ಕಾಜಿರಂಗ | 1 ಅಥವಾ 10 ಕಿಮೀ?: ಪರಿಸರ ಸೂಕ್ಷ್ಮ ವಲಯದ ಬಗ್ಗೆ ನಿವಾಸಿಗಳಲ್ಲಿ ಗೊಂದಲ

ಕಾಜಿರಂಗ | 1 ಅಥವಾ 10 ಕಿಮೀ?: ಪರಿಸರ ಸೂಕ್ಷ್ಮ ವಲಯದ ಬಗ್ಗೆ ನಿವಾಸಿಗಳಲ್ಲಿ ಗೊಂದಲ

ಕಾಜಿರಂಗ | 1 ಅಥವಾ 10 ಕಿಮೀ?: ಪರಿಸರ ಸೂಕ್ಷ್ಮ ವಲಯದ ಬಗ್ಗೆ ನಿವಾಸಿಗಳಲ್ಲಿ ಗೊಂದಲ

ಕಾಜಿರಂಗ (ಅಸ್ಸಾಂ): ನಮ್ಮ ಮನೆಗಳ ಸುತ್ತಲೂ ಘೇಂಡಾಮೃಗಗಳು ಓಡಾಡುತ್ತಲೇ ಇರುತ್ತವೆ. ಜಿಂಕೆಗಳೂ ಸಾಮಾನ್ಯವಾಗಿ ಕಾಣಸಿಗುತ್ತವೆ. ಕೆಲವು ತಿಂಗಳ ಹಿಂದೆ ಚಿರತೆಯೊಂದು ಇಲ್ಲಿಯೇ ಮರಿ ಹಾಕಿತ್ತು. ಇಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವೆ ಯಾವುದೇ ಸಂಘರ್ಷ ನಡೆದಿಲ್ಲ ಎನ್ನುತ್ತಾರೆ ಅಸ್ಸಾಂನ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದ (KNPTR) ಗಡಿಗೆ ಹೊಂದಿಕೊಂಡಿರುವ ಮೊಹಪಾರಾ ಗ್ರಾಮದ ರೈತ ತುಲೋನ್ ಗೊಗೋಯ್.

ಕಾಜಿರಂಗದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು (Eco-Sensitive Zone - ಇಎಸ್‌ಝಡ್ ) 1 ಕಿ.ಮೀ ನಿಂದ 3 ಕಿ.ಮೀ ವರೆಗೆ ಗುರುತಿಸಲು ಅಸ್ಸಾಂ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮವನ್ನು ಉಲ್ಲೇಖಿಸಿ ಅವರು, ಉದ್ಯಾನವನದ ಗಡಿಯಿಂದ ಕೇವಲ 500 ಮೀಟರ್ ದೂರದಲ್ಲಿ ನಮ್ಮ ಮನೆ ಇದೆ. ಇಲ್ಲಿ ಅನೇಕ ಕಾಂಕ್ರೀಟ್ ಮನೆಗಳಿವೆ, ಕೆಲವು ಬಹುಮಹಡಿ ಮನೆಗಳೂ ಇವೆ. ಆದರೆ ಯಾವುದಕ್ಕೂ ಕಾಂಪೌಂಡ್‌ ಇಲ್ಲ. ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತೆ ಮೊಹಪಾರಾ ಮತ್ತು ಸುತ್ತಮುತ್ತಲಿನ ಮನೆಗಳ ಸುತ್ತ ಸರಳವಾದ ಬಿದಿರಿನ ಬೇಲಿಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ ಹೊಸ ನಿಯಮಗಳ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕಾಜಿರಂಗ ಉದ್ಯಾನವನದ ಸುತ್ತಲೂ ಪರಿಸರ ಸೂಕ್ಷ್ಮ ವಲಯದ ಗಡಿಯನ್ನು (1 ರಿಂದ 3 ಕಿಮೀ) ಈವರಗೆ ಅಧಿಕೃತವಾಗಿ ಗುರುತಿಸಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಸದ್ಯಕ್ಕೆ 10 ಕಿಮೀ ವ್ಯಾಪ್ತಿಯೇ ಜಾರಿಯಲ್ಲಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಇತ್ತೀಚೆಗೆ ತಿಳಿಸಿದ್ದರು.

ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿರುವ ಕಾಜಿರಂಗದ ವನ್ಯಜೀವಿ ಸಂರಕ್ಷಣೆಗೆ ನೆರವಾಗುವ ಜೊತೆಗೆ, ಸುತ್ತಮುತ್ತಲಿನ ನಿವಾಸಿಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇಎಸ್‌ಝಡ್ ಗಡಿಯನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಉದ್ದೇಶಿಸಿದೆ ಎಂದೂ ಶರ್ಮಾ ಹೇಳಿದ್ದರು.

ಸುಮಾರು 1,300 ಕಿ.ಮೀ. ವಿಸ್ತೀರ್ಣದಲ್ಲಿ ಹರಡಿರುವ ಕಾಜಿರಂಗವು ಒಂಟಿ ಕೊಂಬಿನ ಖಡ್ಗಮೃಗಗಳ ಅತಿ ದೊಡ್ಡ ಆವಾಸಸ್ಥಾನ. ಇದರ ಜೊತೆಗೆ ರಾಯಲ್ ಬೆಂಗಾಲ್ ಹುಲಿಗಳು, ಏಷ್ಯನ್ ಆನೆಗಳು, ಜಿಂಕೆಗಳು, ಕಾಡುಕೋಣಗಳು, ಪಕ್ಷಿ ಸಂಕುಲ ಹಾಗೂ ಉದ್ಯಾನವನದ ನಡುವೆ ಹರಿಯುವ ಬ್ರಹ್ಮಪುತ್ರ ನದಿಯ ಜಲಚರಗಳಿಗೂ ಇದು ಆಶ್ರಯತಾಣವಾಗಿದೆ.

ನಿಯಮ ಹೇರಿಕೆ, ನಿವಾಸಿಗಳಲ್ಲಿ ಆತಂಕ:

ಉದ್ಯಾನದಿಂದ 1 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವವರ ಮೇಲೆ ಬಲವಂತವಾಗಿ ಇಎಸ್‌ಝಡ್‌ ನಿಯಮ ಹೇರಲು ಸರ್ಕಾರ ಯತ್ನಿಸುತ್ತಿದೆ ಎಂಬುವುದು ಗೊಗೋಯ್, ದೊಗಾಂವ್, ದುಮ್ಜಾನ್, ಕೊಹೊರಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಆರೋಪ.

ಅಷ್ಟೇ ಅಲ್ಲ, ಕೇವಲ ಕೆಲವು ಕಿಲೋಮೀಟರ್ ದೂರದಲ್ಲಿರುವ ಗುಡ್ಡಗಾಡು ಪ್ರದೇಶವಾದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ, ಗಣಿಗಾರಿಕೆ, ಕೈಗಾರಿಕೆ ಹಾಗೂ ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ನಿರ್ಮಾಣದಂತಹ ಅಪಾಯಕಾರಿ ಚಟುವಟಿಕೆಗಳಿಗೆ ಸರ್ಕಾರ ಮುಕ್ತ ಅವಕಾಶ ನೀಡುತ್ತಿದೆ ಎಂದು ಅವರು ದೂರಿದ್ದಾರೆ.

'ಕಾಜಿರಂಗದಲ್ಲಿ ಪ್ರತಿವರ್ಷ ಪ್ರವಾಹ ಬಂದಾಗ ವನ್ಯಜೀವಿಗಳು ಜೀವ ಉಳಿಸಿಕೊಳ್ಳಲು ಆಶ್ರಯ ಪಡೆಯುವುದೇ ಈ ಬೆಟ್ಟಗಳಲ್ಲಿ. ಇಲ್ಲಿ ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್‌ಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಿದರೆ ಪ್ರವಾಹದ ಸಮಯದಲ್ಲಿ ಪ್ರಾಣಿಗಳು ಎಲ್ಲಿಗೆ ಹೋಗಬೇಕು?. ಈ ಹಿಂದೆ ಪ್ರಾಣಿಗಳು ಇಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದವು. ಆದರೆ ಕೆಲವು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾದ ರೆಸಾರ್ಟ್ ಮತ್ತು ಅದರ ಕಾಂಪೌಂಡ್‌ ವನ್ಯಜೀವಿಗಳ ಸಂಚಾರಕ್ಕೆ ಹೇಗೆ ತಡೆಯೊಡ್ಡಿದೆ ಎಂಬುದನ್ನು ನೋಡಿ ಎನ್ನುತ್ತಾರೆ' ನಿವೃತ್ತ ಶಿಕ್ಷಕ ದಂಡೇಧರ್ ಗೊಗೋಯ್.

ಸರ್ಕಾರ ಪರಿಸರ ಸೂಕ್ಷ್ಮ ವಲಯ ನಿಯಮವನ್ನು ಜಾರಿಗೆ ತಂದರೆ, ಈ ವಲಯದ ಒಳಗಿನ ಮತ್ತು ಹೊರಗಿನ ಗ್ರಾಮಸ್ಥರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕು, ಇಲ್ಲವೇ ಈಗಿರುವಂತೆ 10 ಕಿಮೀ ವ್ಯಾಪ್ತಿಯನ್ನೇ ಮುಂದುವರಿಸಬೇಕು ಎಂದು ಗೊಗೋಯ್ ಹೇಳಿದ್ದಾರೆ.

ಒಮ್ಮೆ ಇಎಸ್‌ಝಡ್‌ ಗಡಿ ನಿಗದಿಯಾದರೆ, ಸರ್ಕಾರ ಕರ್ಬಿ ಆಂಗ್ಲಾಂಗ್ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಸರ್ಕಾರ ಮುಂದಾಗಬಹುದು. ಪ್ರವಾಸೋದ್ಯಮ ಬೆಳೆಸಲು ಕಾಜಿರಂಗಕ್ಕೆ 5-ಸ್ಟಾರ್ ಹೋಟೆಲ್‌ಗಳು ಬೇಕು ಎನ್ನುವ ಸರ್ಕಾರದ ವಾದವೇ ತಪ್ಪು.

ಇಲ್ಲಿಗೆ ಬರುವ ಬಹುತೇಕ ಪ್ರವಾಸಿಗರು ನಮ್ಮ ಗ್ರಾಮಗಳಲ್ಲೇ ಉಳಿದುಕೊಳ್ಳುತ್ತಾರೆ. ನಮ್ಮ ಸಂಸ್ಕೃತಿ-ಜೀವನಶೈಲಿಯನ್ನು ಅನುಭವಿಸುತ್ತಾ, ಮನೆ ಅಡುಗೆಯನ್ನು ಸವಿದು, ನಿಸರ್ಗದ ಸೌಂದರ್ಯವನ್ನು ಹತ್ತಿರದಿಂದ ಆನಂದಿಸುತ್ತಾರೆ. ಆದರೆ ಈ ಬೃಹತ್ ರೆಸಾರ್ಟ್‌ಗಳು ಮತ್ತು 5-ಸ್ಟಾರ್ ಹೋಟೆಲ್‌ಗಳು ಪಾರ್ಟಿ ಹಾಗೂ ಕಾರ್ಪೊರೇಟ್ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾಡಿನ ಶಾಂತತೆಯನ್ನು ಕೆಡಿಸಿ, ವನ್ಯಜೀವಿಗಳಿಗೆ ತೊಂದರೆ ನೀಡುತ್ತವೆ ಎಂದೂ ಅವರು ಆಪಾದಿಸಿದ್ದಾರೆ.

'ಸರ್ಕಾರದ ಕ್ರಮವನ್ನು ಹೆಚ್ಚಿನ ಜನ ವಿರೋಧಿಸುತ್ತಿದ್ದಾರೆ. ಉದ್ಯಾನವನದ ಬದಿಯಲ್ಲಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ತಲೆಎತ್ತಿವೆ. 10 ಕಿಮೀ ಇಎಸ್‌ಝಡ್‌ ಗಡಿ ಕಾಯ್ದುಕೊಳ್ಳದಿದ್ದರೆ ಕರ್ಬಿ ಆಂಗ್ಲಾಂಗ್‌ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಲ್ಲದಿದ್ದರೆ ಕಾಜಿರಂಗದ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತದೆ ಎನ್ನುತ್ತಾರೆ' ಹೆಸರು ಹೇಳಲಿಚ್ಛಿಸದ ಸ್ಥಳೀಯ ಕಾರ್ಯಕರ್ತರೊಬ್ಬರು.

ರಾಷ್ಟ್ರೀಯ ಹೆದ್ದಾರಿ-715ರ (ಹಿಂದಿನ ಎನ್‌ಎಚ್‌ –37)ರ ಇನ್ನೊಂದು ಬದಿಯಲ್ಲಿರುವ ಕರ್ಬಿ ಆಂಗ್ಲಾಂಗ್‌ನ ಮುಖ್ಯವಾಗಿ ಕರ್ಬಿ ಮತ್ತು ಆದಿವಾಸಿ (ಚಹಾ ತೋಟದ ಕಾರ್ಮಿಕರು) ಸಮುದಾಯಗಳು ವಾಸಿಸುವ ಇಂಗಲ್ ಪಥಾರ್ ಗ್ರಾಮದ ಜನರ ಅಭಿಪ್ರಾಯಗಳು ಸ್ವಲ್ಪ ಭಿನ್ನವಾಗಿವೆ.

ಗ್ರಾಮದ ಮುಖ್ಯಸ್ಥ (ಗಾಂವ್‌ಬುರ್ಹಾ) ರಮೇಶ್ ತೊಕ್ಬಿ ಮಾತನಾಡಿ, 'ಇಎಸ್‌ಝಡ್ ನಿಯಮಗಳು ನಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಬಾರದು ಎಂದು ನಾವು ಬಯಸುತ್ತೇವೆ. ಆದರೆ ರಾತ್ರಿ ವೇಳೆ ದೀಪ ಬೆಳಗಿಸುವಂತಿಲ್ಲ, ಮ್ಯೂಸಿಕ್ ಸಿಸ್ಟಮ್ ಬಳಸುವಂತಿಲ್ಲ ಮತ್ತು ಮನೆಗೆ ಅತಿಥಿ ಬಂದರೂ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ನಮಗೆ ಆತಂಕವಾಗಿದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ನಮ್ಮ ಗ್ರಾಮಗಳು ಇಎಸ್‌ಝಡ್‌ನಿಂದ ಹೊರಗಿದ್ದರೂ, ಪ್ರವಾಹದ ಸಮಯದಲ್ಲಿ ವನ್ಯಜೀವಿಗಳನ್ನು ರಕ್ಷಿಸುತ್ತೇವೆ ಎಂದು ಸರ್ಕಾರಕ್ಕೆ ಭರವಸೆ ನೀಡುತ್ತೇವೆ. ಜೊತೆಗೆ ಇಲ್ಲಿನ ಬೆಟ್ಟಗಳನ್ನು ಮತ್ತು ಪರಿಸರ ವ್ಯವಸ್ಥೆಯನ್ನು ನಾಶಪಡಿಸುವ ಗಣಿಗಾರಿಕೆ ಹಾಗೂ ಅಪಾಯಕಾರಿ ಕೈಗಾರಿಕೆಗಳಿಗೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ' ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ, 'ಇಎಸ್‌ಝಡ್‌ ವ್ಯಾಪ್ತಿಯಲ್ಲಿ ಹೋಟೆಲ್ ಹಾಗೂ ರೆಸಾರ್ಟ್‌ಗಳಂತಹ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಗಣಿಗಾರಿಕೆ ಮತ್ತು ಅಪಾಯಕಾರಿ ಕೈಗಾರಿಕೆಗಳಿಗೆ ನಿಷೇಧವಿರುತ್ತದೆ. ಸಾಮಾನ್ಯ ಜನರ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೆಲವು ವ್ಯಕ್ತಿಗಳು ಈ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇಂಗಲ್ ಪಥಾರ್ ಬಳಿ ನಿರ್ಮಾಣ ಹಂತದಲ್ಲಿರುವ ಐಷಾರಾಮಿ ಹೋಟೆಲ್ ಮತ್ತು ಟೀ ಟ್ರೈಬ್ಸ್‌ ಮೂಸಿಯಂ (tea tribes museum) ಗಾಗಿ ಸರ್ಕಾರ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಆದಿವಾಸಿಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು.

ಈ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೂಲನಿವಾಸಿಗಳ ಹಕ್ಕುಗಳ ಹೋರಾಟಗಾರ ಪ್ರಣಬ್ ದೊಲೆ ಮತ್ತು ಇತರ ಕೆಲವರನ್ನು ಪೊಲೀಸರು ಬಂಧಿಸಿದ್ದರು.

ನಂತರ ದೊಲೆ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಅವರು ಜೈಲಿನಲ್ಲಿದ್ದಾರೆ. ಅವರ ಬಿಡುಗಡೆಗೆ ಆಗ್ರಹಿಸಿ ಕುಟುಂಬಸ್ಥರು ಗೌಹಾತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಅನೇಕ ಸ್ಥಳೀಯರು ಸೆಪ್ಟೆಂಬರ್ 5ರಂದು ಸಮೀಪದ ಬೊಕಾಖಾಟ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಮತ್ತೊಂದೆಡೆ, ಸರ್ಕಾರದ ಈ ಕ್ರಮಕ್ಕೆ ಕೆಲವು ಜನರ ಬೆಂಬಲವೂ ವ್ಯಕ್ತವಾಗಿದೆ. ಇಎಸ್‌ಝಡ್‌ ಗಡಿ ನಿಗದಿಯಾಗುವುದರಿಂದ ಕಾಜಿರಂಗದ ಸಂರಕ್ಷಣೆಗೆ ನೆರವಾಗುವುದರ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೂ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಬೊಕಾಖಾಟ್ ಹಾಗೂ ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ಬಿಸ್ವನಾಥ್ ಜಿಲ್ಲೆಯಂತಹ ಪ್ರದೇಶಗಳ ಸ್ಥಳೀಯ ನಿವಾಸಿಗಳ ಸುದೀರ್ಘ ಬೇಡಿಕೆಯನ್ನು ಪರಿಗಣಿಸಿ ಈ ಗಡಿ ನಿಗದಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ