
ನ್ಯೂಯಾರ್ಕ್: ರೈಲಿಗೆ ಸಿಲುಕಿ ಭಾರತ ಮೂಲದ ಮಹಿಳೆ ಸಾವು
ವಾಷಿಂಗ್ಟನ್: ನ್ಯೂಯಾರ್ಕ್‌ನ ಸಬ್‌ವೇ ರೈಲು ನಿಲ್ದಾಣದಲ್ಲಿ ಭಾರತ ಮೂಲದ ಮಹಿಳೆ ಮತ್ತು ಅವರ ನೇಪಾಳಿ-ಅಮೆರಿಕನ್ ಸ್ನೇಹಿತ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರಲ್ಲಿ ಒಬ್ಬರು ರೈಲು ಹಳಿ ಮೇಲೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ಇಳಿದ ಮತ್ತೊಬ್ಬರೂ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ ಮತ್ತು ಸೆಯರ್‌ವಿಲ್ಲೆ ನಿವಾಸಿ ನವಮ್ ಕೌಲ್ ಎಂದು ಗುರುತಿಸಲಾಗಿದೆ. ಇಬ್ಬರಿಗೂ 24 ವರ್ಷ ವಯಸ್ಸಾಗಿತ್ತು ಎಂದು 'ನ್ಯೂಯಾರ್ಕ್ ಡೈಲಿ ನ್ಯೂಸ್' ವರದಿ ಮಾಡಿದೆ.
ಹಳಿಗೆ ಯಾರು ಮೊದಲು ಬಿದ್ದದ್ದರು ಎಂಬುದು ದೃಢಪಟ್ಟಿಲ್ಲ. ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಕೌಲ್ ಮೊದಲಿಗೆ ಹಳಿಗೆ ಬಿದ್ದಿರಬಹುದು. ಅವರನ್ನು ರಕ್ಷಿಸಲು ಹೋದ ಚಿತ್ರೆ ಸಹ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಕೌಲ್, 2020ರಿಂದ 2024ರವರೆಗೆ ನ್ಯೂ ಬ್ರನ್ಸ್‌ವಿಕ್‌ನಲ್ಲಿರುವ ರಟ್ಜರ್ಸ್ ಬಿಸಿನೆಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಆದರೆ, ಪದವಿ ಪೂರೈಸಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ, ಚಿತ್ರೆ ಅವರು, 2024ರಲ್ಲಿ ರಟ್ಜರ್ಸ್-ನ್ಯೂ ಬ್ರನ್ಸ್‌ವಿಕ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್‌ನಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಚಿತ್ರೆ ಅವರು, ಅಕಾಡಿಯಾ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಕಾರ್ಯಾಚರಣೆ ತಜ್ಞರಾಗಿ ಕೆಲಸ ಮಾಡುತ್ತಿದ್ದು, ಕೌಲ್, ಬ್ಲೂಮ್‌ಬರ್ಗ್‌ನಲ್ಲಿ ಹಣಕಾಸು ದತ್ತಾಂಶ ವಿಶ್ಲೇಷಕರಾಗಿದ್ದರು.
‘ಈ ಇಬ್ಬರೂ ಮಾಜಿ ವಿದ್ಯಾರ್ಥಿಗಳ ದುರಂತ ಸಾವಿನ ಬಗ್ಗೆ ತಿಳಿದು ಅತ್ಯಂತ ದುಃಖಿತರಾಗಿದ್ದೇವೆ’ ಎಂದು ರಟ್ಜರ್ಸ್‌ನ ಡೋರಿ ಡೆವ್ಲಿನ್ ಹೇಳಿದ್ದಾರೆ.