
ಭ್ರಷ್ಟರ ರಕ್ಷಣೆಗೆ ಮುಂದಾದ ಸರ್ಕಾರ: ಸಿ.ಟಿ. ರವಿ
ಚಿಕ್ಕಮಗಳೂರು: ‘ಕೆಪಿಎಎಸ್‌ಸಿ ಅಕ್ರಮ ಕುರಿತು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಪ್ರತಿಭಾವಂತ ಅರ್ಹ ಉದ್ಯೋಗಾಕಾಂಕ್ಷಿಗಳ ಬದುಕಿಗೆ ಕೊಳ್ಳಿ ಇಟ್ಟವರ ರಕ್ಷಣೆಗೆ ಈ ಕ್ರಮ ಕೈಗೊಂಡಿರಬಹುದು ಎಂಬ ಅನುಮಾನ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಅರ್ಹ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜತೆ ಆಟವಾಡಿದ್ದಾರೆ. ಒಎಂಆರ್ ತಿದ್ದಿರುವ ಆಪಾದನೆ ಇದೆ. ಪ್ರಶ್ನೆ ಪತ್ರಿಕೆಗಳನ್ನು ಮುಂಚಿತವಾಗಿಯೇ ಕಳುಹಿಸಿಕೊಟ್ಟು ಹಣ ಪಡೆದು ರೆಸಾರ್ಟ್‌ಗಳಲ್ಲಿ ತರಬೇತಿ ಕೊಟ್ಟು ಪರೀಕ್ಷೆ ಬರೆಸಿರುವ ಗಂಭೀರ ಆಪಾದನೆ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸರ್ಕಾರ ಪ್ರಾಮಾಣಿಕ ಪರ ನಿಲ್ಲುತ್ತದೆ, ಭ್ರಷ್ಟಾಚಾರದ ವಿರುದ್ಧ ಇರುತ್ತದೆ ಎಂದು ಕೊಂಡಿದ್ದೇವು. ವಿಶೇಷ ತನಿಖಾ ತಂಡ ರಚಿಸಬೇಕು ಎಂದು ತೀರ್ಪು ಕೊಟ್ಟಾಗ ಅದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವ ಮೂಲಕ ನಮಗೆ ಅನುಮಾನ ಉಂಟು ಮಾಡುತ್ತಿದೆ’ ಎಂದರು.
ಹಗರಣ ಹಿಂದೆ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಇರುವ ಪ್ರಭಾವಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡುವ ಸಂದರ್ಭದಲ್ಲಿ ಪ್ರಭಾವಿ ಸಚಿವರ ಹೆಸರು ಅನುಮಾನಾಸ್ಪದವಾಗಿ ಕೇಳಿ ಬಂದಿದೆ. ಆದ್ದರಿಂದ ಈಗ ಸರ್ಕಾರ ಎಸ್‌ಐಟಿ ತನಿಖೆ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿದೆ ಎಂಬ ಅನುಮಾನ ಇದೆ. ಪ್ರತಿಭಾವಂತರ ಬದುಕಿಗೆ ಕೊಳ್ಳಿ ಇಟ್ಟವರ ರಕ್ಷಣೆಗೆ ಈ ಕ್ರಮ ಕೈಗೊಂಡಿರಬಹುದು ಎಂದು ದೂರಿದರು.
ಈ ನಿಲುವಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ನ್ಯಾಯಾಲಯ ಸೂಚನೆ ನೀಡಿರುವಂತೆ ಎಸ್‌ಐಟಿ ರಚನೆ ಮಾಡಬೇಕು. ಬೇಕಾದ ಸಂಪನ್ಮೂಲ ಒದಗಿಸಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು. ಪ್ರಮಾಣಿಕ ಜನರ ನಿರೀಕ್ಷೆ ಗಟ್ಟಿಗೊಳಿಸಬೇಕು ಎಂದು ಆಗ್ರಹಿಸಿದರು.
ಅದನ್ನು ಮೀರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ನಿಜವಾದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಕಸದ ಗುತ್ತಿಗೆಯಲ್ಲಿ ಅವ್ಯವಹಾರ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶ ಮಾಡಿರುವುದು ಸ್ವಾಗತ. ಇದರಲ್ಲೂ ಪ್ರಭಾವಿ ಸಚಿವರ ಹೆಸರು ಕೇಳಿ ಬರುತ್ತಿದೆ. ಮುನಿಯಪ್ಪ ಎಂಟರ್ಪ್ರೈಸ್ಸ್ ಯಾರದು ಎಂಬುದರ ಬಗ್ಗೆ ತನಿಖೆ ಮಾಡಿಸಬೇಕು. ಆಗ ಸತ್ಯ ಹೊರಗೆ ಬರುತ್ತದೆ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಸ್. ಪುಟ್ಟಸ್ವಾಮಿ ಇದ್ದರು.
‘ಖಾಲಿಯಾದ ಸರ್ಕಾರದ ಖಜಾನೆ’
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಅತಿಥಿ ಶಿಕ್ಷಕರಿಗೆ, ಅಡುಗೆ ಸಹಾಯಕರಿಗೆ, ಅಂಗವಿಕಲರಿಗೆ, ವೃದ್ಧರಿಗೆ, ವಿಧವೆಯರಿಗೆ ಪಿಂಚಣಿ ಹಣ ಕೊಡದಿರುವುದೇ ಇದಕ್ಕೆ ಸಾಕ್ಷಿ ಎಂದು ಸಿ.ಟಿ. ರವಿ ಹೇಳಿದರು.
‘ನಮ್ಮ ಬಜೆಟ್ ಗಾತ್ರ ₹4,48,004 ಕೋಟಿ. ವಾರ್ಷಿಕ ಆದಾಯ ₹3,15,050 ಕೋಟಿ, ಈ ಪೈಕಿ ತೆರಿಗೆಯಿಂದ ಬರುವ ವರಮಾನ ₹2,20,000 ಕೋಟಿ, ಕೇಂದ್ರ ಕೊಡುವ ಪಾಲು ₹79,050 ಕೋಟಿ, 2026-27ನೇ ಸಾಲಿನಲ್ಲಿ ಬಜೆಟ್ ಕೊರತೆ ತುಂಬಿಸಲು ಮಾಡುವ ಸಾಲ ₹1,32,000 ಕೋಟಿ. ಆದರೂ ಆದಾಯದ ಕೊರತೆ ₹22,957 ಕೋಟಿ’ ಎಂದರು.
‘ಕಳೆದ 2 ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಹಣ ನೀಡಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನೇ ಅನುಷ್ಠಾನ ಮಾಡಲು ಹಣ ಇಲ್ಲ. ಹೋದ ಕಡೆಗಳಲ್ಲೆಲ್ಲಾ ಭರಪೂರ ಘೋಷಣೆ ಮಾಡುತ್ತಿದ್ದಾರೆ. ಹೊಸ ಘೋಷಣೆಗೆ ಹಣ ಎಲ್ಲಿಂದ ಬರಲಿದೆ’ ಎಂದು ಪ್ರಶ್ನಿಸಿದರು.