ಸಮೃದ್ಧ ಮಳೆಗೆ ಜೋಕುಮಾರಸ್ವಾಮಿ ಪೂಜೆ; ಕುಕನೂರಿನಲ್ಲಿ ಸಂಭ್ರಮ

ಸಮೃದ್ಧ ಮಳೆಗೆ ಜೋಕುಮಾರಸ್ವಾಮಿ ಪೂಜೆ; ಕುಕನೂರಿನಲ್ಲಿ ಸಂಭ್ರಮ

ಸಮೃದ್ಧ ಮಳೆಗೆ ಜೋಕುಮಾರಸ್ವಾಮಿ ಪೂಜೆ; ಕುಕನೂರಿನಲ್ಲಿ ಸಂಭ್ರಮ

ಕುಕನೂರು: ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ, ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ್ಮ ದೇವಿ... ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕುಮಾರನ ಕುರಿತು ಹೇಳುವ ಹಾಡುಗಳನ್ನು ಕೇಳುವುದೇ ಮನಸ್ಸಿಗೆ ತಂಪು.

ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಯಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತೆ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ... ಈ ರೀತಿ ಜನಪದ ಶೈಲಿಯಲ್ಲಿ ಹಾಡು ಹೇಳುವ ಗಂಗಾಮತಸ್ಥ ಸಮುದಾಯದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನನ್ನು ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಿ ಆತನ ಬಾಯಿಯಲ್ಲಿ ಬೆಣ್ಣೆ ಇಟ್ಟು ಮನೆಗಳಿಗೆ ಹೊತ್ತೊಯ್ಯುವ ಜೋಗಪ್ಪನ ಹಬ್ಬ ತಾಲ್ಲೂಕಿನಾದ್ಯಾಂತ ಆಚರಿಸಲಾಗುತ್ತಿದೆ.

ಜೋಕುಮಾರನು ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ದೈವ. ಅವನು ಮಳೆ ಮತ್ತು ಫಲಸಮೃದ್ಧಿಗಳ ದೇವತೆಯೆಂದು ಹೆಸರುವಾಸಿಯಾಗಿದ್ದಾನೆ. ಅವನ ಹುಟ್ಟಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು ಮತ್ತು ಪುರಾಣಕಥೆಗಳಿವೆ.ಜೋಕುಮಾರ ಸಪ್ತರ್ಷಿಗಳ ಶಿಷ್ಯನಾಗಿದ್ದವನು. ಆಗ ಅವನ ಹೆಸರು ಜೋಕ. ಅವನು, ತಮ್ಮ ಸಮುದಾಯಕ್ಕೆ ಸೇರಿದ ಒಬ್ಬ ಹೆಂಗಸಿನ ಜತೆ ಅನುಚಿತ ವರ್ತನೆಯಲ್ಲಿ ತೊಡಗಿದ್ದರಿಂದ ಕುಪಿತರಾದ, ಅಗಸರು ಅವನನ್ನು ಕೊಲ್ಲುತ್ತಾರೆ. ಅವನ ಸಾವಿನ ನಂತರ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಆದ್ದರಿಂದ ಅನಾವೃಷ್ಟಿಯಿಂದ ಪೀಡಿತರಾದವರು ಮತ್ತು ಮಕ್ಕಳನ್ನು ಬಯಸುವವರು ಜೋಕುಮಾರನನ್ನು ಪೂಜಿಸುತ್ತಾರೆ.

ಬೆಸ್ತರು, ಮಡಿವಾಳರು, ಅಕ್ಕಸಾಲಿಗರು, ಸುಣಗಾರರು ಮುಂತಾದ ಹಲವು ಸಮುದಾಯಗಳು ಜೋಕುಮಾರನನ್ನು ಆರಾಧಿಸುತ್ತವೆ. ರೈತರು ಬಹಳ ಆತಂಕದಿಂದ ಮಳೆಯ ಆಗಮನವನ್ನು ನಿರೀಕ್ಷಿಸುತ್ತಿರುವ ಭಾದ್ರಪದ ತಿಂಗಳಿನಲ್ಲಿ ಅವನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಅವನು ಹುಟ್ಟಿದ ದಿನವಾದ ಭಾದ್ರಪದ ಶುಕ್ಲ ಅಷ್ಟಮಿಯಂದು ಮೊದಲಾಗುವ ಸಮಾರಂಭಗಳು, ಅದೇ ತಿಂಗಳಿನ ಪೌರ್ಣಿಮೆಯವರೆಗೆ ನಡೆಯುತ್ತವೆ.

ಈ ಮೇಲಿನ ಸಮುದಾಯಗಳಿಗೆ ಸೇರಿದ ಹೆಣ್ಣು ಮಕ್ಕಳು, ಹತ್ತಿರದ ಕೆರೆಗಳಿಂದ ಜೇಡಿ ಮಣ್ಣನ್ನು ಸಂಗ್ರಹಿಸಿ ತರುತ್ತಾರೆ. ಆ ಮಣ್ಣಿನಿಂದ, ಚುಚ್ಚುವಂತಹ ಕಣ್ಣುಗಳು, ಅಗಲವಾದ ಹಣೆ, ದಪ್ಪ ತುಟಿಗಳು, ತಕ್ಷಣ ಗಮನ ಸೆಳೆಯುವ ದೊಡ್ಡ ಮೂಗು, ದಪ್ಪ ಮೀಸೆಗಳು ಪ್ರತಿಮೆಯ ಮುಖ್ಯ ಲಕ್ಷಣಗಳು. ಈ ಮೂರ್ತಿಯ ತುಟಿಗಳಿಗೆ ಬೆಣ್ಣೆಯ ಲೇಪನಮಾಡಿ, ಅದನ್ನು ಬೇವಿನೆಲೆಗಳಿಂದ ಅಲಂಕೃತವಾದ ಬುಟ್ಟಿಯೊಳಗೆ ಇಡುತ್ತಾರೆ. ಬುಟ್ಟಿಯೊಳಗೆ ಆಸೀನವಾದ ಈ ಮೂರ್ತಿಯನ್ನು ಮನೆಯಿಂದ ಮನೆಗೆ, ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅದರ ಹಿಂದೆ, ಹಾಡುಗಳನ್ನು ಹೇಳುವ ಹೆಂಗಸರು ಹೋಗುತ್ತಾರೆ ಎಂದು ಬಸಮ್ಮ ಬಾರಕೇರ ಜೋಕುಮಾರನ ಕಥೆ ಹೇಳಿದರು.

ಬುಟ್ಟಿಯಲ್ಲಿ ಆಹಾರಧಾನ್ಯಗಳು ಮತ್ತು ಇತರ ವಸ್ತುಗಳ ರೂಪದಲ್ಲಿ ದಾನ ನೀಡಿದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಆ ಹಾಡುಗಳು ಜೋಕುಮಾರನ ಸಾಹಸಗಳು ಮತ್ತು ಪವಾಡಗಳನ್ನು ಬಿತ್ತರಿಸುತ್ತವೆ. ಕೃಷಿ ಸಮುದಾಯಗಳಿಗೆ ಸೇರಿದ ಜನರು ಜೋಕುಮಾರ ಹಬ್ಬವನ್ನು ಮಳೆ ಒಲಿಸುವ ಉದ್ದೇಶದಿಂದ ಆಚರಿಸುತ್ತಾರೆ.

ಗಣೇಶ ಪ್ರತಿಷ್ಠಾಪಿಸಿದ ನಾಲ್ಕೈದು ದಿನಕ್ಕೆ ಎಳೆ ಅಷ್ಟಮಿ ತಿಥಿಯ ಮೂಲಾನಕ್ಷತ್ರದಂದು ಜೋಕುಮಾರ ಜನಿಸುತ್ತಾನೆ. ಆದ್ದರಿಂದ ಎಳೆ ಅಷ್ಟಮಿ ಬಂದ ನಂತರ ಗಣೇಶನನ್ನು ವಿಸರ್ಜಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ ಈಗಲೂ ಇದೆ. ಗಂಗಾಮತಸ್ಥ ಮತೆನದವರು ಆಯಾ ಗ್ರಾಮದ ಗೌಡರ ಮನೆಗಳಲ್ಲಿ ಮೊದಲಿಗೆ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಜೋಕುಮಾರ ಮೂರ್ತಿ ಕುಳ್ಳರಿಸಿದ ಬುಟ್ಟಿ ಹೊತ್ತು ಏಳು ಗ್ರಾಮಗಳಿಗೆ ತೆರಳುತ್ತಾರೆ.

ಜೋಕುಮಾರಸ್ವಾಮಿ ಹೊತ್ತು ಊರೂರಿಗೆ ತೆರಳುವ ಮಹಿಳೆಯರು ಜೋಕುಮಾರ ಪದಗಳನ್ನು ಹಾಡುತ್ತಾ ಸಾಗುತ್ತಾರೆ. ಏಳು ಗ್ರಾಮಗಳನ್ನು ಸುತ್ತಿದ ನಂತರ ಪಟ್ಟಣದ ಖಾನ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಶಾರಮ್ಮ ಬಾರಕೇರ ‘ಪ್ರಜಾವಾಣಿ' ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ