ಹಂಪಾಪುರ: ಶುಂಠಿ ಬೆಳೆಗೆ ಬೆಂಕಿ ರೋಗ ಬಾಧೆ

ಹಂಪಾಪುರ: ಶುಂಠಿ ಬೆಳೆಗೆ ಬೆಂಕಿ ರೋಗ ಬಾಧೆ

ಹಂಪಾಪುರ: ಶುಂಠಿ ಬೆಳೆಗೆ ಬೆಂಕಿ ರೋಗ ಬಾಧೆ

ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆ ಬೆಳೆದಿದ್ದು, ಮಳೆಯ ಕೊರತೆಯ ನಡುವೆಯೇ ಕೆಲವೆಡೆ ಶುಂಠಿ ಬೆಳೆಯಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಎಂಟು‌ ಸಾವಿರ ಎಕರೆಯಷ್ಟು ಶುಂಠಿ ಬೆಳೆಯಲಾಗಿದೆ. ಪ್ರಮುಖವಾಗಿ ಹಂಪಾಪುರ, ಅಂತರಸಂತೆ ಹಾಗೂ ಕಸಬಾ ಹೋಬಳಿಯ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಶುಂಠಿ ಬಿತ್ತನೆ ಮಾಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಕಳೆದ ಒಂದು ತಿಂಗಳವರೆಗೆ ಬಹುತೇಕ ಕಡೆಗಳಲ್ಲಿ ಬೆಳೆ ಉತ್ತಮವಾಗಿತ್ತು. ಉತ್ತಮ ಇಳುವರಿ ದೊರೆಯುವ ನಿರೀಕ್ಷೆಯಲ್ಲಿ ರೈತರು ಕಟಾವಿನ ದಿನಕ್ಕಾಗಿ ಕಾಯುತ್ತಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಕೆಲವು ಪ್ರದೇಶಗಳಲ್ಲಿ ಶುಂಠಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಲಕ್ಷಣಗಳು ಕಂಡುಬಂದಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರೋಗದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇನ್ನೂ ಮೂರ್ನಾಲ್ಕು ತಿಂಗಳ ಕಾಲ ಬೆಳೆಯಬೇಕಿದ್ದ ಶುಂಠಿಯನ್ನು ಕೆಲ ರೈತರು ಅವಧಿಗೂ ಮುನ್ನವೇ ಕಟಾವು ಮಾಡಿ ಮಾರಾಟಕ್ಕೆ ಮುಂದಾಗಿದ್ದಾರೆ. ಬೆಳೆ ಸಂಪೂರ್ಣವಾಗಿ ಬಲಿಯುವ ಮುನ್ನವೇ ಕಟಾವು ಮಾಡುತ್ತಿರುವುದರಿಂದ ನಿರೀಕ್ಷಿತ ಇಳುವರಿ ಹಾಗೂ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಬೆಳೆಗೆ ಮಾಡಿರುವ ಖರ್ಚನ್ನಾದರೂ ವಾಪಸ್ ಪಡೆಯಬೇಕು ಎಂಬ ಉದ್ದೇಶದಿಂದ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಅವಧಿ ಪೂರ್ಣ ಕಟಾವು: ಬೆಳೆ ಉಳಿಸಿಕೊಂಡು ಹೆಚ್ಚಿನ ನಷ್ಟ ಅನುಭವಿಸುವುದಕ್ಕಿಂತ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಹಲವು ರೈತರು ಬಂದಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ಈಗಾಗಲೇ ಶುಂಠಿ ಕಟಾವು ನಡೆಯುತ್ತಿದ್ದು, ಎಕರೆಗೆ ಸುಮಾರು 60 ಕೆ.ಜಿ. ಸಾಮರ್ಥ್ಯದ 160 ರಿಂದ 170 ಚೀಲಗಳಷ್ಟು ಇಳುವರಿ ಬಂದಿದೆ ಎಂದು ರೈತರು ತಿಳಿಸಿದ್ದಾರೆ. ಆದರೆ ಬೆಳೆ ಸಂಪೂರ್ಣವಾಗಿ ಬಲಿಯುವ ಮುನ್ನವೇ ಕಟಾವು ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಿರೀಕ್ಷಿಸಿದ್ದಷ್ಟು ಇಳುವರಿ ದೊರೆಯುತ್ತದೆಯೇ ಎಂಬ ಆತಂಕವೂ ರೈತರಲ್ಲಿದೆ.

ಕಡಿಮೆ ಬೆಲೆಗೆ ಮಾರಾಟ: ಶುಂಠಿಯನ್ನು ಅವಧಿಗೂ ಮುನ್ನವೇ ಕಟಾವು ಮಾಡಿ ಮಾರಾಟ ಮಾಡುತ್ತಿರುವುದರಿಂದ ಅದು ಇನ್ನೂ ಎಳೆಯದ್ದಾಗಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ದೊರೆಯುತ್ತಿದೆ. ಸಾಮಾನ್ಯವಾಗಿ 60 ಕೆ.ಜಿ. ತೂಕದ ಒಂದು ಚೀಲ ಶುಂಠಿಗೆ ₹3 ಸಾವಿರಕ್ಕೂ ಹೆಚ್ಚಿನ ಬೆಲೆ ಇರುವ ಸಂದರ್ಭದಲ್ಲೂ, ಎಳೆಯ ಶುಂಠಿಗೆ ವ್ಯಾಪಾರಿಗಳು ಸುಮಾರು ₹2,500ರಷ್ಟು ಮಾತ್ರ ನೀಡುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಒಂದು ಕಡೆ ಮಳೆಯ ಕೊರತೆ, ಮತ್ತೊಂದೆಡೆ ರೋಗದ ಆತಂಕ ಹಾಗೂ ಕಡಿಮೆ ಬೆಲೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಕೃಷಿ ಇಲಾಖೆ ಮಾಹಿತಿ: ಶುಂಠಿ ಬೆಳೆಯಲ್ಲಿ ಬೆಂಕಿ ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ತಿಳಿಸಿದ್ದಾರೆ.

ರೋಗ ಹರಡುವುದನ್ನು ತಡೆಯಲು ಪ್ರೋಪಿಕೊನಜೋಲ್ ಅಥವಾ ಟೆಬುಕೊನಜೋಲ್ ಶಿಲೀಂಧ್ರನಾಶಕವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಿಂಪಡಿಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಔಷಧ ಸಿಂಪಡಿಸಲು ವಿಳಂಬ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ರೋಗದ ತೀವ್ರತೆ ಹಾಗೂ ಹವಾಮಾನ ಪರಿಸ್ಥಿತಿಯನ್ನು ಗಮನಿಸಿ ಮೊದಲ ಸಿಂಪಡಣೆಯ 10ರಿಂದ 15 ದಿನಗಳ ನಂತರ ಎರಡನೇ ಬಾರಿ ಔಷಧ ಸಿಂಪಡಿಸಬಹುದು. ಎರಡನೇ ಸಿಂಪಡಣೆಗೆ ಟೆಬುಕೊನಜೋಲ್ ಮತ್ತು ಅಜೋಕ್ಸಿಸ್ಟ್ರೋಬಿನ್ ಮಿಶ್ರಣದ ಶಿಲೀಂಧ್ರನಾಶಕ ಬಳಸಬಹುದು ಎಂದು ತಿಳಿಸಿದ್ದಾರೆ.

ರೋಗಪೀಡಿತ ಗಿಡಗಳ ಎಲೆ, ಕಾಂಡ ಹಾಗೂ ಇತರೆ ಅವಶೇಷಗಳನ್ನು ಹೊಲದಲ್ಲೇ ಹಾಗೆಯೇ ಬಿಡಬಾರದು. ತೀವ್ರವಾಗಿ ರೋಗಬಾಧಿತವಾಗಿರುವ ಗಿಡಗಳ ಅವಶೇಷಗಳನ್ನು ಹೊಲದಿಂದ ಹೊರತೆಗೆದು ನಾಶಪಡಿಸಬೇಕು. ಇದರಿಂದ ರೋಗವು ಮತ್ತಷ್ಟು ಹರಡುವುದನ್ನು ಹಾಗೂ ಅದರ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರೈತರು ತಮ್ಮ ಶುಂಠಿ ತೋಟದಲ್ಲಿ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಸೂಕ್ತ ಔಷಧ ಸಿಂಪಡಣೆ ಕೈಗೊಳ್ಳಬೇಕು ಎಂದು ನೇತ್ರಾವತಿ ಮನವಿ ಮಾಡಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶುಂಠಿ ಬೆಳೆಯಲ್ಲಿ ರೋಗದ ತೀವ್ರತೆ ಕಡಿಮೆ ಇದೆ. ಸದ್ಯ ಅಲ್ಲಲ್ಲಿ ಮಾತ್ರ ರೋಗದ ಲಕ್ಷಣಗಳು ಕಂಡುಬಂದಿವೆ. ಆರಂಭಿಕ ಹಂತದಲ್ಲೇ ನಿವಾರಕ ಕ್ರಮಗಳ ಮೂಲಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ.

ಶುಂಠಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುವ ಭೀತಿ ಎದುರಾಗಿದೆ. ಹೀಗಾಗಿ ಶುಂಠಿ ಸಂಪೂರ್ಣವಾಗಿ ಬಲಿಯದಿದ್ದರೂ ಕಟಾವು ಮಾಡಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಬೆಳೆಗೆ ಮಾಡಿರುವ ಖರ್ಚಾದರೂ ವಾಪಸ್ ಬಂದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳಗನಹಳ್ಳಿ ರೈತ ಶಿವಕುಮಾರ್.

ನಮ್ಮ ಭಾಗದಲ್ಲಿ ರೈತರು ಬೆಳೆದಿರುವ ಶುಂಠಿ ಉತ್ತಮ ಗುಣಮ ಟ್ಟದಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಖರೀದಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಮಧ್ಯವರ್ತಿಗಳು ಉತ್ತಮ ಬೆಲೆ ನೀಡಿ ಶುಂಠಿ ಖರೀದಿಸಬೇಕು ಎನ್ನುವುದು ಚಿಕ್ಕೆರೆಯೂರು ನಿವಾಸಿ ಮಹದೇವಪ್ರಸಾದ್ ಅವರ ಅಭಿಪ್ರಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260903-38-1817707539

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ