
ನಕಲಿ ಔಷಧ ಜಾಲಕ್ಕೆ ಕಡಿವಾಣ ಹಾಕಲು ನಿಯಮ: ಸಚಿವ ಯು.ಟಿ. ಖಾದರ್
ಗದಗ: ‘ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಔಷಧಗಳು ಪತ್ತೆಯಾಗಿದ್ದು, ಇಡೀ ದೇಶದಲ್ಲಿ ಈ ಜಾಲಕ್ಕೆ ಕಡಿವಾಣ ಹಾಕುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ನಿಯಮ ರೂಪಿಸಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣವನ್ನು ಈಗಾಗಲೇ ಎಸ್‌ಐಟಿಗೆ ವಹಿಸಲಾಗಿದೆ. ತನಿಖೆ ವೇಳೆ ಬೇರೆ ಬೇರೆ ವಿಚಾರಗಳು ಗಮನಕ್ಕೆ ಬಂದಿದೆ. ಇಂತಹ ಕೃತ್ಯದಲ್ಲಿ ತೊಡಗಿದವರು ಎಷ್ಟೇ ದೊಡ್ಡವರಾಗಿದ್ದರೂ ಮಟ್ಟ ಹಾಕುತ್ತೇವೆ’ ಎಂದರು.
‘ರಾಜ್ಯದೆಲ್ಲೆಡೆ ಆಂಬುಲೆನ್ಸ್ ಸೌಕರ್ಯ ಒದಗಿಸುವ ಕುರಿತು ಕ್ರಮ ವಹಿಸಲಾಗಿದೆ. ಈ ಸಂಬಂಧ ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತದೆ. ನಗರ ಪ್ರದೇಶದಲ್ಲಿ 15 ನಿಮಿಷ, ಗ್ರಾಮೀಣ ಪ್ರದೇಶದಲ್ಲಿ 20 ನಿಮಿಷದೊಳಗೆ ಆಂಬುಲೆನ್ಸ್ ಸೇವೆ ಒದಗಿಸದಿದ್ದರೆ ದಂಡ ಹಾಕಲಾಗುತ್ತದೆ’ ಎಂದು ತಿಳಿಸಿದರು.
ಇಡಿ, ಐಟಿ ದಾಳಿ; ವಿರೋಧ ಪಕ್ಷದವರ ಬೆದರಿಸುವ ಯತ್ನ: ‘ಕೇಂದ್ರ ಸರ್ಕಾರವು ವಿರೋಧ ಪಕ್ಷದವರಿಗೆ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮೂಲಕ ಬೆದರಿಕೆಯೊಡ್ಡುತ್ತಿದೆ. 10 ವರ್ಷದಿಂದ ಇದೇ ಛಾಳಿ ಮುಂದುವರಿಸಿಕೊಂಡು ಬಂದಿದೆ. ಬಿಜೆಪಿ ಮುಖಂಡರ ಮೇಲೆ ಯಾವುದೇ ದಾಳಿ ಆಗಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಆರೋಪಿಸಿದರು.
ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಈ ದಾಳಿ ರಾಜಕೀಯ ಪ್ರೇರಿತ. ವಿರೋಧ ಪಕ್ಷಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದರು.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಪಡೆಯಲಾಗದ್ದು ಬಿಜೆಪಿಯು ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಜೆನ್ ಝೀ ಹೋರಾಟದ ಬಳಿಕ ಸಂಪೂರ್ಣ ಹತಾಶರಾಗಿದ್ದಾರೆ. ಹಾಗಾಗಿ, ವಿರೋಧ ಪಕ್ಷದವರನ್ನು ಬಗ್ಗುಬಡಿಯಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘2019ರಿಂದ 2023ರವರೆಗೆ ಶೇ 40ರಷ್ಟು ಕಮಿಷನ್ ಪಡೆದ ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಜನರು ಸಾಯುವಾಗ ಹೆಣದ ಮೇಲೆ ಹಣ ಮಾಡಿದ ನಾಲಾಯಕ್‌ಗಳು ಅವರು’ ಎಂದು ಕಿಡಿಕಾರಿದರು.