
ಹವ್ಯಾಸಿ ಪತ್ರಕರ್ತೆಯರನ್ನು ಥಳಿಸಿದ ದೆಹಲಿ ಪೊಲೀಸರು: ಆರೋಪ
ನವದೆಹಲಿ: ‘ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಎಂಬ ಇಬ್ಬರು ಹವ್ಯಾಸಿ ಪತ್ರಕರ್ತೆಯರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು, ಬಳಿಕ ಅವರನ್ನು ಥಳಿಸಿದ್ದಾರೆ’ ಎಂದು ಆರೋಪಿಸಲಾಗಿದೆ. ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿಗಾರಿಕೆಗಾಗಿ ತೆರಳಿದ್ದೆವು. ರೇಖಾ ಅವರಿಗೆ ಪ್ರಶ್ನೆಗಳನ್ನು ಕೇಳಲು ಬಯಸಿದ್ದೆವು. ಆದರೆ, ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡು ಸಾಕೇತ್ ಪೊಲೀಸ್ ಠಾಣೆಗೆ ಕರೆದೊಯ್ದರು’ ಎಂದು ವಿಡಿಯೊವೊಂದರಲ್ಲಿ ಪತ್ರಕರ್ತೆಯರು ವಿವರಿಸಿದ್ದಾರೆ.
‘ಪೊಲೀಸರು ನಮ್ಮನ್ನು ಕೊಠಡಿಗೆ ಕರೆದುಕೊಂಡು ಹೋಗಿ, ನಮ್ಮ ಜೊತೆ ಕ್ರೂರವಾಗಿ ವರ್ತಿಸಿದರು. ನಮ್ಮ ಮೇಲೆ ದೌರ್ಜನ್ಯ ಎಸಗಿದರು. ನಾವು ಯಾವ ಸಮುದಾಯಕ್ಕೆ ಸೇರಿದವರು ಎಂದು ಕೇಳಿದರು. ಉತ್ತರಿಸಿದ ಮೇಲೆ ಮತ್ತೊಮ್ಮೆ ಥಳಿಸಿದರು’ ಎಂದಿದ್ದಾರೆ. ಕಾಲು ಮತ್ತು ತೋಳುಗಳಿಗೆ ಗಾಯಗಳಾದ ದೃಶ್ಯಗಳನ್ನೂ ವಿಡಿಯೊದಲ್ಲಿ ತೋರಿಸಲಾಗಿದೆ.
‘ವರದಿಗಾರಿಕೆ ನಡೆಸುತ್ತಿದ್ದ ಸ್ಥಳದಲ್ಲಿಯೇ ಇಬ್ಬರು ಪತ್ರಕರ್ತೆಯರನ್ನು ದೆಹಲಿ ಪೊಲೀಸರ ಗುಂಪು ಎಳೆದಾಡಿತು. ಬಳಿಕ, ಇಬ್ಬರನ್ನೂ ಪೊಲೀಸ್ ವಾಹನದವರೆಗೆ ಎಳೆದುಕೊಂಡು ಹೋಗಲಾಯಿತು. ಠಾಣೆಯ ಕೊಠಡಿಯೊಳಗೆ ಕರೆದುಕೊಂಡು ಹೋದ ಮಹಿಳಾ ಪೊಲೀಸರು ಪತ್ರಕರ್ತೆಯರನ್ನು ಥಳಿಸಿದ್ದಾರೆ. ಇಬ್ಬರೂ ಯಾವ ಧರ್ಮಕ್ಕೆ ಸೇರಿದವರು ಎಂದು ತಿಳಿದ ಬಳಿಕ ಮತ್ತೊಮ್ಮೆ ಥಳಿಸಲಾಗಿದೆ. ಅವರ ಧರ್ಮವನ್ನು ಗುರಿಯಾಗಿಸಿ, ಇಬ್ಬರನ್ನೂ ನಿಂದಿಸಿದ್ದಾರೆ. ಎಫ್‌ಐಆರ್ ದಾಖಲು ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ
– ಘಟನೆ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕೋರ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ , ಪ್ರೆಸ್ ಅಸೋಸಿಯೇಷನ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್
‘ಸ್ಕೂಟರ್ ನಿಲ್ಲಿಸಿದ್ದರು’
ಇಬ್ಬರು ಮಹಿಳೆಯರು ವಿವಿಐಪಿ ಮಾರ್ಗದಲ್ಲಿ ತಮ್ಮ ಸ್ಕೂಟರ್ ನಿಲ್ಲಿಸಿದ್ದರು. ವಾಹನ ತೆರವು ಮಾಡುವಂತೆ ಪದೇ ಪದೇ ಸೂಚಿಸಿದರೂ ತೆಗೆಯಲಿಲ್ಲ. ಆದ್ದರಿಂದ ತನಿಖೆಗಾಗಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಈ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆಅನಂತ್ ಮಿತ್ತಲ್, ಡಿಸಿಪಿ (ದಕ್ಷಿಣ)
ಹಲ್ಲೆ ನಡೆಸಿದ ಆರೋಪವು ಗಂಭೀರವಾದುದು ಮತ್ತು ಖಂಡನೀಯ. ಪತ್ರಕರ್ತರ ಧ್ವನಿಯನ್ನು ಬಲಪ್ರಯೋಗದಿಂದ ಹತ್ತಿಕ್ಕಲು ಸಾಧ್ಯವಿಲ್ಲ. ಪತ್ರಕರ್ತೆಯರ ಪರ ನಾವು ನಿಲ್ಲುತ್ತೇವೆ
ಕರ್ನಾಟಕ ಪತ್ರಕರ್ತೆಯರ ಸಂಘ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-51-352618338