
ರಾಜ್ಯದ ಸಾಕ್ಷರತಾ ಪಯಣಕ್ಕೆ ರಾಷ್ಟ್ರಮಟ್ಟದ ‘ಉಲ್ಲಾಸ್ ಮೇಳ’ದಲ್ಲಿ ಮೆಚ್ಚುಗೆ
ಶಿಡ್ಲಘಟ್ಟ: ನವದೆಹಲಿ ನ್ಯಾಷನಲ್ ಬಾಲಭವನದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಪ್ರಯುಕ್ತ ‘ಉಲ್ಲಾಸ್ ಮೇಳ’ ಈಚೆಗೆ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರ ತಂಡ ಕರ್ನಾಟಕವನ್ನು ಪ್ರತಿನಿಧಿಸಿತು. ಕರ್ನಾಟಕದ ಸಾಕ್ಷರತಾ ಸಾಧನೆ, ನವೀನ ಕಲಿಕಾ ವಿಧಾನಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು.
ಮೇಳದಲ್ಲಿ ದೇಶದ 28 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಎನ್‌ಸಿಇಆರ್‌ಟಿ, ಎನ್‌ಸಿಟಿಇ, ಎನ್‌ಐಒಎಸ್ ಸಂಸ್ಥೆಗಳು ತಮ್ಮ ಸಾಧನೆ, ಉತ್ತಮ ಪದ್ಧತಿ, ಕಲಿಕಾ ಸಾಮಗ್ರಿ ಪ್ರದರ್ಶಿಸಿದವು. ಕರ್ನಾಟಕದ ಮಳಿಗೆಯಲ್ಲಿ ರಾಜ್ಯದ ಸಾಕ್ಷರತಾ ಪಯಣ, ಅಭಿಯಾನ, ಯೋಜನೆ, ಸಾಧನೆ, ಸರಳ ಬೋಧನಾ ವಿಧಾನ, ಕಲಿಕಾ ಸಾಮಗ್ರಿ, ನವಸಾಕ್ಷರ ಸಾಹಿತ್ಯ ಪ್ರದರ್ಶನಗೊಂಡವು.
ಓದು–ಬರಹಕ್ಕೆ ಸೀಮಿತಗೊಳಿಸದೆ ಜೀವನ ಕೌಶಲ, ಸಂಖ್ಯಾಜ್ಞಾನ, ಹಣಕಾಸು, ಕಾನೂನು ಅರಿವು, ಡಿಜಿಟಲ್ ಜ್ಞಾನ, ನಿರಂತರ ಕಲಿಕೆಯೊಂದಿಗೆ ಜೋಡಿಸುವ ಪ್ರಯತ್ನಗಳು ಮುಖ್ಯ ಆಕರ್ಷಣೆ ಆಗಿತ್ತು.
ಮಳಿಗೆಗೆ ಭೇಟಿ ನೀಡಿದ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್ ಮಾಹಿತಿ ಪಡೆದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ‘ಸಾಕ್ಷರತೆ ಎಂದರೆ ಕೇವಲ ಅಕ್ಷರ ಗುರುತಿಸುವುದಲ್ಲ. ಬದುಕಿನ ದಾಖಲೆ ಓದಿ ಅರ್ಥ ಮಾಡಿಕೊಳ್ಳುವುದು. ಮೋಸಕ್ಕೆ ಒಳಗಾಗದಿರುವುದು, ಸ್ವತಂತ್ರ ನಿರ್ಧಾರ ಕೈಗೊಳ್ಳುವುದು. ಆತ್ಮವಿಶ್ವಾಸದಿಂದ ಬದುಕುವುದೂ ಸಾಕ್ಷರತೆ ಭಾಗ‘ ಎಂದರು.
ವಿನೂತನ ಮೌಲ್ಯಮಾಪನ: ನವಸಾಕ್ಷರರ ಮೌಲ್ಯಮಾಪನ, ಪ್ರಮಾಣೀಕರಣ, ಓದು–ಬರಹ–ಸಂಖ್ಯಾಜ್ಞಾನವನ್ನು ದೈನಂದಿನ ಬದುಕಿಗೆ ಜೋಡಿಸುವ ವಿಧಾನ, ಕಲಿತ ಜ್ಞಾನ ಬಳಸುವ ಕ್ರಮ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ‘ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮ ಜನಸಹಭಾಗಿತ್ವದಲ್ಲಿ ನಡೆಯುತ್ತಿದೆ. ನವಸಾಕ್ಷರರನ್ನು ಸಾಕ್ಷರರನ್ನಾಗಿಸಿ ನಿರಂತರ ಓದು–ಬರಹ ಸಂಪರ್ಕದಲ್ಲಿಡುವುದು, ಮಹಿಳೆ–ವಂಚಿತ ಸಮುದಾಯಗಳಿಗೆ ಪ್ರೋತ್ಸಾಹ, ಸ್ವಯಂಸೇವಕರ ಸಹಕಾರ ಪ್ರಮುಖ ಆದ್ಯತೆ’ ಎಂದು ಹೇಳಿದರು.
ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ, ‘ವಯಸ್ಕರನ್ನು ಕಲಿಕೆಗೆ ತರುವ ಪ್ರಯತ್ನ ನವಸಾಕ್ಷರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದರು.
ಶಿಕ್ಷಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅರ್ಚನಾ ಶರ್ಮಾ ಅವಸ್ಥಿ, ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ.ದಿನೇಶ್ ಪ್ರಸಾದ್ ಸಕ್ಲಾನಿ, ನಿರ್ದೇಶಕಿ ಶಾಲಿನಿ ಅಗ್ನಿಹೋತ್ರಿ ಸೇರಿದಂತೆ ಹಲವು ಅಧಿಕಾರಿಗಳು ಕರ್ನಾಟಕ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.