ಕಸಾಪ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ನಿಧನ

ಕಸಾಪ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ನಿಧನ

ಕಸಾಪ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ನಿಧನ

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ‌ಮಡ್ಡೀಕೆರೆ ಗೋಪಾಲ್ (77) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ ಡಾ.ಅನಸೂಯಾ ಗೋಪಾಲ್, ಪುತ್ರಿ ಮಾಲಾ, ಅಳಿಯ ಭವಾನಿಶಂಕರ್, ಮೊಮ್ಮಗಳು ಆದ್ಯಾ ಇದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮಡ್ಡೀಕೆರೆಯವರಾದ ಗೋಪಾಲ್ ಮೈಸೂರಿನಲ್ಲಿ ಕಾನೂನು ಪದವಿ ಪಡೆದಿದ್ದರು. ಇಲ್ಲಿಯೇ ನೆಲಸಿದ್ದರು. ಪ್ರಿಂಟಿಂಗ್ ಟೆಕ್ನಾಲಜಿ ಹಾಗೂ ಪತ್ರಿಕೋದ್ಯಮದ ಅಧ್ಯಯನವನ್ನೂ ಮಾಡಿದ್ದ ಅವರು ಪತ್ರಿಕೆಯೊಂದನ್ನು ಹೊರತರುವ ಉದ್ದೇಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಹಿತಿಯಾಗಿ ಗುರುತಿಸಿಕೊಳ್ಳದಿದ್ದರೂ ಸಾಹಿತಿಗಳ ಒಡನಾಟದ ಕಾರಣದಿಂದ ಗಮನಸೆಳೆದಿದ್ದರು.

2008ರಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ‌ಸ್ಪರ್ಧಿಸಿ ಗೆದ್ದಿದ್ದರು. 2011ರವರೆಗೆ ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿದ್ದರು. ಹೋಬಳಿ‌ ಮಟ್ಟಕ್ಕೆ ಪರಿಷತ್ತಿನ‌ ಚಟುವಟಿಕೆಗಳನ್ನು ವಿಸ್ತರಿಸಿದ ಹೆಗ್ಗಳಿಕೆ ಅವರದು. ಕವಿಗಳ ಮನೆಯಂಗಳದಲ್ಲಿ ಪ್ರವಾಸ ಕವಿಗೋಷ್ಠಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದರು.

ಪಿರಿಯಾಪಟ್ಟಣದಲ್ಲಿ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಗೋಪಾಲ್, ಉದಯೋನ್ಮುಖ ಲೇಖಕರ ಹತ್ತು ಕೃತಿಗಳನ್ನು ಪರಿಷತ್ತಿನಿಂದಲೇ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದರು. ಈ ಕಾರಣದಿಂದ ಅವರನ್ನು, ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.

30ಕ್ಕೂ ಹೆಚ್ಚು ಕೃತಿಗಳನ್ನು ಅವರು ಸಂಪಾದಿಸಿದ್ದರು.

2021ರಲ್ಲಿ ನಡೆದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದಿದ್ದರು. ವಿಜಯನಗರದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದಲ್ಲಿ ಅವರ ಪಾತ್ರ ದೊಡ್ಡದಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳವರಿಗೆ ಉಚಿತವಾಗಿ ಸಭಾಂಗಣವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಕನ್ನಡಪರ ಹಾಗೂ ಜನಪರ ಚಳವಳಿಗಳಲ್ಲೂ ಗುರುತಿಸಿಕೊಂಡಿದ್ದರು. ಬಹುಭಾಷಾ ಕವಿಗೋಷ್ಠಿ ಆಯೋಜಿಸಿ ಗಮನಸೆಳೆದಿದ್ದರು. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದರು. ವಿವಿಧ ಸಂಘ ಸಂಸ್ಥೆಗಳ ಜೊತೆಗೂ ಗುರುತಿಸಿಕೊಂಡಿದ್ದರು. ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.

ಇದೇ ಜುಲೈ 20ರಂದು ಕಲಾಮಂದಿರದಲ್ಲಿ ಅವರ ಅಭಿನಂದನಾ ಸಮಾರಂಭ ನಡೆದಿತ್ತು. ಅಭಿನಂದನಾ ಸಮಿತಿಯು 'ಮಡ್ಡೀಕೆರೆ ಮಾಣಿಕ್ಯ ನಮ್ಮ ಗೋಪಾಲ' ಅಭಿನಂದನಾ ಗ್ರಂಥ ಹೊರತಂದಿತ್ತು. ಹೃದಯವಂತ, ಸ್ನೇಹಶೀಲ ಕಾವ್ಯಾಭಿನಂದನೆ ಕೃತಿಗಳನ್ನೂ ಬಿಡುಗಡೆ ಮಾಡಲಾಗಿತ್ತು.

ನಾನು ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕೋವಿಡ್ ಇತ್ತು. ನಾನು ಆಸ್ಪತ್ರೆಯಲ್ಲಿದ್ದೆ. ಆದರೆ ಜೊತೆಗಾರರು ನನ್ನ ಪರವಾಗಿ ಪ್ರಚಾರ ಮಾಡಿದ್ದರಿಂದ ಎರಡು ಸಾವಿರ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಿತ್ತು ಎಂದು ಗೋಪಾಲ್ ಅವರು ನೆನೆದಿದ್ದರು. ತಿ.ನರಸೀಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದರು.

ಮಡ್ಡೀಕೆರೆ ಗೋಪಾಲ್ ಅವರ ಪಾರ್ಥಿವ ಶರೀರವನ್ನು ಉದಯಗಿರಿಯ ಅಂಚೆ ಕಚೇರಿ ಸಮೀಪವಿರುವ (ಪಿ.ಎಫ್. ಆಫೀಸ್ ರಸ್ತೆ) ಅವರ ನಿವಾಸದಲ್ಲಿ ಮಧ್ಯಾಹ್ನ 1-30ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು.ಮಧ್ಯಾಹ್ನ 2ರಿಂದ 3ರವರೆಗೆ ವಿಜಯನಗರ ಮೊದಲ ಹಂತದ ಜಿಲ್ಲಾ ಕನ್ನಡ ಸಾಹಿತ್ಯ ಭವನಕ್ಕೆ ತರಲಾಗುವುದು. ಸಂಜೆ 4ರ ಸುಮಾರಿಗೆ ಚಾಮುಂಡಿಬೆಟ್ಟದ ಪಾದದ ಸಮೀಪದ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ