
ಪ್ರಜಾಸೇವೆ ಆಂದೋಲನ: ಜನರ ಮನೆಬಾಗಿಲಿಗೆ ಸರ್ಕಾರ
ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಉಪ್ಪರಪೇಟೆಯಲ್ಲಿ ಶನಿವಾರ ಪ್ರಜಾಸೇವೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ಸುದರ್ಶನ ಯಾದವ್ ಮಾತನಾಡಿ, ‘ಸರ್ಕಾರವೇ ಜನರ ಮನೆಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವುದು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಿ, ಬಗೆಹರಿಸುವುದು ಪ್ರಜಾಸೇವೆ ಆಂದೋಲನದ ಉದ್ದೇಶ’ ಎಂದು ಹೇಳಿದರು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳ ಅರ್ಜಿಗಳನ್ನು ಪಡೆದು, ಸ್ಥಳದಲ್ಲೇ ಅವರ ಸಮಸ್ಯೆ ಆಲಿಸುತ್ತಾರೆ. ಪ್ರತಿಯೊಂದು ಅರ್ಜಿಗೂ ಒಂದು ಡಿಜಿಟಲ್ ಸಂಖ್ಯೆ ನೀಡಲಾಗುತ್ತದೆ. ಪ್ರತಿದಿನ, ಪ್ರತಿವಾರ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಹಂತದಲ್ಲಿ ಪರಿಹಾರವಾಗುವ ಅರ್ಜಿಗಳನ್ನು 7 ದಿನದ ಒಳಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಏಳು ದಿನಗಳ ನಂತರ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಯುತ್ತದೆ. ಕೆಲವು ಅರ್ಜಿಗಳಿಗೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಅಂತಹ ಅರ್ಜಿಗಳು ಯಾರ ಬಳಿ, ಯಾವ ಹಂತದಲ್ಲಿದೆ ಎಂಬ ವಿವರ ನೀಡಲಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಅಮರನಾರಾಯಣರೆಡ್ಡಿ, ರಾಜೇಂದ್ರ, ಶ್ರೀನಿವಾಸ ನಾಯಕ್, ರಾಮಚಂದ್ರಾರೆಡ್ಡಿ, ಮಹೇಂದ್ರ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.