ಇನ್ನಾದರೂ ಸರಿದಾರಿಗೆ ಬರುವುದೇ ಡಿಸಿಸಿ ಬ್ಯಾಂಕ್‌?

ಇನ್ನಾದರೂ ಸರಿದಾರಿಗೆ ಬರುವುದೇ ಡಿಸಿಸಿ ಬ್ಯಾಂಕ್‌?

ಇನ್ನಾದರೂ ಸರಿದಾರಿಗೆ ಬರುವುದೇ ಡಿಸಿಸಿ ಬ್ಯಾಂಕ್‌?

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬರೋಬ್ಬರಿ 15 ತಿಂಗಳ ಬಳಿಕ ಚುನಾವಣೆ ನಡೆದಿದ್ದು, ಕೊನೆಗೂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ಜಿಲ್ಲೆಯ ರೈತರು ಹಾಗೂ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಬೇಕಾದ ಈ ಬ್ಯಾಂಕ್‌ ಈಗ ಸಾಲ ವಿತರಣೆ ಹಾಗೂ ವಸೂಲಿ ವಿಚಾರದಲ್ಲಿ ಹಿಂದೆ ಬಿದ್ದಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ಸಾಲ ಸಿಗದೆ ರೈತರು, ಮಹಿಳೆಯರು ಮೀಟರರ್‌ ಬಡ್ಡಿ ದಂಧೆಗೆ ಸಿಲುಕಿದ್ದಾರೆ. ಅಲ್ಲದೇ, ಹಣಕಾಸಿನ ದುರುಪಯೋಗ ಸಂಬಂಧ ರಾಶಿಗಟ್ಟಲೇ ದೂರು ದಾಖಲಾಗಿವೆ. ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದ್ದು ತಡೆಯಾಜ್ಞೆ ತರಲಾಗಿದೆ. ನಕಲಿ ಸಂಘದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಆರೋಪಗಳಿವೆ. ಕೆಲ ಅಧಿಕಾರಿಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡ ಕರ್ತವ್ಯಲೋಪವೆಸಗಿರುವ ಪ್ರಕರಣಗಳಿವೆ. ಹಲವು ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹಲವು ಠೇವಣಿದಾರರು ತಮ್ಮ ಹಣ ಹಿಂಪಡೆದುಕೊಂಡಿದ್ದಾರೆ. ಜೊತೆಗೆ ರಾಜಕೀಯ ದಾಳವಾಗಿ ಪರಿಣಮಿಸಿದೆ.

ಅವ್ಯವಸ್ಥೆಯ ಗೂಡಾಗಿರುವ ಈ ಬ್ಯಾಂಕ್‌ ಹೊಸ ಆಡಳಿತದಲ್ಲಾದರೂ ಸರಿದಾರಿಗೆ ಬರುವುದು ಎಂಬುದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಮಹಿಳೆಯರ ಪ್ರಶ್ನೆಯಾಗಿದೆ.

‘ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ವಿತರಿಸಿದ 500 ಕಡತಗಳೇ ನಾಪತ್ತೆಯಾಗಿವೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ಕೇಳಿದರೆ ಅವರು ರಜೆ ಹಾಕಿ ಪರಾರಿಯಾಗುತ್ತಾರೆ. ಬ್ಯಾಂಕ್‌ 10 ವರ್ಷಗಳ ಹಿಂದಕ್ಕೆ ಹೋಗುತ್ತಿದ್ದು, ಅದಕ್ಕೆ ಯಾರು ಹೊಣೆ?’ ಎಂಬುದಾಗಿ ಈಗ ಬ್ಯಾಂಕ್‌ನ ನೂನತ ‘ಅಧಿಪತಿ’ ಆಗಿರುವ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ 2025ರ ನವೆಂಬರ್‌ನಲ್ಲಿ ಪ್ರಶ್ನಿಸಿದ್ದರು.

‘ರೈತರು, ಬಡ ಮಹಿಳೆಯರ ಹೆಸರಿನಲ್ಲಿ ಹಣ ನುಂಗಿದವರಿಗೆ ಬರಬಾರದ ರೋಗ ಬರಲಿ. ರೈತರು, ತಾಯಂದಿರಿಗೆ ಮೋಸ ಮಾಡಿದವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ. ಬ್ಯಾಂಕ್‌ ಸರಿಪಡಿಸುವ ಪ್ರಯತ್ನವನ್ನು ನಿರ್ದೇಶಕನಾಗಿ ನಾನು ಪ್ರಾಮಾಣಿಕವಾಗಿ ಮಾಡುವೆ’ ಎಂದು ಹೇಳಿದ್ದ ಅವರೇ ಈಗ ಅಧ್ಯಕ್ಷರು.

ಹೀಗಾಗಿ, ಬ್ಯಾಂಕ್‌ ಅನ್ನು ಕಳಂಕಗಳಿಂದ ಹೊರತಂದು ರೈತರ ಹಾಗೂ ಮಹಿಳೆಯರ ಸ್ನೇಹಿ ಆಗಿಸುವ‌ ಜವಾಬ್ದಾರಿ ಹಾಗೂ ದೊಡ್ಡ ಸವಾಲು ಕೊತ್ತೂರು ಮಂಜುನಾಥ್‌ ಮುಂದೆ ಇದೆ. ಜೊತೆಗೆ ಉಪಾಧ್ಯಕ್ಷರಾಗಿರುವ ಚಿಕ್ಕಬಳ್ಳಾಪುರದ ಮೋಹನ್‌ ರೆಡ್ಡಿ ಹಾಗೂ ಇನ್ನುಳಿದ ನಿರ್ದೇಶಕರ ಮುಂದೆ ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ (ನಾಮನಿರ್ದೇಶಿತ ಸದಸ್ಯ), ಕೆ.ವೈ.ನಂಜೇಗೌಡ, ಎಸ್‌.ಎನ್‌.ಸುಬ್ಬಾರೆಡ್ಡಿ (ನಿರ್ದೇಶಕ), ಪುಟ್ಟಸ್ವಾಮಿಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬಹಳ ಆಸಕ್ತಿ ತೋರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತಿದ್ದರು. ಹೀಗಾಗಿ, ದಾರಿತಪ್ಪಿರುವ ಬ್ಯಾಂಕ್‌ ಅನ್ನು ಸರಿದಾರಿಗೆ ತರುವ ಹೊಣೆ ಅವರ ಮುಂದೆಯೂ ಇದೆ.

2023ರ ನ.17ರಂದು ಬ್ಯಾಲಹಳ್ಳಿ ಎಂ.ಗೋವಿಂದಗೌಡ ನೇತೃತ್ವದ ಡಿಸಿಸಿ ಬ್ಯಾಂಕ್‌ನ ಹಿಂದಿನ ಆಡಳಿತ ಮಂಡಳಿ ಅವಧಿ ಮುಗಿದಿತ್ತು. ನಂತರ ಆಡಳಿತಾಧಿಕಾರಿ ನೇಮಿಸಲಾಯಿತು. 2025ರ ಮೇ 28ರಂದು ಹೊಸ ಆಡಳಿತ ಮಂಡಳಿಯ 18 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅದಾಗಿ 15 ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದೆ.

ಈಗ ಈ ಬ್ಯಾಂಕ್‌ನಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರೇ (ಕೊತ್ತೂರು, ನಾರಾಯಣಸ್ವಾಮಿ, ಸುಬ್ಬಾರೆಡ್ಡಿ, ರೂಪಕಲಾ) ನಿರ್ದೇಶಕರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇರುವುದರಿಂದ ಇವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ.

ಈ ನಿಟ್ಟಿನಲ್ಲಿ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕೊತ್ತೂರು, ಎಸ್‌.ಎನ್‌.ನಾರಾಯಣಸ್ವಾಮಿ ಮಾತು ಭರವಸೆ ಹುಟ್ಟಿಸಿವೆ. ಮತ್ತೆ ಡಿಸಿಸಿ ಬ್ಯಾಂಕ್‌ ಅನ್ನು ‘ರಾಜಕೀಯ ದಾಳ’ವಾಗಿಸದೆ ರೈತರು, ಮಹಿಳೆಯರ ಸ್ನೇಹಿಯಾಗಿ ನಡೆಸಿಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹಲವು ಹಗರಣಗಳ ಆರೋಪದಿಂದ ಸೊರಗಿರುವ ಡಿಸಿಸಿ ಬ್ಯಾಂಕ್‌ 15 ತಿಂಗಳ ಬಳಿಕ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಕಳಂಕದಿಂದ ಹೊರಬರುವುದೇ ಡಿಸಿಸಿ ಬ್ಯಾಂಕ್‌?

ಕೊತ್ತೂರು ಅಧ್ಯಕ್ಷ ಮೋಹನ್‌ರೆಡ್ಡಿ ಉಪಾಧ್ಯಕ್ಷ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಎಚ್‌.ಎಸ್‌.ಮೋಹನ್‌ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ನಗರದ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಮಪತ್ರ ಸಲ್ಲಿಸಿದ್ದರು. ಹೀಗಾಗಿ ಮತದಾನ ನಡೆಯಲಿಲ್ಲ‌. ಮಧ್ಯಾಹ್ನ 2 ಗಂಟೆಯ ನಂತರ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಜಂಬಗಿ ರೇಣುಕಾಪ್ರಸಾದ್‌ ದಿಲೀಪ್‌ ಫಲಿತಾಂಶ ಘೋಷಿಸಿದರು. ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು. ಬ್ಯಾಂಕ್‌ನ ಒಟ್ಟು 18 ಚುನಾಯಿತ ನಿರ್ದೇಶಕ ಸ್ಥಾನಗಳ ಪೈಕಿ ಇಬ್ಬರ ಫಲಿತಾಂಶ ನ್ಯಾಯಾಲಯದಲ್ಲಿದೆ. ಹೀಗಾಗಿ 16 ನಿರ್ದೇಶಕರು ಒಬ್ಬ ನಾಮನಿರ್ದೇಶಿತ ಅಧಿಕಾರೇತರ ಸದಸ್ಯ ಅಪೆಕ್ಸ್ ಬ್ಯಾಂಕ್‌ ಹಾಗೂ ಸಹಕಾರ ಇಲಾಖೆಯ ತಲಾ ಒಬ್ಬ ಪ್ರತಿನಿಧಿ ಸೇರಿ ಒಟ್ಟು 19 ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ 12 ಚುನಾಯಿತ ಸದಸ್ಯರು ಒಬ್ಬ ನಾಮನಿರ್ದೇಶಿತ ಸದಸ್ಯ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇಬ್ಬರು ಅಧಿಕಾರಿ ವರ್ಗದ ಪ್ರತಿನಿಧಿಗಳಿದ್ದಾರೆ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಬೆಂಬಲಿತ ಮೂವರು ಸದಸ್ಯರು ಇದ್ದಾರೆ. ಮತ್ತೊಬ್ಬರು ಪಕ್ಷೇತರ ನಿರ್ದೇಶಕ. 

ಅಪೆಕ್ಸ್‌ ಬ್ಯಾಂಕ್‌ಗೆ ಸುಬ್ಬಾರೆಡ್ಡಿ ಪ್ರತಿನಿಧಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಅವರನ್ನು ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿಯಾ‌ಗಿ ಕಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದಕ್ಕೂ ಮೊದಲು ಡಿಸಿಸಿ ಬ್ಯಾಂಕ್‌ ನಿರ್ದೇಶಕರು ಸಭೆ ಸೇರಿ ಅಧಿಕೃತವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಗೊತ್ತಾಗಿದೆ. ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ‘ಕೋಲಾರದವರಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ದೊರೆತರೆ ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ಅಪೆಕ್ಸ್‌ ಬ್ಯಾಂಕ್‌ ಪ್ರಾತಿನಿಧ್ಯ ನೀಡಲಾಗುವುದು’ ಎಂದಿದ್ದರು.

ರೂಪಕಲಾ ಬ್ಯಾಲಹಳ್ಳಿ ಗೈರು ಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಕೆಜಿಎಫ್‌ ಕಾಂಗ್ರೆಸ್‌ ಶಾಸಕಿ ರೂಪಕಲಾ ಶಶಿಧರ್‌ ಹಾಗೂ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಚುನಾವಣಾ ಚಟುವಟಿಕೆಗಳಿಂದ ದೂರವೇ ಉಳಿದರು. ಸೋಮವಾರದ ಬಂಗಾರಪೇಟೆಯ ಎಸ್‌.ಎನ್‌.ಸಿಟಿಯಲ್ಲಿ ನಡೆದ ‌ಕಾಂಗ್ರೆಸ್‌ ಮುಖಂಡರು ಶಾಸಕರು ಹಾಗೂ ನಿರ್ದೇಶಕರ ಸಭೆಯಲ್ಲೂ ಪಾಲ್ಗೊಳ್ಳಲಿಲ್ಲ. ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲೂ ಭಾಗವಹಿಸಲಿಲ್ಲ.

ನಿರ್ದೇಶಕರಿಗೆ ಎಸ್‌.ಎನ್‌.ಸಿಟಿಯಲ್ಲಿ ಆಶ್ರಯ ಕಳೆದ ಎರಡು ದಿನಗಳಿಂದ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರಿಗೆ ಬಂಗಾರಪೇಟೆಯ ಎಸ್‌.ಎನ್‌.ಸಿಟಿಯಲ್ಲಿ ಆಶ್ರಯ ನೀಡಲಾಗಿತ್ತು. ಜೊತೆಗೆ ಭಾನುವಾರದ ತಡರಾತ್ರಿಯವರೆಗೆ ಸಭೆ ಸೋಮವಾರ ಬೆಳಿಗ್ಗೆ ಸಭೆ‌ ಕೂಡ ಇಲ್ಲಿಯೇ ನಡೆಯಿತು. ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದರು. ಪಕ್ಷದ ತಂತ್ರಗಾರಿಕೆ ಭಾಗವಾಗಿ ಎಲ್ಲರ ಮೊಬೈಲ್‌ ಪಡೆದುಕೊಂಡು ಒಂದು ಕಡೆ ಇರಿಸಲಾಗಿತ್ತು.

ಸತತ ಸಭೆ ತಂತ್ರಗಾರಿಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂಬಂಧ ಕಳೆದೊಂದು ವಾರದಿಂದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಲೇ ಇದ್ದವು. ಮೊದಲು ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಭಾನುವಾರ ಹಾಗೂ ಸೋಮವಾರ ಬಂಗಾರಪೇಟೆಯ ಎಸ್‌.ಎನ್‌.ಸಿಟಿಯಲ್ಲಿ ಸತತ ಸಭೆಗಳು ನಡೆದವು. ಸೋಮವಾರ ಬೆಳಿಗ್ಗೆ ಆರಂಭವಾದ ಸಭೆ ಮಧ್ಯಾಹ್ನ 12 ಗಂಟೆವರೆಗೆ ನಡೆಯಿತು. ಕಾಂಗ್ರೆಸ್‌ ಶಾಸಕರು ಬೆಂಬಲಿತ ನಿರ್ದೇಶಕರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಮಂಜುನಾಥ್‌ ಹಾಗೂ ಎಸ್‌.ಎನ್‌.ಸುಬ್ಬಾರೆಡ್ಡಿ ಹೆಸರು ಕೊನೆಯವರೆಗೆ ಚಾಲ್ತಿಯಲ್ಲಿತ್ತು. ಕೊನೆಯಲ್ಲಿ ಕೊತ್ತೂರು ಮಂಜುನಾಥ್‌ ಅವರನ್ನು ಕಣಕ್ಕಿಳಿಸಲು ಸಮ್ಮತ ವ್ಯಕ್ತವಾಯಿತು. ಸುಬ್ಬಾರೆಡ್ಡಿ ಕೂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ವೈಯಕ್ತಿಕ ಕೆಲಸವಿದ್ದ ಕಾರಣ ಫಲಿತಾಂಶ ಘೋಷಣೆ ಬಳಿಕ ನಿರ್ಗಮಿಸಿದರು.   ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮಧ್ಯಾಹ್ನ 12.30ಕ್ಕೆ ಶಾಸಕರು ನಿರ್ದೇಶಕರು ಕೋಲಾರ ಡಿಸಿಸಿ ಬ್ಯಾಂಕ್‌ ಕಚೇರಿಗೆ ಬಂದರು.

ಕಾಣಿಸಿದ ಮೈತ್ರಿ ಪಕ್ಷಗಳ ಮುಖಂಡರು ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಮುಖಂಡರಾಗಲಿ ಜೆಡಿಎಸ್‌ ಮುಖಂಡರಾಗಲಿ ಕಾಣಿಸಲಿಲ್ಲ.‌ ಪ್ರಮುಖ ವಿರೋಧ ಪಕ್ಷವಾಗಿರುವ ಮೈತ್ರಿಕೂಟದ ಬಳಿಕ ಅಂಕಿಗಳೂ ಇರಲಿಲ್ಲ. ಬಿಜೆಪಿ–ಜೆಡಿಎಸ್‌ ಬೆಂಬಲಿತ ಕೆಲ ನಿರ್ದೇಶಕರು ಡಿಸಿಸಿ ಬ್ಯಾಂಕ್‌ ಬಳಿ ಬಂದು ಹೋದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ