
ಕಾವೇರಿ ಒಡಲು ಬಗೆದು ಮರಳಿಗೆ ಕನ್ನ: ಕೊಳ್ಳೇಗಾಲದಲ್ಲಿ ದಂಧೆಕೋರರ ಹಾವಳಿ
ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಹರಿಯುವ ಕಾವೇರಿ ನದಿಯ ಒಡಲಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಪ್ರಾಕೃತಿಕ ಸಂಪತ್ತನ್ನು ದೋಚಲಾಗುತ್ತಿದೆ.
ಮರಳು ತೆಗೆಯಲು ಸರ್ಕಾರದ ಕಠಿಣ ನಿಯಮಗಳಿದ್ದರೂ ಎಲ್ಲವನ್ನೂ ಗಾಳಿಗೆ ತೂರಿ ರಾಜಾರೋಷವಾಗಿ ಮರಳು ಸಾಗಿಸಲಾಗುತ್ತಿದೆ. ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಂಧೆಕೋರರ ವಿರುದ್ಧ ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾವೇರಿ ನದಿಯು ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹಂಪಾಪುರ, ಹರಳೆ, ಸರಗೂರು, ಧನಗೆರೆ, ಯಡಕುರಿಯಾ, ಸತ್ತೆಗಾಲ ಮಾರ್ಗವಾಗಿ ಹರಿಯುತ್ತದೆ. ಹೀಗಿ ಹರಿಯುವಾಗ ಅಪಾರ ಪ್ರಮಾಣದ ಮರಳು ನದಿ ತೀರದ ವ್ಯಾಪ್ತಿಯಲ್ಲಿ ಜಮಾವಣೆಯಾಗುತ್ತದೆ.
ಹೀಗೆ ಸಂಗ್ರಹವಾಗುವ ಮರಳನ್ನು ದೋಚಲು ತಾಲ್ಲೂಕಿನಲ್ಲಿ ದಂಧೆಕೋರರ ತಂಡ ಸಕ್ರಿಯವಾಗಿದ್ದು ರಾತ್ರಿಯಾಗುತ್ತಿದ್ದಂತೆ ನದಿ ತೀರದಲ್ಲಿ ಅಕ್ರಮ ಚಟುವಟಿಕೆಗಳು ಶುರುವಾಗುತ್ತವೆ. ಕೊಪ್ಪರಿಗೆಗಳನ್ನು ಬಳಸಿಕೊಂಡು ನದಿಯ ಒಡಲಿಗೆ ಇಳಿದು ರಾಶಿ ರಾಶಿ ಮರಳನ್ನು ಎತ್ತಿ ಟ್ರ್ಯಾಕ್ಟರ್, ಟಿಪ್ಪರ್‌ಗಳಿಗೆ ತುಂಬಿಸಿಕೊಂಡು ಖಾಸಗಿ ಜಮೀನುಗಳಲ್ಲಿ ಶೇಖರಣೆ ಮಾಡುತ್ತಿದ್ದಾರೆ.
ಅಲ್ಲಿಂದ ರಾತ್ರಿಯ ಹೊತ್ತು ಎತ್ತಿನಗಾಡಿ, ಟ್ರ್ಯಾಕ್ಟರ್, ಗೂಡ್ಸ್ ಆಟೊ, ಲಾರಿಗಳಲ್ಲಿ ನಗರ ಪ್ರದೇಶಗಳಲಿಗೆ ಮರಳನ್ನು ಸಾಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿನಿತ್ಯ ತಾಲ್ಲೂಕಿನಿಂದ ಬೆಂಗಳೂರಿಗೂ ಮರಳು ರವಾನೆಯಾಗುತ್ತಿದೆ. ಮರಳು ಕಾಣದಂತೆ ವಾಹನಗಳಿಗೆ ಟಾರ್ಪಲ್ ಕಟ್ಟಿಕೊಂಡು ರಾತ್ರೋರಾತ್ರಿ ಸಾಗಿಸಲಾಗುತ್ತಿದ್ದು ಅಧಿಕಾರಿಗಳ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದ್ದರೂ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಮರಳು ಗಣಿಗಾರಿಕೆಗೆ ಅನುಮತಿ ಪಡೆಯಬೇಕು, ನಿರ್ದಿಷ್ಟ ರಾಜಧನ ಪಾವತಿಸಬೇಕು ಎಂಬ ನಿಯಮವಿದ್ದರೂ ಪಾಲನೆ ಮಾಡದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ನದಿ ತೀರದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆತಂಕದಲ್ಲಿ ನದಿ ತೀರದ ಜನರು: ಈ ಬಾರಿ ಮಳೆಯ ಕೊರತೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿದಿದ್ದು ಮರಳು ಹೆಚ್ಚಾಗಿ ಸಿಗುತ್ತಿದೆ. ಈ ಅವಕಾಶ ಬಳಸಿಕೊಳ್ಳುತ್ತಿರುವ ದಂಧೆಕೋರರು ಮರಳು ತೆಗೆಯುತ್ತಿದ್ದಾರೆ. ನದಿಯಲ್ಲಿ ಮರಳು ಖಾಲಿಯಾದರೆ ಮುಂದಿನ ಮಳೆಗಾಲದಲ್ಲಿ ಅಪಾಯ ಎದುರಾಗಬಹುದು, ಆಳವಾದ ಕಂದಕಗಳು ನಿರ್ಮಾಣಗೊಂಡು ಪ್ರಾಣಾಪಾಯ ಸಂಭವಿಸಬಹುದು, ನದಿಯ ನೀರಿನ ಹರಿವಿಗೆ ಅಡ್ಡಿಯಾಗಬಹುದು. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮರಳು ದಂಧೆಗೆ ಅವಕಾಶ ಮಾಡಿಕೊಡಬಾರದು. ಇಲ್ಲವಾದರೆ ನದಿಪಾತ್ರದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಧರಣಿ ನಡೆಸಬೇಕಾಗುತ್ತದೆ ಎಂದು ಹಂಪಾಪುರ ಗ್ರಾಮದ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಮರಳು ಅಕ್ರಮ ಸಾಗಾಟ ನಿರಾತಂಕವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನಕ್ಕೆ ಶರಣಾಗಿವೆ. ಮರಳು ದಂಧೆಗೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬೆಂಬಲ ಪಡೆದಿರುವ ದಂಧೆಕೋರರರು ಭಯವಿಲ್ಲದೆ ಮರಳು ಸಾಗಿಸುತ್ತಿದ್ದಾರೆ. ನದಿಪಾತ್ರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪ್ರಗತಿಪರ ಸಂಘಟನೆಗಳು ಅಕ್ರಮ ಮರಳು ಸಾಗಣೆ ನಿಲ್ಲಿಸುವಂತೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಿವ ಸುಂದರ್ ದೂರಿದ್ದಾರೆ.
ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನದಿ ತೀರದಿಂದ ಮರಳನ್ನು ತುಂಬಿಕೊಂಡು ನಗರಕ್ಕೆ ತರಲಾಗುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಬಸವರಾಜು ಎರಡು ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.