ಕೆಪಿಎಸ್‌ಸಿ ಹಗರಣ: ಆಯೋಗದ ಹಿಂದಿನ ಅಧ್ಯಕ್ಷ ಸಾಹುಕಾರಗೆ ಬಂಧನ ಭೀತಿ

ಕೆಪಿಎಸ್‌ಸಿ ಹಗರಣ: ಆಯೋಗದ ಹಿಂದಿನ ಅಧ್ಯಕ್ಷ ಸಾಹುಕಾರಗೆ ಬಂಧನ ಭೀತಿ

ಕೆಪಿಎಸ್‌ಸಿ ಹಗರಣ: ಆಯೋಗದ ಹಿಂದಿನ ಅಧ್ಯಕ್ಷ ಸಾಹುಕಾರಗೆ ಬಂಧನ ಭೀತಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆಯೋಗದ ಹಿಂದಿನ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ ಅವರಿಗೆ ಸಿಐಡಿ ತನಿಖಾಧಿಕಾರಿಗಳು ಮತ್ತೆ ನೋಟಿಸ್ ಜಾರಿಗೊಳಿಸಿದ್ದು, ಅವರಿಗೆ ಹಾ‌ಗೂ ಆಯೋಗದ ಕೆಲವು ಸದಸ್ಯರಿಗೆ ಬಂಧನದ ಭೀತಿ ಎದುರಾಗಿದೆ.

ಸಿಐಡಿ ಕಚೇರಿಗೆ ಶುಕ್ರವಾರ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯ ಬಳಿಕ ಸಾಹುಕಾರ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ತಮ್ಮ ಪುತ್ರಿಗೆ ಹುದ್ದೆ ಕೊಡಿಸುವಲ್ಲಿ ಸ್ವಜನಪಕ್ಷಪಾತ ತೋರಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಸಾಹುಕಾರ, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ, ಸಾಹುಕಾರ ಅವರ ಮೇಲಿನ ಆರೋಪಗಳ ಬಗ್ಗೆ ಕಿಡಿಕಾರಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ.

‌ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ, ಸಿಐಡಿ ಎರಡನೇ ನೋಟಿಸ್ ಜಾರಿ ಮಾಡಿದೆ.

ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸಿಐಡಿ ಕಸ್ಟಡಿಯಲ್ಲಿರುವ ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಹೇಳಿಕೆ ಆಧರಿಸಿ ಸಾಹುಕಾರ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಬಂಧಿತ ಆರೋಪಿಗಳ ಹೇಳಿಕೆ ಹಾಗೂ ತನಿಖೆಯ ವೇಳೆ ಲಭಿಸಿದ ದಾಖಲೆಗಳಿಂದ, ಅಕ್ರಮದಲ್ಲಿ ಸಾಹುಕಾರ ಪಾತ್ರವೂ ಕಂಡುಬಂದಿದೆ ಎಂದು ತನಿಖಾ ಮೂಲಗಳು ಹೇಳಿವೆ.

ಆಗಸ್ಟ್‌ 27ರಂದು ಸಾಹುಕಾರ ವಿಚಾರಣೆಗೆ ಹಾಜರಾಗಿದ್ದರು. ಪ್ರಾಥಮಿಕವಾಗಿ ವಿಚಾರಣೆ ನಡೆಸಿ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಕೆಲವು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿರಲಿಲ್ಲ. ಮತ್ತೆ ವಿಚಾರಣೆಗೆ ಬರುವಂತೆ ಅಂದೇ ಸೂಚನೆ ನೀಡಲಾಗಿತ್ತು. ವಿಚಾರಣೆಗೆ ಹಾಜರಾದರೆ ದಾಖಲೆಗಳನ್ನು ಮುಂದಿಟ್ಟು ಪ್ರಶ್ನೆ ಕೇಳಲಾಗುವುದು, ಕೋರ್ಟ್‌ಗೆ ಸಲ್ಲಿಸಿರುವ ರಿಮ್ಯಾಂಡ್‌ ಅರ್ಜಿಯಲ್ಲೂ ಸಾಹುಕಾರ ಅವರನ್ನು ಮೊದಲ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ. 

‘ಆಯೋಗದ ಮುಖ್ಯಸ್ಥರ ಸೂಚನೆ ಮೇರೆಗೆ, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪಾಲ್ಗೊಂಡಿದ್ದೆ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ನಾಶಪಡಿಸಿದ್ದೆ ಎಂದು ಘ್ಯಾನೇಂದ್ರ ಕುಮಾರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ’ ಎಂದು ಗೊತ್ತಾಗಿದೆ.

‘ಆಯೋಗದಲ್ಲಿರುವ ಕೆಲವರು ತಮ್ಮ ಕಡೆಯ ಅಭ್ಯರ್ಥಿಗಳಿಗೆ ಹುದ್ದೆ ನೀಡುವಂತೆ ನನ್ನ ಮೇಲೆ ಒತ್ತಡ ಹಾಕಿದ್ದರು. ಮುಖ್ಯಸ್ಥರ ಸೂಚನೆಯಂತೆ ನಡೆದುಕೊಂಡಿದ್ದೇನೆ’ ಎಂದು ಘ್ಯಾನೇಂದ್ರ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ.

ಐಎಎಸ್ ಅಧಿಕಾರಿ ಘ್ಯಾನೇಂದ್ರ ಅಮಾನತು

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಐಡಿ ತನಿಖೆ ಎದುರಿಸುತ್ತಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಂಎಸ್‌ಎಂಇ ವಿಭಾಗದ ನಿರ್ದೇಶಕ ಘ್ಯಾನೇಂದ್ರ ಕುಮಾರ್‌ ಗಂಗ್ವಾರ್ ಅವರನ್ನು ಸರ್ಕಾರ ಅಮಾನತು ಮಾಡಿದೆ.

‘ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ತನಿಖೆಯ ಭಾಗವಾಗಿ ಘ್ಯಾನೇಂದ್ರ ಮನೆಯಲ್ಲಿ ಶೋಧ ನಡೆಸಿದ್ದು ಅಕ್ರಮವನ್ನು ಪುಷ್ಟೀಕರಿಸುವ ಸಾಕ್ಷ್ಯಗಳು ದೊರೆತಿವೆ ಎಂದು ಇ.ಡಿ ಮತ್ತು ಸಿಐಡಿ ರಾಜ್ಯ ಸರ್ಕಾರಕ್ಕೆ ಬರೆದ ಪ್ರತ್ಯೇಕ ಪತ್ರದಲ್ಲಿ ತಿಳಿಸಿವೆ. ಜತೆಗೆ ಘ್ಯಾನೇಂದ್ರ ಅವರನ್ನು ಸಿಐಡಿ ಕಸ್ಟಡಿಗೆ ತೆಗೆದುಕೊಂಡಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಮಾನತು ಆದೇಶದಲ್ಲಿ ವಿವರಿಸಿದೆ. ‘ಈ ಪ್ರಕರಣದ ವಿವರಗಳು ಲಭ್ಯವಾದ ಸಾಕ್ಷ್ಯಗಳು ಆರೋಪಗಳು ಹಾಗೂ ಘ್ಯಾನೇಂದ್ರ ಅವರ ಕಸ್ಟಡಿಯನ್ನು ಪರಿಗಣಿಸಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದೆ.

ಇ.ಡಿ ಕುಣಿಕೆಯಿಂದ ಪಾರಾಗುವ ತಂತ್ರ

ಸಾಹುಕಾರ ಮನೆಯ ಮೇಲೆ ಆಗಸ್ಟ್‌ 17ರಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಘ್ಯಾನೇಂದ್ರ ಕುಮಾರ್ ದೆಹಲಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಅದಾದ ಮೇಲೆ ಇ.ಡಿ ತನಿಖೆಯಿಂದ ಪಾರಾಗಲು ಸಿಐಡಿ ಎದುರು ಹಾಜರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕೆಪಿಎಸ್‌ಸಿ ಅಕ್ರಮ ಪ್ರಕರಣದ ತನಿಖೆಯನ್ನು ಇ.ಡಿ ಹಾಗೂ ಸಿಐಡಿ ಏಕಕಾಲದಲ್ಲಿ ನಡೆಸುತ್ತಿವೆ.‌ ಇ.ಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಬಂಧಿಸುತ್ತಾರೆ ಎಂಬ ಮಾಹಿತಿ ಪಡೆದಿದ್ದ ಘ್ಯಾನೇಂದ್ರ ಕುಮಾರ್ ಆಗಸ್ಟ್ 18ರಂದು ದೆಹಲಿಗೆ ತೆರಳಿದ್ದರು. ಅಲ್ಲಿಂದ ನೋಯ್ಡಾಗೆ ತೆರಳಿ ಅಲ್ಲಿ ಗೆಳತಿಯನ್ನು ಭೇಟಿ ಮಾಡಿದ್ದರು. ಅಲ್ಲಿಂದ ಮೂವರು ಸ್ನೇಹಿತರೊಂದಿಗೆ ಶ್ರೀಲಂಕಾಕ್ಕೆ ತೆರಳಿದ್ದರು. ಲುಕ್‌ಔಟ್ ನೋಟಿಸ್ ಹೊರಡಿಸುವ ಸುಳಿವು ಸಿಗುತ್ತಿದ್ದಂತೆಯೇ ಚೆನ್ನೈಗೆ ವಾಪಸ್ ಆಗಿದ್ದರು. ಅಲ್ಲಿಂದ ದೇವನಹಳ್ಳಿಯ ರೆಸಾರ್ಟ್‌ಗೆ ಬಂದು ವಾಸ್ತವ್ಯ ಮಾಡಿದ್ದರು ಎಂದು ಮೂಲಗಳು ಹೇಳಿವೆ. ಸ್ನೇಹಿತರ ಸಲಹೆಯಂತೆ ಆಗಸ್ಟ್‌ 28ರಂದು ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು. 30ರಂದು ಅವರನ್ನು ಸಿಐಡಿ ಬಂಧಿಸಿತ್ತು. ಸಿಐಡಿ ಕಸ್ಟಡಿಯಲ್ಲಿರುವ ಘ್ಯಾನೇಂದ್ರ ಅವರನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆಯಲು ಇ.ಡಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಕನ್ನಾಳೆ ಮೊಬೈಲ್‌ನಲ್ಲಿ ಪ್ರಭಾವಿಗಳ ಸಂಖ್ಯೆ

ಸಿಐಡಿ ಕಸ್ಟಡಿಯಲ್ಲಿರುವ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಅವರ ಮೊಬೈಲ್‌ ಜಪ್ತಿ ಮಾಡಿಕೊಂಡು ಪರಿಶೀಲನೆ ನಡೆಸಲಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಶಾಸಕರು ಸಂಸದರು ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ 50ಕ್ಕೂ ಹೆಚ್ಚು ಮೊಬೈಲ್‌ ಸಂಖ್ಯೆಗಳು ಪತ್ತೆಯಾಗಿವೆ. ‘ನಾನು ಉದ್ಯಮಿಯಾಗಿದ್ದು ರಾಜಕೀಯ ಮುಖಂಡರ ಜತೆ ಒಡನಾಟ ಇಟ್ಟುಕೊಂಡಿದ್ದೇನೆ. ನನ್ನ ಮಾಲೀಕತ್ವದಲ್ಲಿ ಟ್ರಾವೆಲ್‌ ಏಜೆನ್ಸಿ ಸೇರಿದಂತೆ ಹಲವು ಉದ್ದಿಮೆಗಳಿವೆ. ಹೀಗಾಗಿ ದೆಹಲಿಯಿಂದ ಭಾಲ್ಕಿಯವರೆಗೆ ಎಲ್ಲರೂ ನನಗೆ ಪರಿಚಿತರು’ ಎಂದು ವಿಚಾರಣೆ ವೇಳೆ ಕನ್ನಾಳೆ ಹೇಳಿಕೆ ನೀಡಿದ್ದಾರೆ. ಸಂಜಯನಗರದಲ್ಲಿ ಇರುವ ಕನ್ನಾಳೆ ಮನೆಯಲ್ಲಿ ಗುರುವಾರ ಎರಡನೇ ಬಾರಿಗೆ ಶೋಧ ನಡೆಸಿದ ಸಿಐಡಿ ಪೊಲೀಸರು ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಸ್ಥಳ ಮಹಜರು ನಡೆಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ