
ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ಜತೆಗೆ ಮಹಾಮಂಡಳಗಳಿಂದ ಧಾರ್ಮಿಕ,ಸಾಮಾಜಿಕ ಜಾಗೃತಿ
ಹುಬ್ಬಳ್ಳಿ: ಒಂದೆಡೆ ಜ್ಯೋತಿರ್ಲಿಂಗ ದರ್ಶನ, ಮತ್ತೊಂದೆಡೆ ಗರುಡ, ಚಂದಿರನ ಮೇಲೆ ವಿರಾಜಮಾನನಾದ ಪ್ರಥಮ ಪೂಜಿತ. ಜತೆಗೆ ಗೋ ರಕ್ಷಣೆ ಸಂದೇಶ ಸಾರುವ ಗಣಪ. ಹೀಗೆ ವಿಭಿನ್ನ ಗಣೇಶ ಮೂರ್ತಿಗಳು, ರೂಪಕಗಳು ಜನರನ್ನು ಸೆಳೆಯುತ್ತಿವೆ.
ಇಲ್ಲಿನ ಎಪಿಎಂಸಿ ಎದುರಿನ ಈಶ್ವರನಗರದ ಗಣೇಶ ಕಾಲೊನಿಯಲ್ಲಿ ‘ಗಜಪಡೆ ಯುವ ಬಳಗ’ದಿಂದ ಗಣೇಶೋತ್ಸವಕ್ಕಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಐತಿಹಾಸಿಕ ಕೆರಾಡಿ ಸಮೀಪದ ಮೂಡುಗಲ್ಲು ಕಾಡಿಲ್ಲಿರುವ ಕೇಶವನಾಥೇಶ್ವರ ಗುಹಾಂತರ ದೇವಾಲಯದ ಮಾದರಿ ನಿರ್ಮಿಸಿ, ವಿಘ್ನೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ನೈಜ ಸ್ವರೂಪ, ಗುಹೆಯ ವಿನ್ಯಾಸ ಮತ್ತು ಶಿಲ್ಪಕಲೆಯ ವೈಶಿಷ್ಟ್ಯಗಳನ್ನು ಮರುಸೃಷ್ಟಿಸಿರುವುದು ನೋಡುಗರನ್ನು ಆಕರ್ಷಿಸುತ್ತವೆ.
‘ನಾಡಿನ ಪ್ರಸಿದ್ಧ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳ ಪರಿಚಯವನ್ನು ಜನರಿಗೆ ಮಾಡಿಕೊಡಲು ಈ ರೀತಿಯ ವಿಶಿಷ್ಟ ಮಾದರಿ ನಿರ್ಮಿಸಲಾಗಿದೆ. ಕಳೆದ ವರ್ಷ ಉತ್ತರಕನ್ನಡ ಜಿಲ್ಲೆ ದಾಂಡೇಲಿ ಬಳಿಯ ಕವಳಾ ಗುಹೆ ಮಾದರಿ ನಿರ್ಮಿಸಲಾಗಿತ್ತು. 19ನೇ ದಿನ (ಅಕ್ಟೋಬರ್ 2) ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು’ ಎಂದು ಗಜಪಡೆ ಯುವ ಬಳಗದ ಅಧ್ಯಕ್ಷ ಮುತ್ತು ಹೆಬ್ಬಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ಗರುಡನ ಮೇಲೆ ಗಣೇಶ: ನಗರದ ಟೀಚರ್ಸ್ ಕಾಲೊನಿಯಲ್ಲಿ 15 ವರ್ಷಗಳಿಂದ ವಿಭಿನ್ನ ಮಾದರಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಈ ವರ್ಷ ಗರುಡನ ಮೇಲೆ ಕುಳಿತಿರುವ ವಿನಾಯಕನ ಮೂರ್ತಿ ಆಕರ್ಷಿಸುತ್ತಿದೆ. ಜತೆಗೆ ಮೂರ್ತಿಯ ದರ್ಶನಕ್ಕೆ ಹೋಗುವ ಮಾರ್ಗದಲ್ಲಿ ನಿರ್ಮಿಸಿರುವ ಮಿರರ್ ವರ್ಲ್ಡ್ ಮನರಂಜನೆ ನೀಡುತ್ತಿದೆ. ಈ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ 13 ದಿನ (ಸೆ.26ಕ್ಕೆ) ನಡೆಯಲಿದೆ.
ಉಣಕಲ್‌ನ ಕಲ್ಮೇಶ್ವರ ನಗರದಲ್ಲಿ 15 ಅಡಿ ಎತ್ತರದಲ್ಲಿ ಚಂದ್ರನ ಮೇಲೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ಕೃತಕ ಗಿಡಗಳು, ಹೂಬಳ್ಳಿಗಳು ಮಂಟಪವನ್ನು ಆವರಿಸಿವೆ. ಮಂಟಪದ ಒಂದು ಬದಿ ಈಶ್ವರ ಲಿಂಗ, ಇನ್ನೊಂದು ಬದಿ ಪರಮೇಶ್ವರನ ಮೂರ್ತಿ ಇದೆ. ‘ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದರು. ಈ ಮೂರ್ತಿಯನ್ನು ಮಂಗಳವಾರ (ಸೆ.22) ವಿಸರ್ಜನೆ ಮಾಡಲಾಗುವುದು’ ಎಂದು ಮಂಡಳಿಯವರು ತಿಳಿಸಿದರು.
ಜ್ಯೋತಿರ್ಲಿಂಗ ದರ್ಶನ: ನಗರದ ಮಂಗಳವಾರ ಪೇಟೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಮಾದರಿ ಹಾಗೂ ಜ್ಯೋತಿರ್ಲಿಂಗಗಳನ್ನು ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
‘ಪ್ರತಿ ವರ್ಷ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದರ ಮಾದರಿ ನಿರ್ಮಿಸಲಾಗುತ್ತಿದೆ. ಈ ಮೂಲಕ ಸ್ಥಳೀಯರಿಗೆ ದೇಶದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಅವುಗಳ ಮಹತ್ವವನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಗಣೇಶ ಮೂರ್ತಿ 9 ದಿನ (ಸೆ.22ಕ್ಕೆ) ವಿಸರ್ಜನೆಯಾಗಲಿದೆ’ ಎಂದು ಗಣೇಶ ಮಹಾಮಂಡಳದವರು ತಿಳಿಸಿದರು.
‘ಗಣೇಶೋತ್ಸವದ ಅಂಗವಾಗಿ ಜ್ಯೋತಿರ್ಲಿಂಗ ನಿರ್ಮಿಸಿರುವುದರಿಂದ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯ ಆಗುತ್ತಿದೆ. ಗಣಪತಿ ಮಂಡಳಿಯವರ ಈ ಪ್ರಯತ್ನ ಶ್ಲಾಘನೀಯ’ ಎಂದು ಸುಜಾತಾ ಸಂತಸ ವ್ಯಕ್ತಪಡಿಸಿದರು.
ವಿದ್ಯಾನಗರದ ಬಾಲಗಜಾನನ ಯುವಕ ಮಂಡಳದಿಂದ ಗೋಶಾಲೆ, ಹಳ್ಳಿಯ ಜೀವನ ಬಿಂಬಿಸುವ ಮಾದರಿ ನಿರ್ಮಿಸಿ, ಗೋ ಹತ್ಯೆ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ.
‘ಕಳೆದ 10 ವರ್ಷಗಳಿಂದ ಇಲ್ಲಿ ವಿಭಿನ್ನವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. 9 ದಿನ (ಸೆ.22ಕ್ಕೆ) ಗಣೇಶ ಮೂರ್ತಿ ವಿಸರ್ಜಿಸಲಾಗುವುದು’ ಎಂದು ವಿದ್ಯಾನಗರದ ಬಾಲಗಜಾನನ ಯುವಕ ಮಂಡಳದ ಅಧ್ಯಕ್ಷ ಅನೂಪ್ ನವಲಿ ತಿಳಿಸಿದರು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಆಚರಣೆ ಪ್ರತಿ ವರ್ಷ ವಿಭಿನ್ನ, ವಿಶಿಷ್ಟವಾಗಿರುತ್ತದೆ. ನಗರದ ವಿವಿಧೆಡೆ ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹಲವು ಗಜಾನನ ಮಂಡಳಿಗಳು ರೂಪಕ ಪ್ರದರ್ಶನದ ಮೂಲಕ ಜನರಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುತ್ತಿವೆ. ಆಯ್ದ ಕೆಲವು ಅತ್ಯಾಕರ್ಷಕ ಮೂರ್ತಿಗಳ ಮಾಹಿತಿ ಇಲ್ಲಿದೆ.