಾಡಿಕೊಡಲಾಗಿತ್ತು. ಇನ್ನು ಮುಂದೆ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಕಾರ್ಯಾರಂಬಿಸಲಿದ್ದು, ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗಲಿದೆ’ ಎಂದು ಹೇಳಿದರು.
ಜಿ.ವಿ. ಪಾಟೀಲ, ಪದ್ಮರಾಜ ಪಾಟೀಲ, ಪ್ರಾಚಾರ್ಯ ಎನ್.ವಿ. ನಾಗಶೆಟ್ಟಿ, ಶರಣು ಗೋಡಿ, ಮಹೇಶ ಲಮಾಣಿ(ಅಕ್ಕಿಗುಂದ), ಸೋಮಣ್ಣ ಬೆಟಗೇರಿ, ಇದ್ದರು.