ಬದುಕು ಕೊಟ್ಟ ಕೈಗಡಿಯಾರ: ಬೀದಿ ಬದಿಯ ವ್ಯಾಪಾರಿ ಬಳಿಯಿವೆ ನೂರಾರು ವಿಂಟೇಜ್‌ ವಾಚ್‌

ಬದುಕು ಕೊಟ್ಟ ಕೈಗಡಿಯಾರ: ಬೀದಿ ಬದಿಯ ವ್ಯಾಪಾರಿ ಬಳಿಯಿವೆ ನೂರಾರು ವಿಂಟೇಜ್‌ ವಾಚ್‌

ಬದುಕು ಕೊಟ್ಟ ಕೈಗಡಿಯಾರ: ಬೀದಿ ಬದಿಯ ವ್ಯಾಪಾರಿ ಬಳಿಯಿವೆ ನೂರಾರು ವಿಂಟೇಜ್‌ ವಾಚ್‌

'ಬದುಕಿರುವವರೆಗೂ ನಾನೇ ಕಷ್ಟಪಟ್ಟು ದುಡಿದು ತಿನ್ನಬೇಕು. ಯಾರ ಮೇಲೂ ಅವಲಂಬಿತನಾಗಬಾರದು ಎಂಬುದನ್ನು ಬಾಲ್ಯದಲ್ಲಿದ್ದಾಗಲೇ ಕಲಿತೆ’ ಹೀಗೆ ಹೇಳುತ್ತಾ ಕೈಗಡಿಯಾರ ರಿಪೇರಿಯಲ್ಲಿ ತೊಡಗಿದರು ರಫಿಕ್‌ ಅಹಮದ್‌.

ಬೆಂಗಳೂರಿನ ಜಯನಗರ ಮೆಟ್ರೊ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿ ಪಾದಚಾರಿ ಮಾರ್ಗದ ಮೇಲೆ ಸಣ್ಣ ಅಂಗಡಿ ಹಾಕಿಕೊಂಡು, 60ರ ಇಳಿ ವಯಸ್ಸಿನಲ್ಲಿಯೂ ಕೈಗಡಿಯಾರ ರಿಪೇರಿ ಮಾಡುತ್ತ ರಫೀಕ್‌ ಜೀವನ ಸಾಗಿಸುತ್ತಿದ್ದಾರೆ. ಅವರ ಬಳಿ ಸುಮಾರು 60 ವರ್ಷಗಳಷ್ಟು ಹಳೆಯ ವಿಂಟೇಜ್ ಕೈಗಡಿಯಾರಗಳ ಸಂಗ್ರಹವಿದೆ.

ಸುಮಾರು 40 ವರ್ಷಗಳ ಹಿಂದೆ 9ನೇ ತರಗತಿಯಲ್ಲಿದ್ದಾಗ, ಕುಟುಂಬದ ಬಡತನದಿಂದಾಗಿ ಶಾಲೆಯನ್ನು ತೊರೆದ ಅವರು ಬೆಂಗಳೂರಿನ ಚಿಕ್ಕಪೇಟೆಯ ಕೈಗಡಿಯಾರ ರಿಪೇರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ಆರಂಭಿಸಿದಾಗ ದಿನಕ್ಕೆ ₹1 ರೂಪಾಯಿ ಸಿಗುತ್ತಿತ್ತು ಎನ್ನುವ ಅವರು, ದಶಕಗಳ ಹಿಂದೆ ಆರಂಭವಾದ ಕೈಗಡಿಯಾರ ರಿಪೇರಿ ಕೆಲಸ ಈಗಲೂ ಬದಕಿಗೆ ದಾರಿಯಾಗಿದೆ ಎಂದು ಮುಗುಳ್ನಕ್ಕರು.

ಹೀಗೆ, ಕೈಗಡಿಯಾರ ರಿಪೇರಿ ಕೆಲಸ ಆರಂಭಿಸಿದ ರಫಿಕ್‌, 19ನೇ ವಯಸ್ಸಿಗೆ ಸ್ವಂತವಾಗಿ ಬೀದಿಬದಿಯಲ್ಲಿ ಅಂಗಡಿಯೊಂದನ್ನು ತೆರೆಯಲು ಯೋಚಿಸಿದ್ದರು. ಸ್ವಂತ ಅಂಗಡಿಗೆ ಜಾಗವನ್ನು ಬಾಡಿಗೆಗೆ ಪಡೆದು ವ್ಯಾಪಾರ ಮಾಡುವಷ್ಟು ಹಣವಿಲ್ಲದ ಕಾರಣ ನೇರವಾಗಿ ಫುಟ್‌ಬಾತ್‌ ಮೇಲೆ ಬೆಳಿಗ್ಗೆಯಿಂದ ಸಂಜೆಯವರೆಗೆ ವಾಚ್‌ಗಳ ಸಂಗ್ರಹವನ್ನು ಒಪ್ಪಟವಾಗಿ ಜೋಡಿಸಿಕೊಂಡು ವ್ಯಾಪಾರ ಆರಂಭಿಸಿದ್ದರು.

ಕಳೆದ 40 ವರ್ಷಗಳಿಂದಲೂ ರಫಿಕ್‌ ಫುಟ್‌ಬಾತ್‌ ಮೇಲೆಯೇ ವ್ಯಾಪಾರ ಮಾಡುತ್ತಿದ್ದಾರೆ. ಇಂದು ಅವರ ಬಳಿ ವಿವಿಧ ಕಂಪನಿಗಳ 1,500ಕ್ಕೂ ಹೆಚ್ಚಿನ ವಿಂಟೇಜ್‌ ಕೈಗಡಿಯಾರಗಳಿವೆ. ಮಾತ್ರವಲ್ಲದೆ, ವಯಸ್ಸಿನ ಹಂಗಿಲ್ಲದೆ ಕಣ್ಣಿಗೆ ದುರ್ಬೀನು ಹಾಕಿಕೊಂಡು ಕೈಗಡಿಯಾರ ರಿಪೇರಿ ಮಾಡುತ್ತಾರೆ. ಇವರ ಬಳಿ ಇರುವ ಕೆಲವು ಕೈಗಡಿಯಾರಗಳಿಗೆ 60 ವರ್ಷ ತುಂಬಿವೆ. ಆದರೆ ಅವು ಇಂದಿಗೂ ಜೀವಂತವಾಗಿದೆ.

ʼಬಡತನ ಎಲ್ಲದಕ್ಕಿಂತ ದೊಡ್ಡ ಪಾಠ ಕಲಿಸುತ್ತದೆ. ಇಂದು ಕಾಲ ಬದಲಾಗಿದೆ, ಮಕ್ಕಳು ಅವರವರ ಕಾಲ ಮೇಲೆ ನಿಂತು ಚೆನ್ನಾಗಿ ದುಡಿಯುತ್ತಿದ್ದಾರೆ. ಆದರೆ ಇಂದಿಗೂ ಅವರ ಬಳಿ ನಾನು ಒಂದು ರೂಪಾಯಿ ಕೇಳುವುದಿಲ್ಲ. ನನ್ನ ಮತ್ತು ಪತ್ನಿಯ ಖರ್ಚನ್ನು ಕೈಗಡಿಯಾರ ರಿಪೇರಿ ಮಾಡಿ ಬಂದ ಹಣದಿಂದಲೇ ನೋಡಿಕೊಳ್ಳುತ್ತೇನೆʼ ಎಂದು ರಫಿಕ್ ಹೇಳುತ್ತಾರೆ.

ಕೈಗಡಿಯಾರ ರಿಪೇರಿ ಮಾಡುವುದರಲ್ಲಿ ರಫೀಕ್‌ ಅವರು ಎತ್ತಿದ ಕೈ. 100 ವರ್ಷ ಹಳೆಯದಾದ ಕೈಗಡಿಯಾರವನ್ನು ತಂದು ಕೊಟ್ಟರೂ ಅದನ್ನು ಪರಿಶೀಲಿಸಿ, ಅದಕ್ಕೆ ಬೇಕಾದ ಬಿಡಿಭಾಗಗಳನ್ನು ಹುಡುಕಿ ಸರಿ ಮಾಡಿಕೊಡುತ್ತಾರೆ. ಎಚ್‌ಎಂಟಿ, ರೋಮರ್, ಮ್ಯಾಕ್ಸಿಮಾ, ಟೈಟಾನ್‌, ಸಿಟಿಜನ್‌, ಒಲೆವ್ಸ್, ಡೀಸೆಲ್ ಸೇರಿದಂತೆ ಇತರೆ ಕಂಪನಿಗಳ ವಿಂಟೇಜ್‌ ಕೈ ಗಡಿಯಾರಗಳ ದೊಡ್ಡ ಕಲೆಕ್ಷನ್‌ ಇವರ ಬಳಿ ಇದೆ.

ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿರುವ ರಫಿಕ್‌, ʼಇಂದು ಕೆಲವೇ ಕೆಲವು ಜನರು ಮಾತ್ರ ಇಂತಹ ಕೈಗಡಿಯಾರಗಳನ್ನು ಬಳಸುತ್ತಿದ್ದಾರೆ. ಯುವ ಪೀಳಿಗೆಯ ಜನರಂತೂ ಡಿಜಿಟಲ್‌ ಕೈಗಡಿಯಾರ ಬಳಸುತ್ತಾರೆ. ಇದರಿಂದಾಗಿ ದುಡಿಮೆಯೂ ಕಡಿಮೆಯಾಗಿದೆ. ಆಗಾಗ ಬೆರಳೆಣಿಕೆಯಷ್ಟು ಜನರು ಮಾತ್ರ ರಿಪೇರಿಗೆ ಬರುತ್ತಾರೆʼ ಎಂದು ಹೇಳುತ್ತಾರೆ.

ಇಷ್ಟು ಹಳೆಯ ಕೈಗಡಿಯಾರಗಳನ್ನು ಇಟ್ಟುಕೊಳ್ಳುವುದು ಸುಲಭವಲ್ಲ ಎಂದು ಹೇಳುವ ಅವರು, ʼಬಿಡುವಿನ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಹಳೆಯ ಕೈಗಡಿಯಾರ ಅಂಗಡಿಗಳು, ಸಂಡೇ ಬಜಾರ್‌, ಗುಜರಿ ಅಂಗಡಿಗಳು ಹಾಗೂ ಬೆಂಗಳೂರಿನಾದ್ಯಂತ ಪ್ರತಿ ವಾರ ನಡೆಯುವ ಸಂತೆ ಹಾಗೂ ಬಜಾರ್‌ಗಳಿಗೆ ಭೇಟಿ ನೀಡಿ ಹಳೆಯ ಕೈಗಡಿಯಾರಗಳನ್ನು ಸಂಗ್ರಹಿಸುತ್ತೇನೆ. ಕೆಲ ವೇಳೆ ಗ್ರಾಹಕರೇ ಬಂದು ಮಾರಾಟ ಮಾಡುತ್ತಾರೆ. ಯುವಕನಾಗಿದ್ದಾಗ ಮುಂಬೈಗೆ ಹೋಗಿ ಅಲ್ಲಿಂದಲೂ ಕೆಲ ವಿಶೇಷ ಹಾಗೂ ವಿಂಟೇಜ್‌ ಕೈಗಡಿಯಾರಗಳನ್ನು ಖರೀದಿಸಿ ತರುತ್ತಿದ್ದೆ. ಇದೊಂದು ಹುಚ್ಚು’ ಎಂದು ಹೇಳುತ್ತಾರೆ.

ʼಸುಮಾರು 10 ವರ್ಷಗಳ ಹಿಂದೆ ಕೈಗಡಿಯಾರದ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆಗ ದಿನಕ್ಕೆ ಕನಿಷ್ಠ 3 ರಿಂದ 4 ಸಾವಿರ ಸಂಪಾದಿಸುತ್ತಿದ್ದೆ. ಆದರೆ ಇಂದು ದಿನಕ್ಕೆ ₹400 ರಿಂದ ₹500 ಸಂಪಾದಿಸಿದರೆ ಹೆಚ್ಚು’ ಎನ್ನುತ್ತಾರೆ ರಫಿಕ್‌.

ರಫಿಕ್‌ ಅವರ ಬಳಿ ಹಲವು ವಿಂಟೇಜ್ ಕೈಗಡಿಯಾರಗಳಿವೆ. ಇವುಗಳ ಬೆಲೆ ₹250 ರಿಂದ ಆರಂಭವಾಗಿ ₹10,000ದ ವರೆಗೂ ಇದೆ. ಗ್ರಾಹಕರು ಈ ವಿಂಟೇಜ್ ಕೈಗಡಿಯಾರಗಳನ್ನು ಖರೀದಿಸಬಹುದು.

‘ಇತ್ತೀಚೆಗೆ ಹಳೆಯ ಕೈಗಡಿಯಾರಗಳನ್ನು ರಿಪೇರಿ ಮಾಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಾರಕ್ಕೆ 2 ರಿಂದ 3 ಕೈಗಡಿಯಾರಗಳು ರಿಪೇರಿಗೆ ಬಂದರೆ ಹೆಚ್ಚು. ಹಳೆಯ ಕೈಗಡಿಯಾರವನ್ನು ರಿಪೇರಿ ಮಾಡಲು ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಅದೇ ಹಣಕ್ಕೆ ಹೊಸದಾದ ಡಿಜಿಟಲ್ ಕೈಗಡಿಯಾರವನ್ನು ಖರೀದಿಸಬಹುದು. ಹಳೆಯ ಕೈ ಗಡಿಯಾರದ ಮೇಲೆ ಪ್ರೀತಿ ಇರುವವರು ಮಾತ್ರ ಇಂದಿಗೂ ಬಂದು ರಿಪೇರಿ ಮಾಡಿಸುತ್ತಾರೆ. ನೂರು ವರ್ಷ ಕಳೆದರೂ ಒಲ್ಡ್‌ ಈಸ್ ಗೋಲ್ಡ್’ ಎನ್ನುತ್ತಾರೆ ರಫಿಕ್.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ