
ಶೇ 7 ಕಮಿಷನ್ ಆರೋಪಕ್ಕೆ ತಿರುಗೇಟು: ಶಾಸಕ ಅಶೋಕ್ ರೈ ವಿರುದ್ಧ ಅಧಿಕಾರಿಗಳ ಪತ್ರ
ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಕರ್ನಾಟಕ ಗ್ರಾಮಿಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಆರ್ಐಡಿಎಲ್) ಕಾರ್ಯಪಾಲಕ ಎಂಜಿನಿಯರ್ ಎನ್.ವಿಜಯ್ ಮತ್ತು ಕಿರಿಯ ಎಂಜಿನಿಯರ್ ಪ್ರಜ್ವಲ್ ಆರ್.ವೈ ನಿರಾಕರಿಸಿದ್ದಾರೆ.
ಸೆ.1ರಂದು ಪ್ರಜ್ವಲ್ ಮತ್ತು 2ರಂದು ವಿಜಯ್ ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ತಮ್ಮನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂಧು ಕೋರಿದ್ದಾರೆ. ವಿಜಯ್ ಅವರು ಮಂಗಳೂರು ವಿಭಾಗದಿಂದಲೇ ತಮ್ಮನ್ನು ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲಾಖಾ ಸಚಿವರಿಗೆ ಮಾಸಿಕವಾಗಿ ಗುತ್ತಿಗೆದಾರರಿಂದ ಶೇ. 7ರಷ್ಟು ಹೆಚ್ಚುವರಿ ಹಣ ಪಡೆದು ಇಬ್ಬರು ಅಧಿಕಾರಿಗಳು
ಸಂದಾಯ ಮಾಡುತ್ತಿದ್ದಾರೆ ಎಂದು ಆ.25ರಂದು ಮುಖ್ಯಮಂತ್ರಿಗೆ ಸಲ್ಲಿಸಿದ ಪತ್ರದಲ್ಲಿ ಶಾಸಕ ಅಶೋಕ್ ರೈ ಆರೋಪ ಮಾಡಿದ್ದರು.
ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ, ಸಂಸ್ಥೆಯ ನಿಯಮಾವಳಿ ಪ್ರಕಾರ ಕಾಮಗಾರಿಯ ಅಂದಾಜು ವೆಚ್ಚದಲ್ಲಿ ಎಸ್ಆರ್ ದರಕ್ಕೆ ಶೇ. 3 ಸೇವಾ ಶುಲ್ಕ ಸೇರಿಸಲಾಗಿರುತ್ತದೆ. ಆ ದರದಲ್ಲಿ ಕೆಪಿಡಬ್ಲ್ಯುಡಿ ಗುತ್ತಿಗೆದಾರರ ಉಳಿತಾಯ ಶೇ. 10 ಒಳಗೊಂಡಿರುತ್ತದೆ. ಈ ಮೊತ್ತದಲ್ಲಿ ಶೇ. 7ರಷ್ಟನ್ನು ಕಡಿತಗೊಳಿಸಿ ಜಾಬ್ ಸೇವಿಂಗ್ಸ್ ನಿಗಮದ ಖಾತೆಗೆ ಜಮೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ನೇರವಾಗಿ ಕೂಲಿಕಾರ್ಮಿಕರನ್ನು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಸರಬರಾಜು ಮಾಡಲು ಗ್ರೂಪ್ ಲೀಡರ್ಗಳನ್ನು ಗುರುತಿಸಿ ಕಾಮಗಾರಿಗಳನ್ನು ಕೈಗೊಳ್ಳುತ್ತದೆ. ಹೀಗಾಗಿ ಗುತ್ತಿಗೆ ನೀಡುವ ಅಗತ್ಯ ಇರುವುದಿಲ್ಲ. ನೇರವಾಗಿ ಕಿರಿಯ ಅಥವಾ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಹೆಸರಿನಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಗುಣಮಟ್ಟ, ಪರಿಮಾಣದಲ್ಲಿ ವ್ಯತ್ಯಾಸ ಕಂಡುಬಂದರೆ ಈ ಮೂವರು ಅಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಸ್ಥೆಗೆ ನೀಡಿರುವ ಕಾಮಗಾರಿಗಳನ್ನು ಅನುಮೋದನೆ ಆದ ಪಟ್ಟಿ ಪ್ರಕಾರವೇ ಕೈಗೆತ್ತಿಕೊಳ್ಳಲಾಗಿದ್ದು ಸ್ಥಳ ಪರಿಶಿಲನೆಯ ನಂತರ ಕಾಮಗಾರಿಗಳ ಅಳತೆ ನಮೂದಿಸಲಾಗಿದೆ. ಆದ್ದರಿಂದ ಕೆಲವು ಗ್ರೂಪ್ ಲೀಡರ್ಗಳು ಸುಳ್ಳು ದೂರು ನೀಡಿ ಶಾಸಕರ ಮೂಲಕ ಮಾಧ್ಯಮಗಳಿಗೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಸತ್ಯಕ್ಕೆ ದೂರವಾದ ಆರೋಪ ಮಾಡಿರುವುದರಿಂದ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ಮಾಡಬೇಕು ವ್ಯವಸ್ಥಾಪಕ ನಿರ್ದೇಶಕರನ್ನು ಇಬ್ಬರೂ ಅಧಿಕಾರಿಗಳು ಕೋರಿದ್ದಾರೆ.
ಆರೋಪಗಳು ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಬಂದಿರುವುದರಿಂದ ತಮಗೂ ಕುಟುಂಬದವರಿಗೂ ಆಘಾತವಾಗಿದ್ದು ಮಾನಸಿಕ ಖಿನ್ನತೆ ಉಂಟಾಗಿದೆ. ಕರ್ತವ್ಯ ನಿರ್ವಹಿಸುವುದಕ್ಕೂ ಆಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.