
ಶುಲ್ಕ ಹಿಂತಿರುಗಿಸಿ, ಮೊಕದ್ದಮೆ ವೆಚ್ಚ ಭರಿಸಲು ವಿಮಾನ ಯಾನ ಸಂಸ್ಥೆಗೆ ನಿರ್ದೇಶನ
ಮಂಗಳೂರು: ಬೈಸಿಕಲ್ ಅನ್ನು ರವಾನಿಸುವಾಗ ವಿಶೇಷ ನಿಗಾ ವಹಿಸಲು ₹2 ಸಾವಿರ ಶುಲ್ಕ ಪಾವತಿಸಿದ ಹೊರತಾಗಿಯೂ, ಆ ಸರಕನ್ನು ಜತನವಾಗಿ ರವಾನಿಸಲು ಕ್ರಮ ವಹಿಸದೇ ಇದ್ದ ಕಾರಣಕ್ಕೆ ವಿಶೇಷ ನಿರ್ವಹಣೆ ಶುಲ್ಕವನ್ನು ಪ್ರಯಾಣಿಕರಿಗೆ ಹಿಂತಿರುಗಿಸಬೇಕು ಹಾಗೂ ಮೊಕದ್ದಮೆ ವೆಚ್ಚವಾಗಿ ₹ 25 ಸಾವಿರ ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗೆ ನಿರ್ದೇಶನ ನೀಡಿದೆ.
ವಿಶೇಷ ಸಲಕರಣೆಗಳ ನಿರ್ವಹಣಾ ಶುಲ್ಕವನ್ನು ಪಾವತಿಸಿದ್ದರೂ ಪ್ರಯಾಣಿಕನ ಸೈಕಲ್ ಅನ್ನು ಸಾಮಾನ್ಯ ಲಗೇಜ್ ಬೆಲ್ಟ್ ಮೂಲಕ ರವಾನಿಸಿದ್ದು ಸೇವಾ ನ್ಯೂನತೆ ಎಂದು ಆಯೋಗವು ಪರಿಗಣಿಸಿದೆ.
ಚೆನ್ನೈ-ಮಂಗಳೂರು ನಡುವೆ 2025ರ ಜುಲೈ 27ರಂದು ಪ್ರಯಾ ಣಿಸಲು ಸುಳ್ಯದ ಹರಿಹರಪಲ್ಲತ್ತಡ್ಕದ ಸುಶಾಂತ್ ಎನ್.ಜಿ. ವಿಮಾನ ಟಿಕೆಟ್ ಕಾಯ್ದಿರಿಸಿದ್ದರು. ತರಬೇತಿ ಮತ್ತು ಸ್ಪರ್ಧಾತ್ಮಕ ರೇಸಿಂಗ್‌ಗಾಗಿ ಬಳಸುವ ಅಂದಾಜು ₹3 ಲಕ್ಷ ಮೌಲ್ಯದ ಬೈಸಿಕಲ್ ಸಾಗಾಟಕ್ಕೆ ವಿಶೇಷ ಸಲಕರಣೆ ನಿರ್ವಹಣೆ ವೆಚ್ಚವಾಗಿ ₹2 ಸಾವಿರ ಪಾವತಿಸಿದ್ದರು. ವಿಮಾನವು ಚೆನ್ನೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಅವರ ಸೈಕಲ್ ಇತರ ಲಗೇಜ್‌ಗಳೊಂದಿಗೆ ಸಾಮಾನ್ಯ ಬ್ಯಾಗೇಜ್ ಕನ್ವೇಯರ್ ಬೆಲ್ಟ್‌ನಲ್ಲಿ ಬಂದಿತ್ತು. ಈ ಬಗ್ಗೆ ಅವರು ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ವಿಮಾನಯಾನ ಸಂಸ್ಥೆಗೆ ಇ–ಮೇಲ್‌ನಲ್ಲಿ ದೂರು ಸಲ್ಲಿಸಿ ವಿಶೇಷ ನಿರ್ವಹಣಾ ಶುಲ್ಕ ಮರಳಿಸುವಂತೆ ಕೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿಮಾನಯಾನ ಸಂಸ್ಥೆ, ವಿಶೇಷ ನಿರ್ವಹಣೆ ಶುಲ್ಕ ಮರಳಿಸದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಸುಶಾಂತ್ ಎನ್.ಜಿ. ₹2 ಸಾವಿರ ಪಾವತಿಸಿದ್ದನ್ನು ಒಪ್ಪಿಕೊಂಡಿದ್ದ ವಿಮಾನ ಯಾನ ಸಂಸ್ಥೆ, ‘ಬ್ಯಾಗೇಜ್, ವಿಶೇಷ ವಸ್ತು ತುಂಬಾ ದೊಡ್ಡದಾಗಿರದಿದ್ದರೆ ಸಾಮಾನ್ಯ ಬ್ಯಾಗೇಜ್ ಬೆಲ್ಟ್ ಮೂಲಕವೇ ರವಾನಿಸಬಹುದು. ಯಾವುದೇ ಹಾನಿ ಇಲ್ಲದೆ ಬೈಸಿಕಲ್ ತಲುಪಿಸಲಾಗಿದೆ’ ಎಂದು ವಾದಿಸಿತ್ತು. ‘ಬೈಸಿಕಲ್‌ಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅದನ್ನು ದೂರುದಾರರಿಗೆ ತಲುಪಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ವಿಶೇಷ ನಿರ್ವಹಣೆ ಶುಲ್ಕವಾಗಿ ₹2 ಸಾವಿರ ಪಡೆದರೂ ವಿಶೇಷ ಕಾಳಜಿ, ಎಚ್ಚರಿಕೆ ವಹಿಸದೇ ಇರು ವುದು ಸೇವಾ ನ್ಯೂನತೆ’ ಎಂದು ಹೇಳಿದೆ.
‘₹2 ಸಾವಿರ ವಿಶೇಷ ಸಲಕರಣೆ ನಿರ್ವಹಣಾ ಶುಲ್ಕವನ್ನು 45 ದಿನಗಳ ಒಳಗೆ ಮರುಪಾವತಿಸಬೇಕು. ಸೇವೆಯ ನ್ಯೂನತೆ, ಮಾನಸಿಕ ಯಾತನೆ ಮತ್ತು ಅನನುಕೂಲತೆಗಾಗಿ ₹20 ಸಾವಿರ ಪರಿಹಾರ ಹಾಗೂ ಮೊಕದ್ದಮೆ ವೆಚ್ಚವಾಗಿ ₹5 ಸಾವಿರ ಪಾವತಿಸಬೇಕು. ಗಡುವಿನ ಒಳಗೆ ಈ ಮೊತ್ತ ಪಾವತಿಸದಿದ್ದರೆ ವಾರ್ಷಿಕ ಶೇ 6 ರಷ್ಟು ಬಡ್ಡಿ ಅನ್ವಯವಾಗುತ್ತದೆ. ಈ ಆದೇಶವನ್ನು ಪಾಲಿಸದಿದ್ದರೆ ದೂರುದಾರ ವ್ಯಕ್ತಿ ವಿಮಾನ ಯಾನ ಸಂಸ್ಥೆ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಬಹುದು’ ಎಂದು ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ. ಹಂದಿಗೋಳ್ ಹಾಗೂ ಸದಸ್ಯೆ ಶಾರದಮ್ಮ ಎಚ್.ಜಿ. ಆದೇಶದಲ್ಲಿ ತಿಳಿಸಿದ್ದಾರೆ.