
ಗುಡಗೇರಿ: ಸಾಂಪ್ರದಾಯಿಕ ಭಜನೆ ಮತ್ತು ಭಕ್ತಿಭಾವದಿಂದ ಗಣೇಶನಿಗೆ ಭಕ್ತಿಪೂರ್ಣ ವಿದಾಯ
ಗುಡಗೇರಿ: ಗಣೇಶೋತ್ಸವದಲ್ಲಿ ಡಿ.ಜೆ ಸೌಂಡ್ ಹಾಗೂ ಕರ್ಕಶ ನೃತ್ಯಗಳೇ ರಾಜಿಸುವ ಈ ದಿನಗಳಲ್ಲಿ, ಇಲ್ಲಿನ ಗ್ರಾಮದ ಕಲ್ಮಠ ಓಣಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯನ್ನು ಡಿಜೆ ಅಬ್ಬರವಿಲ್ಲದೆ, ಸಾಂಪ್ರದಾಯಿಕ ಭಜನೆ ಮತ್ತು ಭಕ್ತಿಭಾವದಿಂದ ನೆರವೇರಿಸಲಾಯಿತು.
ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಭಕ್ತರು ಭಜನೆ ಮಾಡುತ್ತಾ ಗಣೇಶನನ್ನು ಸ್ಮರಿಸುತ್ತಾ ವಿಸರ್ಜನಾ ಸ್ಥಳಕ್ಕೆ ತೆರಳಿದರು. ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಇಂಥ ಆಚರಣೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.
‘ಡಿ.ಜೆ ಸಂಸ್ಕೃತಿಯು ಯುವ ಸಮುದಾಯವನ್ನು ತಪ್ಪು ದಾರಿಗೆ ಒಯ್ಯುತ್ತಿದೆ. ಅದನ್ನು ತಪ್ಪಿಸಲು ನಾವು ಧಾರ್ಮಿಕವಾಗಿ, ಸಾಂಪ್ರದಾಯಿಕವಾಗಿ ಭಜನೆ ಮಾಡುವ ಮೂಲಕ ಗಣೇಶ ವಿಸರ್ಜನೆ ಮಾಡಲು ತೀರ್ಮಾನ ಕೈಗೊಂಡೆವು’ ಎಂದು ಕಮಿಟಿಯ ಸದಸ್ಯ ರಾಜು ಹೊಂಬಳ ಹೇಳಿದರು.