ವಿಕೇಂದ್ರೀಕರಣವೇ ಪ್ರಜಾಪ್ರಭುತ್ವದ ಸೌಂದರ್ಯ: ಎ.ಎನ್. ಮಹೇಶ್

ವಿಕೇಂದ್ರೀಕರಣವೇ ಪ್ರಜಾಪ್ರಭುತ್ವದ ಸೌಂದರ್ಯ: ಎ.ಎನ್. ಮಹೇಶ್

ವಿಕೇಂದ್ರೀಕರಣವೇ ಪ್ರಜಾಪ್ರಭುತ್ವದ ಸೌಂದರ್ಯ: ಎ.ಎನ್. ಮಹೇಶ್

ಚಿಕ್ಕಮಗಳೂರು: ಅಧಿಕಾರದ ವಿಕೇಂದ್ರೀ ಕರಣ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ತಲುಪುವುದರಲ್ಲಿ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಅಡಗಿದೆ. ಈ ಆಶಯವನ್ನು ಜೀವಂತವಾಗಿಡಲು ಯುವ ಸಮುದಾಯ ಜಾಗೃತವಾಗಬೇಕು ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ಇತ್ತು. ಅಥೆನ್ಸ್, ಇಂಗ್ಲೆಂಡ್‌ಗಳಲ್ಲಿ ಪ್ರಜಾಪ್ರಭುತ್ವ ಬೆಳೆದು ಬಂದರೂ, ಭಾರತದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಟ್ಟಿ ಬುನಾದಿ ಹಾಕಿದೆ ಎಂದು ಹೇಳಿದರು.

ಯಾವ ವ್ಯಕ್ತಿ ಶೋಷಣೆ ಹಾಗೂ ತುಳಿತಕ್ಕೆ ಒಳಗಾಗಿದ್ದನೋ, ಆತನೇ ತನ್ನ ಜ್ಞಾನದ ಬಲದಿಂದ ಉನ್ನತ ಪದವಿ ಪಡೆದು ದೇಶಕ್ಕೆ ಜಗತ್ತೇ ಮೆಚ್ಚುವಂತಹ ಸಂವಿಧಾನ ನೀಡಿದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಮೂಲಮಂತ್ರಗಳ ಮೇಲೆ ರೂಪುಗೊಂಡಿರುವ ಸಂವಿಧಾನದಲ್ಲಿ ಮಾನವೀಯತೆ ಹಾಗೂ ಸರ್ವಜನರ ಹಿತ ಅಡಗಿದೆ ಎಂದರು.

ರಾಜಕಾರಣದಲ್ಲಿ ಇದ್ದವರಿಗೆ ಸಾಮಾಜಿಕ ಕಾಳಜಿ, ಬದ್ಧತೆ ಮುಖ್ಯವಾಗಿತ್ತು. ಆದರೆ, ಇಂದು ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಗುತ್ತಿಗೆದಾರರು ಅಧಿಕಾರದ ಕೇಂದ್ರಬಿಂದು ಆಗುತ್ತಿರುವುದು ದುರಂತ. ಹಣದ ಪ್ರಭಾವದಿಂದ ಮತದಾನ ನಡೆಯುವ ವಾತಾವರಣ ಸೃಷ್ಟಿಯಾಗುತ್ತಿದ್ದು, ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ದಿನಾಚರಣೆ ಎನ್ನುವುದು ಕೇವಲ ಒಂದು ದಿನದ ಸರ್ಕಾರಿ ಕಾರ್ಯಕ್ರಮವಾಗಿ ಉಳಿಬಾರದು. ಅದು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು. ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯುತ್ತಿರುವ ಯುವಕ-ಯುವತಿಯರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಉಪನ್ಯಾಸ ನೀಡಿ, ‘ಮತದಾನ ಎನ್ನುವುದು ಸಂವಿಧಾನ ನಮಗೆ ನೀಡಿರುವ ಅತ್ಯಂತ ಶಕ್ತಿಶಾಲಿ ಆಯುಧ. ಹಣ, ಹೆಂಡ, ಪ್ರಲೋಭನೆಗಳಿಗೆ ಬಲಿಯಾಗಿ ಮತ ಮಾರಿಕೊಂಡರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಶಿಸಿ ಮತ್ತೆ ರಾಜಪ್ರಭುತ್ವದ ಆಡಳಿತ ತಲೆದೋರುವ ಅಪಾಯವಿದೆ’ ಎಂದರು.

ಸ್ವಾತಂತ್ರ್ಯಕ್ಕೂ ಮುನ್ನ ಶೇ 17ರಷ್ಟು ಜಮೀನ್ದಾರರು, ತೆರಿಗೆದಾರರು ಹಾಗೂ ಪದವೀಧರರಿಗೆ ಮಾತ್ರ ಮತದಾನದ ಹಕ್ಕಿತ್ತು. ಆದರೆ, ಅಂಬೇಡ್ಕರ್ ಅವರ ನೇತೃತ್ವದಲ್ಲಿ 2 ವರ್ಷ 11 ತಿಂಗಳು 18 ದಿನಗಳ ಶ್ರಮದಿಂದ ರೂಪುಗೊಂಡ ಭಾರತದ ಸಂವಿಧಾನವು, 18 ವರ್ಷ ವಯಸ್ಸು ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕು ನೀಡಿತು. ಈ ಹಿಂದೆ ಮಹಾರಾಣಿಯ ಗರ್ಭದಿಂದ ರಾಜ-ಮಹಾರಾಜರು ಹುಟ್ಟುತ್ತಿದ್ದ ಕಾಲವಿತ್ತು. ಆದರೆ, ಇಂದು ಮತಪತ್ರದ ಮೂಲಕ ಈ ದೇಶದ ಪ್ರಧಾನಿ, ಮುಖ್ಯಮಂತ್ರಿ, ಶಾಸಕರು ಆಯ್ಕೆಯಾಗುತ್ತಿದ್ದಾರೆ ಎಂದು ಹೇಳಿದರು.

ಮತ ಎಂದರೆ ಗರಿಗರಿಯ ನೋಟಲ್ಲ, ಕುಕ್ಕರ್, ಪಾತ್ರೆ ಅಥವಾ ಬಿರಿಯಾನಿ ಪ್ಯಾಕೆಟ್ ಅಲ್ಲ. ಮತದಾನ ಎಂದರೆ ಹೆತ್ತ ಮಗು ಮತ್ತು ತಾಯಿಯಿದ್ದಂತೆ. ಅಂತಹ ಪವಿತ್ರ ಹಕ್ಕನ್ನು ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳಲು ಸಾಧ್ಯ ಎಂದರು.

‘ಬುದ್ಧನ ಕಾಲದ ಗಣತಂತ್ರ, 12ನೇ ಶತಮಾನದ ಬಸವಣ್ಣನ ಅನುಭವ ಮಂಟಪ ಹಾಗೂ 1245ರ ಮ್ಯಾಗ್ನಾಕಾರ್ಟಾ ಪ್ರಜಾಪ್ರಭುತ್ವದ ತಳಹದಿಯಾಗಿವೆ. ಸಂವಿಧಾನ ನೀಡಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ’ ಎಂದು ತಿಳಿಸಿದರು.

ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಹರೀಶ್ ಸಿಂಗಟಗೆರೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನಟೇಶ್, ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ಶಾಲಾ ಶಿಕ್ಷಣ ಇಲಾಖೆಯ(ಪದವಿ ಪೂರ್ವ) ಉಪನಿರ್ದೇಶಕಿ ಮಂಜುಳಾ, ಕೆಡಿಪಿ ಸದಸ್ಯ ಲಕ್ಷ್ಮಣ್, ಮುಖಂಡರಾದ ಮರ್ಲೆ ಅಣ್ಣಯ್ಯ, ತರೀಕೆರೆ ವೆಂಕಟೇಶ್, ದೌರ್ಜನ್ಯ ನಿಯಂತ್ರಣ ಸಮಿತಿಯ ಲಕ್ಷ್ಮಣ್, ಅನಿಲ್‌ಕುಮಾರ್, ನಂಜುಂಡಯ್ಯ, ಭೀಮಯ್ಯ, ವಸಂತ್, ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಇದ್ದರು.

ಜಿಲ್ಲಾ ಮಟ್ಟದಲ್ಲಿ ಯುವ ಸಂಸತ್‌

ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಅರ್ಥ ಮತ್ತು ಮೌಲ್ಯಗಳು ಆಡಳಿತದ ವಿಕೇಂದ್ರೀಕರಣದ ಮೂಲಕ ಪ್ರತಿಯೊಬ್ಬ ಪ್ರಜೆಗೂ ತಲುಪುತ್ತಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅರಿವು ಹೆಚ್ಚಿಸಲು ಈ ಬಾರಿ ‘ಯುವ ಸಂಸತ್’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸೆ. 16ರಿಂದ ಅ. 10ರವರೆಗೆ ತಾಲ್ಲೂಕು ಮಟ್ಟದಲ್ಲಿ ಹಾಗೂ ಅ. 11ರಿಂದ 30ರವರೆಗೆ ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ವಿಧಾನಸಭೆ ಮಾದರಿಯಲ್ಲಿ ತಾಲ್ಲೂಕಿಗೆ 124 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಯುವ ಸಂಸತ್ ಅಧಿವೇಶನ ನಡೆಸಲಾಗುವುದು. ಆ ನಂತರ ರಾಜ್ಯಮಟ್ಟದ ಯುವ ಸಂಸತ್ ನಡೆಯಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವಕ-ಯುವತಿಯೂ ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. 2024ರ ಅಕ್ಟೋಬರ್ 1ಕ್ಕೆ 18 ವರ್ಷ ವಯಸ್ಸು ಭರ್ತಿಯಾಗುವ ಯುವಜನರು ಅಕ್ಟೋಬರ್ 23ರೊಳಗೆ ತಮ್ಮ ವ್ಯಾಪ್ತಿಯ ಬಿಎಲ್‌ಒ ಮೂಲಕ ಫಾರ್ಮ್-6 ಸಲ್ಲಿಸಬೇಕು. ಅ. 27ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅರ್ಹರೆಲ್ಲರೂ ಹೆಸರು ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಸಂಘಗಳ ಮೂಲಕ ಮತದಾನದ ಹಕ್ಕು, ಇವಿಎಂ ಕಾರ್ಯವೈಖರಿ ಹಾಗೂ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ನಿರಂತರ ಅರಿವು ಮೂಡಿಸಲಾಗುತ್ತಿದೆ ಎಂದರು.

260916-126-1983725781

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ