
ಕಲಬುರಗಿ: ಹಿಂದೂ ಗಣಪತಿ ಅದ್ದೂರಿ ವಿಸರ್ಜನೆ
ಕಾಳಗಿ: ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಸೆ.14ರಂದು ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಗಣಪತಿ ಮೂರ್ತಿಯ ವಿಸರ್ಜನೆ 12ನೇ ದಿನವಾದ ಶುಕ್ರವಾರ ಅದ್ದೂರಿಯಾಗಿ ಜರುಗಿತು.
ಡೊಣ್ಣೂರಿನ ವೀರಭದ್ರಪ್ಪ ಅಜ್ಜ, ಸಿದ್ರಾಮಯ್ಯ ಹಿರೇಮಠ, ಗುರುನಂಜಯ್ಯ ಹಿರೇಮಠ ಅವರಿಂದ ಮಹಾಮಂಗಳಾರತಿ ನೆರವೇರಿ ಮೆರವಣಿಗೆ ಆರಂಭಗೊಂಡಿತು.
ಬೈಪಾಸ್ ರಸ್ತೆ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹಳೆ ಬಸ್ ನಿಲ್ದಾಣ, ಬಜಾರ್, ಬಸವೇಶ್ವರ ವೃತ್ತ ಮಾರ್ಗವಾಗಿ ರೌದ್ರಾವತಿ ನದಿಗೆ ತಲುಪಿತು.
ನಂತರದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಗಣಪತಿ ಮೂರ್ತಿಯನ್ನು ಕ್ರೇನ್ ಮೂಲಕ ನದಿ ನೀರಿಗೆ ಇಳಿಸಿ ವಿಸರ್ಜನೆ ಮಾಡಿದರು.
ಮೆರವಣಿಗೆದುದ್ದಕ್ಕೂ ಕಾರ್ಯಕರ್ತರ ಜೈಕಾರ, ಡಿಜೆ ಸದ್ದು, ಬಣ್ಣದೋಕುಳಿ ಮೊಳಗಿತು.
ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ಸಮಿತಿ ಅಧ್ಯಕ್ಷ ಪುರುಷೋತ್ತಮ ಗುತ್ತೇದಾರ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಾ ಅನೇಕರು ಕುಣಿದು ಕುಪ್ಪಳಿಸಿದರು.
ಕಾರ್ಯಕರ್ತರಾದ ಜಗದೀಶ ಪಾಟೀಲ, ಪ್ರಶಾಂತ ಕದಂ, ರಮೇಶ ಕಿಟ್ಟದ, ಕಾಳಪ್ಪ ಕರೆಮನೋರ, ಶೇಖರ ಪಾಟೀಲ, ಮಂಜುನಾಥ ಹೆಬ್ಬಾಳ, ಚಂದ್ರಕಾಂತ ಜಾಧವ, ಶಿವರುದ್ರಯ್ಯ ಸಾಲಿ, ಶೇಖರ ಮಾನಶೆಟ್ಟಿ, ರೋಹನ ಜಾಧವ, ಚಿಮ್ಮನಕುಮಾರ ಉಮಿಯಾಜಿ, ಮಂಜುನಾಥ ಗುತ್ತೇದಾರ, ಬಸವರಾಜ ಸಿಂಗಶೆಟ್ಟಿ, ಗಣೇಶ ಸಿಂಗಶೆಟ್ಟಿ, ಗಗನ ಸಿರಿಮನಿ, ಭಾವೇಶ ಸೇಗಾಂವಕರ್, ಬಾಬು ಹೀರಾಪುರ, ಶರಣು ಚಂದಾ, ಶಿವಕುಮಾರ ಕೊಡಸಾಲಿ ಮೊದಲಾದವರು ಭಾಗವಹಿಸಿದ್ದರು.
ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಎ.ಎಸ್.ಪಟೇಲ್, ಪಿಎಸ್ಐ ಸಿದ್ದಲಿಂಗ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಾಳಗಿ ಹೊರವಲಯದ ನಾಮುನಾಯಕ ತಾಂಡಾದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಎತ್ತಿನಬಂಡಿಯ ಮಂಟಪದಲ್ಲಿ ಇರಿಸಿ 5ಕಿ.ಮೀ ಮೆರವಣಿಗೆ ನಡೆಸಿ ಈಚೆಗೆ ವಿಸರ್ಜನೆ ಮಾಡಲಾಯಿತು.