
ಪೃಥ್ವಿರಾಜ್ ಸುಕುಮಾರನ್–ಕರೀನಾ ಕಪೂರ್ ಅಭಿನಯದ ‘ದಾಯ್ರಾ’ ಸೆ.18ಕ್ಕೆ ತೆರೆಗೆ
ಬಹುಭಾಷಾ ನಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಭಿನಯದ ‘ದಾಯ್ರಾ’ ಸಿನಿಮಾ ಸೆ.18ರಂದು ತೆರೆಕಾಣಲಿದೆ.
‘ತಲ್ವಾರ್’, ‘ರಾಝಿ’, ‘ಸ್ಯಾಮ್ ಬಹದ್ದೂರ್’ ಖ್ಯಾತಿಯ ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾದ ಟ್ರೇಲರ್ ಸೋಮವಾರ (ಆ.31) ಬಿಡುಗಡೆಯಾಗಿದೆ. ಕರೀನಾ ‘ಡಿಸಿಪಿ ಅಜೂನಿ ಕೊಹ್ಲಿ’ ಹಾಗೂ ಪೃಥ್ವಿರಾಜ್ ‘ಡಿಸಿಪಿ ರಮಣ್ ಕುಮಾರ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾನೂನು ಮತ್ತು ನ್ಯಾಯದ ವಿಚಾರದಲ್ಲಿ ವಿಭಿನ್ನ ನಿಲುವು ಹೊಂದಿರುವ ಈ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಸಂಘರ್ಷವೇ ಚಿತ್ರದ ಕಥೆಯ ಪ್ರಮುಖ ಎಳೆ.
ಕ್ರೈಮ್ ಥ್ರಿಲ್ಲರ್ ಆಗಿರುವ ‘ದಾಯ್ರಾ’ ಎನ್‌ಕೌಂಟರ್ ಪ್ರಕರಣದ ತನಿಖೆಯ ಸುತ್ತ ಸಾಗುತ್ತದೆ. ಹಲವು ನೈಜ ಘಟನೆಗಳಿಂದ ಸಿನಿಮಾ ಪ್ರೇರಿತವಾಗಿದೆ ಎನ್ನಲಾಗಿದೆ. ಯಶ್ ಕೇಸ್ವಾನಿ, ಸೈಮಾ ಅಗರ್ವಾಲ್ ಹಾಗೂ ಮೇಘನಾ ಗುಲ್ಜಾರ್ ಚಿತ್ರಕಥೆ ಬರೆದಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-51-1141635842