
ಕೊಪ್ಪಳ:ಡಿಜೆ ಬಂದ್ ಮಾಡಿಸಿದ್ದಕ್ಕೆ ಕಿಡಿ;ಗಣಪತಿ ಮೆರವಣಿಗೆ ನಿಲ್ಲಿಸಿ ಪ್ರತಿಭಟನೆ
ಕೊಪ್ಪಳ: ಗಣೇಶ ಮೂರ್ತಿಗಳ ಐದನೇ ದಿನದ ವಿಸರ್ಜನಾ ಮೆರವಣಿಗೆ ವೇಳೆ ಶುಕ್ರವಾರ ತಡರಾತ್ರಿ ಇಲ್ಲಿನ ಜವಾಹರ ರಸ್ತೆಯಲ್ಲಿ ಪೊಲೀಸರು ಡಿ.ಜೆ. ಬಂದ್ ಮಾಡಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು.
ಬಲವಂತವಾಗಿ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಕ್ಕೆ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಸಂಘದವರು ಅಸಮಾಧಾನಗೊಂಡರು. ಗಣಪತಿಯನ್ನು ಮುಂದಕ್ಕೆ ಸಾಗಿಸುವಂತೆ ಪೊಲೀಸರು ಒತ್ತಾಯ ಮಾಡಿದ್ದೂ ಅವರ ಆಕ್ರೋಶ ಮತ್ತಷ್ಟು ಹೆಚ್ಚಿಸಿತು.
ಇದರಿಂದ ಬೇಸತ್ತು ಗಣಪತಿ ಮೂರ್ತಿಗಳೊಂದಿಗೆ ರಸ್ತೆಯಲ್ಲೇ ಕುಳಿತು ಪೊಲೀಸರ ವಿರುದ್ಧ ಯುವಕರು ಪ್ರತಿಭಟನೆ ನಡೆಸಿದರು. ಜೈ ಶ್ರೀರಾಮ್, ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗಿದರು.
ಹಿಂದೂ ಹಬ್ಬಗಳಿಗೆ ಮಾತ್ರ ಈ ರೀತಿ ಪೊಲೀಸರು ತಡೆ ಒಡ್ಡುತ್ತಾರೆ ಎಂದು ಆರೋಪಿಸಿದ ಯುವಕರು ಪ್ರತಿಭಟನೆ ಮಾಡಿದ್ದರಿಂದ ಜವಾಹರ್ ರಸ್ತೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನೂಕು ನುಗ್ಗಾಟ ನಡೆದಿದ್ದರಿಂದ ಯುವಕರನ್ನು ಚದುರಿಸಲು ಪೊಲೀಸರು ಬಲ ಪ್ರಯೋಗ ಮಾಡಿದರು. ಬಹಳಷ್ಟು ಹೊತ್ತು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು.