
ಹೊಸ ಅವತಾರದಲ್ಲಿ ಕಿಚ್ಚ ಸುದೀಪ್: ಬಿಲ್ಲ ರಂಗ ಬಾಷಾ ಚಿತ್ರದ ಪೋಸ್ಟರ್ ಬಿಡುಗಡೆ
ಇಂದು (ಸೆ.2) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಬಹುನೀರಿಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್ ಬುಲೆಟ್ ರೈಡ್ ಮಾಡುತ್ತಿರುವ ಹಾಗೇ ತೋರಿಲಾಗಿದೆ.
ಪೋಸ್ಟರ್ ನೋಡಿದ ಸಿನಿ ಪ್ರೇಮಿಗಳಿಗೆ ಬಿಲ್ಲ ರಂಗ ಬಾಷಾ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಜೊತೆಗೆ ಸುದೀಪ್ ಅವರ ರಗಡ್ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.
‘ರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅನೂಪ್ ಭಂಡಾರಿ ಅವರು ‘ಬಿಲ್ಲ ರಂಗ ಬಾಷಾ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಬಿಆರ್‌ಬಿ ಸಿನಿಮಾ ಚಿತ್ರೀಕರಣ ಪ್ರಗತಿಯಲ್ಲಿದೆ. ಈ ಸಿನಿಮಾದ ಚಿತ್ರೀಕರಣದ ಜೊತೆ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
2209 ಎ.ಡಿ.ಯಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದ್ದು, ಭವಿಷ್ಯದ ಪ್ರಪಂಚವನ್ನು ಸೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾವನ್ನು ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸುತ್ತಿದ್ದು, ತೆಲುಗಿನ ಹಿಟ್ ಸಿನಿಮಾ ‘ಹನುಮಾನ್’ ನಿರ್ಮಾಣ ಮಾಡಿದ್ದ ಕೆ.ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ 2027ರ ವರ್ಷಾಂತ್ಯಕ್ಕೆ ತೆರೆಕಾಣಲಿದೆ.
ಇನ್ನು, ಪುನೀತ್ ರಾಜಕುಮಾರ್ ಅವರ ‘ಯಾರೇ ಕೂಗಾಡಲಿ’ ಚಿತ್ರದ ನಿರ್ದೇಶಕರು ಕಿಚ್ಚ ಸುದೀಪ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮಿಳು ಖ್ಯಾತ ನಟ ಸಮುದ್ರಖನಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸ್ಕೂಲ್ ಬಸ್’ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ಸುದೀಪ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ.