ರೇಖಲಗೆರೆ | ಸೌಹಾರ್ದಕ್ಕೆ ಸಾಕ್ಷಿಯಾದ ಗ್ಯಾರವಿ ಹಬ್ಬ: ರಾತ್ರಿಯಿಡೀ ಪ್ರವಚನ

ರೇಖಲಗೆರೆ | ಸೌಹಾರ್ದಕ್ಕೆ ಸಾಕ್ಷಿಯಾದ ಗ್ಯಾರವಿ ಹಬ್ಬ: ರಾತ್ರಿಯಿಡೀ ಪ್ರವಚನ

ರೇಖಲಗೆರೆ | ಸೌಹಾರ್ದಕ್ಕೆ ಸಾಕ್ಷಿಯಾದ ಗ್ಯಾರವಿ ಹಬ್ಬ: ರಾತ್ರಿಯಿಡೀ ಪ್ರವಚನ

ನಾಯಕನಹಟ್ಟಿ: ಸಂತ ಮೆಹಬೂಬ್ ಸುಬಾನಿ ಅವರ ಸ್ಮರಣೆ ನಿಮಿತ್ತ, ಸಮೀಪದ ರೇಖಲಗೆರೆ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ಭಕ್ತರು ಒಗ್ಗೂಡಿ ಗ್ಯಾರವಿ ಹಬ್ಬವನ್ನು ಬುಧವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಬ್ಬದ ಹಿನ್ನೆಲೆ: ಪ್ರಸಿದ್ಧ ಸೂಫಿ ಸಂತ, ಖಾದ್ರಿಯಾ ಪಂಥದ ಸಂಸ್ಥಾಪಕ ಹಜರತ್ ಶೇಖ್ ಅಬ್ದುಲ್ ಖಾದಿರ್ ಜಿಲಾನಿ ಅವರ ಪುಣ್ಯಸ್ಮರಣೆಗಾಗಿ ಗ್ಯಾರವಿ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ರಬೀವುಲ್ ಆಖಿರ್ ತಿಂಗಳ 11ನೇ ದಿನದಂದು ಈ ಹಬ್ಬವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಉರ್ದು ಭಾಷೆಯಲ್ಲಿ ‘ಗ್ಯಾರವಿ’ ಎಂದರೆ ಹನ್ನೊಂದು ಎಂಬ ಅರ್ಥವಿದೆ. ಸಂತ ಹಜರತ್ ಮೆಹಬೂಬ್ ಸುಬಾನಿ ಅವರು ರಬೀವುಲ್ ಆಖಿರ್ ತಿಂಗಳ 11ನೇ ದಿನ ನಿಧನರಾದ ಪ್ರಯುಕ್ತ ಗ್ಯಾರವಿ ಹೆಸರಿನಿಂದ ಅವರನ್ನು ಸ್ಮರಿಸಲಾಗುತ್ತದೆ.

ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ಎರಡು ಮುಸಲ್ಮಾನ ಕುಟುಂಬಗಳಿದ್ದು, ಉಳಿದಂತೆ ಹಿಂದೂ ಕುಟುಂಬಗಳೇ ಹೆಚ್ಚಾಗಿವೆ. ಪ್ರತಿವರ್ಷ ಗ್ರಾಮಸ್ಥರೆಲ್ಲರೂ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ. ಅದಕ್ಕಾಗಿ ಬುಧವಾರ ನಾಯಕನಹಟ್ಟಿ, ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಂಗಳೂರು, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ, ಕಲ್ಯಾಣದುರ್ಗದಿಂದ 2 ಸಾವಿರಕ್ಕೂ ಹೆಚ್ಚು ಭಕ್ತರು ಗ್ಯಾರವಿ ಹಬ್ಬದಲ್ಲಿ ಭಾಗವಹಿಸಿ ಹೂವು, ಮಲ್ಲಿಗೆ ಹಾರ, ಸಕ್ಕರೆಯನ್ನು ಹರಕೆಯಾಗಿ ಅರ್ಪಿಸಿದರು.

ರಾತ್ರಿ 8 ಗಂಟೆಗೆ ಗ್ರಾಮದ ಹೃದಯ ಭಾಗದಲ್ಲಿ ಸೇರಿದ ಸಾವಿರಾರು ಭಕ್ತರು ಸಂಪ್ರದಾಯದಂತೆ ಬೃಹತ್ ಹಸಿರು ಬಾವುಟವನ್ನು ಬೇವಿನಮರದ ಮೇಲೆ ಕಟ್ಟಿದರು. ಸಕ್ಕರೆ, ಸಿಹಿ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಿ ಪ್ರಾರ್ಥಿಸಿದರು. ಮುಸಲ್ಮಾನ ಧರ್ಮ ಗುರುಗಳು ಸಂತ ಮೆಹಬೂಬ್ ಸುಬಾನಿಯವರ ಜೀವನ ಚರಿತ್ರೆಯ ಪ್ರವಚನವನ್ನು ರಾತ್ರಿಯಿಡೀ ಬೋಧಿಸಿದರು. ಗ್ರಾಮಸ್ಥರು ಮತ್ತು ಗ್ಯಾರವಿ ಹಬ್ಬದ ಆಚರಣೆ ಸಮಿತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಮುಖಂಡರಾದ ರಹಮತ್ ಉಲ್ಲಾ, ಅಬೀಬ್ ಸಾಬ್, ಹೈದರ್ ಅಲಿ, ಜಿಲಾನಿ, ಮನ್ಸೂರ್, ದಾದಾಪೀರ್, ದಸ್ತಗಿರಿಸಾಬ್, ಅಮೀನುದ್ದೀನ್‌ ಸಾಬ್, ಎಂ.ಚಿನ್ನಯ್ಯ, ಅಶೋಕ, ತಿಪ್ಪಯ್ಯ, ಲೋಕೇಶ್ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ