
ಬೆಳಗಾವಿ | ಕೆಆರ್‌ಸಿಯುನಲ್ಲಿ ₹30 ಲಕ್ಷ ದುರ್ಬಳಕೆ ಪ್ರಕರಣ: ನಾಲ್ವರು ಅಮಾನತು
ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ(ಕೆಆರ್‌ಸಿಯು) ₹30 ಲಕ್ಷ ದುರ್ಬಳಕೆ ಮಾಡಿ ವಂಚಿಸಿದ ಆರೋಪ ಎದುರಿಸುತ್ತಿರುವ ಐವರು ನೌಕರರ ಪೈಕಿ, ನಾಲ್ವರು ‘ಸೇವಾ ಅಮಾನತು’ ಶಿಕ್ಷೆಗೆ ಗುರಿಯಾಗಿದ್ದಾರೆ.
ಕೆಆರ್‌ಸಿಯು ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಕುಲಸಚಿವರಾದ ಎಚ್.ಎಂ. ಮುರುಗೇಶ, ಮಹೇಶ ವಾಲಿ, ಪ್ರಥಮ ದರ್ಜೆ ಸಹಾಯಕ ಸಂದೀಪ ಬುರ್ಲಿ ಅವರನ್ನು ಮಂಗಳವಾರ ಸೇವೆಯಿಂದ ಅಮಾನತು ಮಾಡಲಾಗಿತ್ತು.
ಕೆಆರ್‌ಸಿಯುನಲ್ಲೇ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ, ಈಗ ಬಾಗಲಕೋಟ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ರಾಮು ಹಂಚಿನಾಳ ಬುಧವಾರ ಅಮಾನತುಗೊಂಡಿದ್ದಾರೆ.
ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ ಮಂಗಲಾ ಆರ್. ಅವರ ಇಲಾಖೆ ವಿಚಾರಣೆ ಮುಂದುವರಿದಿದೆ.
ಹೇಗೆ ದುರ್ಬಳಕೆ?: ಕೆಆರ್‌ಸಿಯುನಲ್ಲಿ ಸಂಚಿತ ವೇತನದಡಿ ಕೆಲಸ ಮಾಡುವ ನೌಕರರ ‘ಪಿಎಫ್’ ಹಣವನ್ನು, ಅವರ ಬ್ಯಾಂಕ್ ಖಾತೆ ಬದಲಿಗೆ ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ.
‘ಬೇರೆ ನೌಕರರ ವೇತನದಲ್ಲಿ ಶೇ 10ರಷ್ಟು ಮೊತ್ತ ಕಡಿತಗೊಳಿಸಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯದ ಶೇ 10ರಷ್ಟು ಮೊತ್ತ ಸೇರಿಸಿ, ಶೇ 20ರಷ್ಟು ಮೊತ್ತವನ್ನು ಆಯಾ ನೌಕರರ ಎನ್‌ಪಿಎಸ್ ಖಾತೆಗೆ ಜಮೆ ಮಾಡಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಪಾಲಿನ ಶೇ 10ರಷ್ಟು ಮೊತ್ತವನ್ನು ಮೂರು ಪಟ್ಟು ಅಧಿಕ ಪಡೆದು, ತಮ್ಮ ವೈಯಕ್ತಿಕ ಎನ್‌ಪಿಎಸ್ ಖಾತೆಗಳಿಗೆ ಜಮೆ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ತಿಳಿಸಿದರು.
‘ಇದಲ್ಲದೆ ಬೇರೆ ಬೇರೆ ಭತ್ಯೆಗಳ ಹೆಸರಿನಲ್ಲಿ ₹3 ಲಕ್ಷ ಕಬಳಿಸಿದ್ದಾರೆ. ಐಟಿ ಕೇಸ್ ಹೆಸರಿನಲ್ಲೂ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-19-615686629