ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ಆಟೊಗಳಿಂದ ಸಂಚಾರ ದಟ್ಟಣೆ, ಪ್ರಯಾಣಿಕರ ಪರದಾಟ

ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ಆಟೊಗಳಿಂದ ಸಂಚಾರ ದಟ್ಟಣೆ, ಪ್ರಯಾಣಿಕರ ಪರದಾಟ

ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ಆಟೊಗಳಿಂದ ಸಂಚಾರ ದಟ್ಟಣೆ, ಪ್ರಯಾಣಿಕರ ಪರದಾಟ

ದಾವಣಗೆರೆ: ನಗರದ ಗಾಂಧಿ ವೃತ್ತದಿಂದ ಅಭಿನವ ರೇಣುಕ ಮಂದಿರದವರೆಗಿನ ಪಿ.ಬಿ. ರಸ್ತೆಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ನಾಗರಿಕರು ‍ಪರದಾಡುವ ಸ್ಥಿತಿ ಇದೆ. ಮುಖ್ಯವಾಗಿ ಮಹಾನಗರ ಪಾಲಿಕೆ ಹಾಗೂ ರೈಲು ನಿಲ್ದಾಣದ ಬಳಿ ನಿತ್ಯವೂ ಸಾವಿರಾರು ಜನ ವಾಹನಗಳ ಓಡಾಟದ ನಡುವೆಯೇ ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.

ಎರಡೂ ಕಡೆಗಳಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಆಟೊಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ನಗರ ಸಾರಿಗೆ ಬಸ್‌ಗಳನ್ನೂ ನಿಗದಿತ ತಂಗುದಾಣಗಳಲ್ಲಿ ನಿಲುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ಪರಿಣಾಮ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ಸಮಸ್ಯೆ ತೀವ್ರವಾಗಿರುತ್ತದೆ.

ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಗ್ರಾಮೀಣ ಭಾಗದಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಾರೆ. ಹೀಗೆ ಬಂದವರು ಖಾಸಗಿ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಮಹಾನಗರ ಪಾಲಿಕೆ ಮುಂಭಾಗ ಇಳಿದು, ಬೇರೆ ವಾಹನಗಳನ್ನು ಹತ್ತಲು ಹೆಣಗಾಡುತ್ತಾರೆ.

ಮಹಾನಗರ ಪಾಲಿಕೆ ಹಾಗೂ ರೈಲು ನಿಲ್ದಾಣದ ಮುಂಭಾಗದ ಎರಡೂ ಕಡೆಗಳಲ್ಲಿ ನಗರ ಸಾರಿಗೆ ಬಸ್ ತಂಗುದಾಣಗಳಿವೆ. ಶಾಮನೂರು, ಹೊಂಡದ ಸರ್ಕಲ್, ವಿದ್ಯಾನಗರ, ಕುಂದುವಾಡ, ನಾಗನೂರು, ಹರಿಹರ, ಬಾತಿ, ರಿಂಗ್ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಯರಗುಂಟೆ, ಬೂದಾಳ್ ರಸ್ತೆ, ಬಾಷಾನಗರ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಡಿಸಿಎಂ ಲೇಔಟ್, ಎಸ್‌.ಎಸ್‌.ಹೈಟೆಕ್ ಆಸ್ಪತ್ರೆ, ನಿಟುವಳ್ಳಿ, ಸರಸ್ವತಿ ಬಡಾವಣೆ ಸೇರಿದಂತೆ ವಿವಿಧೆಡೆ ಸಂಚರಿಸುವ ನಗರ ಸಾರಿಗೆ ಬಸ್‌ಗಳ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಫುಟ್‌ಪಾತ್‌ ಒತ್ತುವರಿ ಹಾಗೂ ರಸ್ತೆ ಮಧ್ಯದಲ್ಲಿ ನಿಲ್ಲಿಸುವ ಆಟೊಗಳ ಹಾವಳಿಯಿಂದಾಗಿ ಬಸ್‌ಗಳನ್ನು ಇಲ್ಲಿನ ತಂಗುದಾಣಗಳ ಬಳಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

‘ನಗರದಲ್ಲಿ ಸಾವಿರಾರು ಆಟೊಗಳಿವೆ. ನಿಗದಿಗಿಂತ ಹೆಚ್ಚುವರಿ ಪ್ರಯಾಣಿಕರನ್ನು ಕೂರಿಸಿಕೊಳ್ಳುವ ಚಾಲಕರು, ಈ ಭರದಲ್ಲಿ ರಸ್ತೆ ಮಧ್ಯೆಯೇ ಆಟೊಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ನಿತ್ಯವೂ ಗಂಭೀರ ಸಮಸ್ಯೆ ಉಂಟಾಗುತ್ತಿದೆ’ ಎಂದು ಪಾಲಿಕೆ ಮುಂಭಾಗ ಕರ್ತವ್ಯದಲ್ಲಿದ್ದ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಹೇಳಿದರು.

‘ರೈಲು ನಿಲ್ದಾಣದ ಒಳಗಡೆ ಆಟೊ ಸ್ಟ್ಯಾಂಡ್ ಇದೆ. ಆದರೆ, ಅಲ್ಲಿ ನಿಲ್ಲುವ ಆಟೊಗಳಿಗಿಂತ ಹೊರಗಡೆ ರಸ್ತೆಯಲ್ಲಿ ನಿಲ್ಲುವ ಆಟೊಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ನೋ ಪಾರ್ಕಿಂಗ್‌ ಫಲಕ ಹಾಕಿದರೂ, ಹಲವು ಬಾರಿ ಎಚ್ಚರಿಕೆ ನೀಡಿದರೂ, ದಂಡ ವಿಧಿಸಿದರೂ ಇಲ್ಲಿನ ವ್ಯವಸ್ಥೆ ಮಾತ್ರ ಸುಧಾರಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಎರಡೂ ಕಡೆಗಳಲ್ಲಿ ಆಟೊಗಳನ್ನು ಸಾಲಿನಲ್ಲಿ ನಿಲ್ಲಿಸಲು ವ್ಯವಸ್ಥಿತ ನಿಲ್ದಾಣ ನಿರ್ಮಿಸಬೇಕು. ಆಟೊ ಹಾಗೂ ನಗರ ಸಾರಿಗೆ ಬಸ್‌ಗಳಿಗೆ ಪಾಲಿಕೆಯಿಂದ ಅಧಿಕೃತ ತಂಗುದಾಣಗಳನ್ನು ಗುರುತಿಸಬೇಕು. ವ್ಯವಸ್ಥಿತ ಸ್ಕೈವಾಕ್‌ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಇಲ್ಲಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯಬಹುದು’ ಎಂದು ಹೇಳಿದರು.

ಸ್ಕೈವಾಕ್ ನಿರ್ಮಾಣ ಯಾವಾಗ?

ಮಹಾನಗರ ಪಾಲಿಕೆ ಹಾಗೂ ರೈಲು ನಿಲ್ದಾಣದ ನಡುವಣ ಮುಖ್ಯ ರಸ್ತೆಯಲ್ಲಿ ಸ್ಕೈವಾಕ್‌ ನಿರ್ಮಿಸಬೇಕು ಎಂಬುದು ನಾಗರಿಕರ ಬಹುವರ್ಷಗಳ ಬೇಡಿಕೆಯಾಗಿದೆ. ಇದಕ್ಕಾಗಿ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

3–4 ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ ಪ್ರತಿ ವರ್ಷ ₹ 50 ಲಕ್ಷದಿಂದ ₹ 1 ಕೋಟಿ ಅನುದಾನವನ್ನು ಸ್ಕೈವಾಕ್‌ಗಾಗಿ ಮೀಸಲಿಡಲಾಗುತ್ತಿದೆ. ಆದರೆ, ಕಾಮಗಾರಿ ಮಾತ್ರ ಇದುವರೆಗೂ ಶುರುವಾಗುತ್ತಿಲ್ಲ.

ಪ್ರತಿ ಬಾರಿ ರಸ್ತೆ ಸುರಕ್ಷತಾ ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ.

ನಗರದ ರೈಲು ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಅರುಣಾ ಟಾಕೀಸ್‌ ವೃತ್ತ ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಕಡೆಗಳಲ್ಲಿ ಸ್ಕೈವಾಕ್‌ ನಿರ್ಮಿಸಲು ಸೂಚಿಸುವಂತೆ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಅವರು ಲೋಕಾಯುಕ್ತಕ್ಕೆ 2024ರಲ್ಲಿ ದೂರು ಸಲ್ಲಿಸಿದ್ದಾರೆ.

‘ಲೋಕಾಯುಕ್ತದಿಂದ ಕೇಳಲಾಗಿದ್ದ ವಿವರಣೆಯನ್ನೂ ಸಲ್ಲಿಸಿದ್ದೇನೆ. ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಉತ್ತರವೂ ಬಂದಿದೆ. ಪಾಲಿಕೆಯ ಬಜೆಟ್‌ಗಳಲ್ಲಿ ಅನುದಾನ ಮೀಸಲಿಟ್ಟು, ಸ್ಕೈವಾಕ್ ನಿರ್ಮಾಣಕ್ಕೆ ನಿರ್ಣಯ ಕೈಗೊಂಡಿದ್ದರೂ ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದರು.

‘ಸಾಧ್ಯವಾದಷ್ಟು ಶೀಘ್ರವೇ ಸ್ಕೈವಾಕ್ ನಿರ್ಮಿಸಬೇಕು. ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಬೇಕು. ವೃದ್ಧರು, ವಿದ್ಯಾರ್ಥಿಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಪಾಲಿಕೆ ಹಾಗೂ ರೈಲು ನಿಲ್ದಾಣದ ಬಳಿ ಸ್ಥಳ ಪರಿಶೀಲನೆ ನಡೆಸಲಾಗುವುದು. ನಾಗರಿಕರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲು ಸಂಚಾರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡುತ್ತೇನೆ ಎಚ್‌.ಟಿ.ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ