
ಯೋಜಿತ ಪ್ರಗತಿಗೆ ‘ಮಂಗಳೂರು ಡಿಸೈನ್ ಕೌನ್ಸಿಲ್: ಸಿಎಂ ಆರ್ಥಿಕ ಸಲಹೆಗಾರ ಅತೀಕ್
ಮಂಗಳೂರು: ನೀರಿನ ಯಥೇಚ್ಛ ಲಭ್ಯತೆ, ಸಾಕಷ್ಟು ಸ್ಥಳಾವಕಾಶ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ , ಚೆಂದದ ಪರಿಸರವನ್ನು ಹೊಂದಿರುವ ಈ ನಗರದಲ್ಲಿ ಟೆಕ್ನಾಲಜಿ ಆಧರಿತ ಸಂಸ್ಥೆಗಳನ್ನು ಸುಸ್ಥಿರವಾಗಿ ಕಟ್ಟಿ ಬೆಳೆಸಲು ಹೇರಳ ಅವಕಾಶಗಳಿವೆ. ಇದರ ಸದ್ಬಳಕೆಗಾಗಿ ಮೂಲಸೌಕರ್ಯವನ್ನು ಯೋಜಿತ ರೀತಿಯಲ್ಲಿ ನಿರ್ಮಿಸಲು ಸರ್ಕಾರಕ್ಕೆ ಸಲಹೆ ನೀಡಲು ‘ಮಂಗಳೂರು ಡಿಸೈನ್ ಕೌನ್ಸಿಲ್’ ರೂಪಿಸುವ ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ಹೇಳಿದರು.
ರಾಜ್ಯ ಸರ್ಕಾರದ ‘ಬಿಯಾಂಡ್ ಬೆಂಗ ಳೂರು’ ಕಾರ್ಯಕ್ರಮದ ಅಂಗವಾಗಿ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಭಾಗಿತ್ವದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ವಾರ್ಷಿಕ ವಾಣಿಜ್ಯ ಮತ್ತು ತಂತ್ರಜ್ಞಾನ ಸಮ್ಮೇಳನದ ಆರನೇ ಆವೃತ್ತಿ ‘ಟೆಕ್ನೊವಾಂಜಾ 2026’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಗರದಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳು ಹೆಚ್ಚುತ್ತಿದ್ದರೆ, ಅದರ ಜೊತೆಯಲ್ಲೇ ಸಂಚಾರ ದಟ್ಟಣೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳತೊಡಗಿವೆ. ಇಂತಹ ಸಮಸ್ಯೆ ನಿವಾರಿಸಲು ಮಂಗಳೂರು ಡಿಸೈನ್ ಕೌನ್ಸಿಲ್ ಸರ್ಕಾರಕ್ಕೆ ನೆರವಾಗಲಿದೆ. ಕ್ರೆಡೈ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸಿಐಐ, ಎಂಜಿನಿಯರ್‌ಗಳ ಸಂಸ್ಥೆ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಗಳು ಸೇರಿ ಒಟ್ಟು ಒಂಬತ್ತು ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಇರಲಿದ್ದಾರೆ’ ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪರಿಷ್ಕೃತ ನಗರ ಮಹಾಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ಕರಡನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ನಡುವೆ, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯನ್ನು 130 ಚ.ಕಿ.ಮೀ.ಯಿಂದ 500 ಚ.ಕಿ.ಮೀಟರ್‌ಗೆ ವಿಸ್ತರಿಸುವ, ಬಿ.ಸಿ.ರೋಡ್– ಮೂಲ್ಕಿ, ಬಿ.ಸಿ.ರೋಡ್– ಕಾರ್ಕಳಕ್ಕೆ ಹೆದ್ದಾರಿ ಅಭಿವೃದ್ಧಿಪಡಿಸುವ ಪ್ರಸ್ತಾವಗಳು ಸರ್ಕಾರದ ಮುಂದಿವೆ. ಮಂಗಳೂರು– ಉಡುಪಿ ನಡುವೆ ಮೆಟ್ರೊ ರೈಲಿನ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು, ತಲಪಾಡಿಯಿಂದ ಸಸಿಹಿತ್ಲುವರೆಗೆ 18 ಮೀ ಅಗಲದ ರಸ್ತೆ ಅಭಿವೃದ್ಧಿಗೆ ಇಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇಂತಹ ಮೂಲಸೌಕರ್ಯಗಳಿಂದ ಕರಾವಳಿಯಲ್ಲಿ ಹೂಡಿಕೆಗೆ ಉತ್ತೇಜನ ಸಿಗಲಿದೆ’ ಎಂದರು.
‘ಮೂರು ವರ್ಷಗಳಲ್ಲಿ 15 ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಈ ಪ್ರದೇಶದಲ್ಲಿ ಸ್ಥಾಪನೆಯಾಗಿವೆ. ಐಟಿ ಬಿಟಿ ಜೊತೆಗೆ ಸ್ಮಾರ್ಟ್ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ, ಜಲಕ್ರೀಡೆ, ಸಮುದ್ರ ಕೇಂದ್ರಿತ ತಂತ್ರಜ್ಞಾನ ಅಭಿವೃದ್ಧಿಗೆ ಹೇರಳ ಅವಕಾಶಗಳು ಇಲ್ಲಿವೆ. ಮೀನುಗಾರಿಕೆ ಜೊತೆಗೆ ಸಮುದ್ರ ಸಸ್ಯಗಳ ಅಭಿವೃದ‌್ಧಿ, ಓಷಿನೋಗ್ರಾಫಿ, ಬಯೊ ಎಕಾನಮಿಗಳತ್ತಲೂ ಗಮನ ಹರಿಸಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಪಡಿಸಿ ಜಾಗತಿಕ ಕಂಪನಿಗಳನ್ನು ಸೆಳೆದರೆ, ಕರಾವಳಿಯ ಎಂಜಿನಿಯರಿಂಗ್ ಕಾಲೇಜು ಗಳಿಂದ ಪ್ರತಿ ವರ್ಷ ಹೊರಹೊಮ್ಮುವ 50 ಸಾವಿರಕ್ಕೂ ಹೆಚ್ಚು ಪದವೀಧರರ ವಲಸೆ ತಡೆಯಬಹುದು’ ಎಂದರು.
ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ಗುಪ್ತ, ಆಕ್ಸೆಂಚರ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಆಜಯ್ ವಿಜ್, ಟೆಕ್ ಮಹೀಂದ್ರದ ಮುಖ್ಯ ಸಾರ್ವಜನಿಕ ಅಧಿಕಾರಿ (ಸಿಪಿಒ) ರಿಚರ್ಡ್ ಲೋಬೊ, ಮಂಗಳೂರು ಕ್ಲಸ್ಟರ್‌ನ ಲ್ಯಾಂಡ್ ಇಂಡಸ್ಟ್ಟ್ರಿ ಆಂಕರ್ ರೋಹಿತ್ ಭಟ್ ಮೊದಲಾದವರು ಮಾತನಾಡಿದರು.
‘ಕೈಗಾರಿಕೆಗಳಿಗೆ ಇಲ್ಲ ಜಾಗದ ಕೊರತೆ’
ನವಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಮೂಡುಶೆಡ್ಡೆ– ಬೋಂದೆಲ್ ಬಳಿ ಫಲ್ಗುಣಿ ನದಿ ತೀರದಲ್ಲಿ ಒದಗಿಸಿದ್ದ ಸುಮಾರು 350 ಎಕರೆ ಜಾಗ ಖಾಲಿ ಬಿದ್ದಿದೆ. ಅದನ್ನು ಅಭಿವೃದ್ಧಿ ಚಟುವಟಿಕೆಗೆ ಒದಗಿಸಲು ಎನ್‌ಎಂಪಿಎ ತಾತ್ವಿಕ ಒಪ್ಪಿಗೆ ನೀಡಿದೆ. ಈ ಜಾಗವನ್ನು ಲೀಸ್‌ಗೆ ಕೊಡಲು ಕೇಂದ್ರ ಸರ್ಕಾರ ಸಮ್ಮತಿಸಿದರೆ ಐ.ಟಿ ಪಾರ್ಕ್, ಕ್ರಿಕೆಟ್ ಮೈದಾನಕ್ಕೆ ಅಗತ್ಯವಿರುವ ಜಾಗದ ಕೊರತೆ ನೀಗಲಿದೆ. ಬಳ್ಕುಂಜೆಯಲ್ಲಿ 350 ಎಕರೆ ಜಾಗವನ್ನ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅಲ್ಲೂ ಐಟಿ ಪಾರ್ಕ್‌ಗೆ ಜಾಗ ಲಭ್ಯ. ಪಡುಬಿದ್ರಿಯಲ್ಲೂ ಜಾಗ ಲಭ್ಯವಿದೆ ಜೆಸ್ಕೊ ಕಂಪನಿ ಹಿಂತಿರುಗಿಸಿದ ಜಾಗವೂ ಲಭ್ಯ’ ಎಂದು ಎಲ್.ಕೆ.ಅತೀಕ್ ತಿಳಿಸಿದರು.
ಜನರ ದೈನಂದಿನ ಬವಣೆಗಳಿಗೆ ನವೋದ್ಯಮಗಳಿಂದ ಪರಿಹಾರ
ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳ ಉತ್ಪನ್ನಗಳ ಪ್ರದರ್ಶನ ಟೆಕ್ನೋವಾಂಜಾದ ಪ್ರಮುಖ ಆಕರ್ಷಣೆಯಾಗಿತ್ತು. ದೈನಂದಿನ ಅವಶ್ಯಕ ಸೇವೆಗಳ ಪೂರೈಕೆಗೆ ಶಿರಸಿಯ ಗೌತಮ್ ಹೆಗಡೆ ಬೆಂಗಳೆ ಅವರು ‘ದಿ ಮೇಸ್ತ್ರಿ’ ನವೋದ್ಯಮ ಸಂಸ್ಥೆಯನ್ನು ರೂಪಸಿದ್ದು, ಅಡಿಕೆ ಕೊಯಿಲು ಕಾರ್ಮಿಕರಿಂದ ಹಿಡಿದು ಮನೆಯ ಪೂಜೆಗೆ ಪುರೋಹಿತರನ್ನು ಒದಗಿಸುವವರೆಗೆ 150ಕ್ಕೂ ಹೆಚ್ಚು ವಿಧದ ಸೇವೆಗಳನ್ನು ಉಚಿತವಾಗಿ ಒದಗಿಸುವ ವೇದಿಕೆ ಇದಾಗಿದೆ. ಜೈವಿಕ ಪದಾರ್ಥದಿಂದ ಸಿದ್ಧಪಡಿಸಿದ ಬಯೋಚಾರ್ (ಇದ್ದಿಲು ಹುಡಿ) ಅನ್ನು ಗೊಬ್ಬರದ ಜೊತೆ ಮಿಶ್ರ ಮಾಡಿ ಕೃಷಿಗೆ ಬಳಸುವ ವಿಧಾನವನ್ನು ಕಾರ್ಕಳದ ಶರತ್ ಕುಮಾರ್ ಸಿದ್ಧಪಡಿಸಿದ್ದಾರೆ. ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಕರಾರುವಾಕ್ಕಾಗಿ ಬೆಳೆದು ಉತ್ತಮ ಇಳುವರಿ ಪಡೆ ಯಲು ತಮ್ಮ ‘ಸುಸ್ಥಿರ ಬಯೊ ಆರ್ಗಾನಿಕ್ಸ್’ ಉತ್ಪನ್ನಗಳು ಸಹ ಕಾರಿ ಎಂದು ಅವರು ತಿಳಿಸಿದರು.