
ಉಡುಪಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ಕೋಟಾ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎಯ ಮಲ್ಪೆಯಿಂದ ಕರಾವಳಿ ಬೈಪಾಸ್‌ವರೆಗಿನ ಬಾಕಿ ಉಳಿದಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಗೆ ಸಂಬಂಧಿಸಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲ್ಪೆ - ತೀರ್ಥಹಳ್ಳಿವರೆಗಿನ ಹೆದ್ದಾರಿ ಕಾಮಗಾರಿ ಜಿಲ್ಲೆಯಲ್ಲಿ ಅಂತಿಮ ಹಂತದಲ್ಲಿದೆ. ಆದರೆ ಕಾಮಗಾರಿ ನಡೆಯುತ್ತಿರುವ ಕೆಲವು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಆಗದ ಕಾರಣ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಭೂ ಮಾಲೀಕರಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಹೆದ್ದಾರಿ ಕಾಮಗಾರಿ ವಿಳಂಬವಾಗಿ ಸಾಗುತ್ತಿರುವುದು ಸರಿಯಲ್ಲ. ಪದೇ ಪದೇ ಸಭೆ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನನೆಗುದಿಗೆ ಬಿದ್ದಿರುವ ಪರ್ಕಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ₹8.25 ಕೋಟಿ ಅನ್ನು ಕೋರ್ಟ್‌ಗೆ ಜಮಾ ಮಾಡಲಾಗಿದೆ. 13 ಜನರಿಗೆ ಸಂಬಂಧಿಸಿದ 419 ಮೀ. ನಲ್ಲಿ ಒಬ್ಬರು ಮಾತ್ರ ಕೋರ್ಟ್‌ಗೆ ಹೋಗಿದ್ದು, ಈ ಬಗ್ಗೆ ಮರು ಸರ್ವೆ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದರು.
ಹಿರಿಯಡ್ಕದಿಂದ ಪೆರ್ಡೂರು ವರೆಗೆ ಬಾಕಿ ಇದ್ದ 2.69 ಕಿ. ಮೀ. ಸ್ವಾಧೀನವಾಗಿದೆ. ಹೆಬ್ರಿ ಪಾಡಿಗಾರ ಪ್ರದೇಶದಲ್ಲಿ 1.4 ಕಿ.ಮೀ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಮರ ಕಡಿಯಲು ಅನುಮತಿ ನೀಡಿದ್ದಾರೆ. ಆದರೆ ಮರ ತೆರವು ಕಾರ್ಯ ಬಾಕಿ ಇದೆ. ಮರಗಳ ತೆರವು ಕಾರ್ಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪೂರ್ಣಗೊಳಿಸಬೇಕೆಂದು ದೂರವಾಣಿ ಮೂಲಕ ತಿಳಿಸಿದರು.
ಹೆಬ್ರಿಯಿಂದ ಆಗುಂಬೆ ಘಾಟಿವರೆಗೆ ಕಾಮಗಾರಿಗೆ ₹72 ಕೋಟಿ ಬಿಡುಗಡೆಯಾಗಿದೆ. ಹೆಬ್ರಿ ಬಳಿಕ ಆಗುಂಬೆ ವರೆಗೆ ಕಾಮಗಾರಿಗೆ ಡಿ.ಪಿ.ಆರ್ ಅನ್ನು ತ್ವರಿತವಾಗಿ ತಯಾರಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಭೂ ಸ್ವಾಧೀನ ಆದ ಭೂ ಮಾಲೀಕರಿಗೆ ನೋಟಿಸ್ ನೀಡಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ. ವಿನಾಕಾರಣ ಕಾಮಗಾರಿಯಲ್ಲಿ ವಿಳಂಬ ತೋರಿಸಬಾರದು ಎಂದು ಹೇಳಿದರು.
ಕಲ್ಮಾಡಿಯಿಂದ ಮಲ್ಪೆ ಹಾರ್ಬರ್ ವರೆಗಿನ 1.18 ಕಿ. ಮೀ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿಉಪಸ್ಥಿತರಿದ್ದರು.
ಭೂ ಸ್ವಾಧೀನ ಕಾರ್ಯಗಳನ್ನು ಕಂದಾಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಪೂರ್ಣಗೊಳಿಸಬೇಕು
ಕೋಟ ಶ್ರೀನಿವಾಸ ಪೂಜಾರಿ, ಸಂಸದ