ಚಿಕ್ಕಮಗಳೂರು: 2.17 ಲಕ್ಷ ಜನರ ಭೂಮಿಯ ಹಕ್ಕು ತಿರಸ್ಕಾರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟಗಳು ಒಂದೆಡೆ ನಡೆಯುತ್ತಿದ್ದರೆ, ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿ ಕಾದಿರುವ ಭೂರಹಿತರ ಆತಂಕ ಮತ್ತೊಂದೆಡೆ. ಈ ನಡುವೆ 2.17 ಲಕ್ಷ ಬಗರ್ ಹುಕುಂ ಅರ್ಜಿಗಳು ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ ನಮೂನೆ 50, 53 ಮತ್ತು 75ರ ಅಡಿ ಅರ್ಜಿ ಸಲ್ಲಿಸಿ ಭೂಮಂಜೂರಾತಿಗಾಗಿ ಕಾಯುತ್ತಿದ್ದಾರೆ. ನಮೂನೆ 50ರಲ್ಲಿ ಸಲ್ಲಿಕೆಯಾಗಿದ್ದ 65,087 ಅರ್ಜಿಗಳಲ್ಲಿ 51,117 ಅರ್ಜಿಗಳು ತಿರಸ್ಕಾರವಾಗಿವೆ. 13,970 ಅರ್ಜಿದಾರರು ಮಾತ್ರ ಮಂಜೂರಾತಿ ಪಡೆದುಕೊಂಡಿದ್ದು, ಬಾಕಿ ಅರ್ಜಿಗಳಿಗೆ ಇಲ್ಲ.
ನಮೂನೆ 53ರಲ್ಲಿ ಸಲ್ಲಿಕೆಯಾಗಿದ್ದ 77,178 ಅರ್ಜಿಗಳ ಪೈಕಿ 58,846 ಅರ್ಜಿಗಳು ತಿರಸ್ಕಾರವಾಗಿವೆ. 14,853 ಅರ್ಜಿದಾರರಿಗೆ ಭೂಮಿ ಮಂಜೂರಾಗಿದ್ದು, 3,479 ಅರ್ಜಿಗಳು ಬಾಕಿ ಇವೆ. ನಮೂನೆ 57ರಲ್ಲಿ ಸಲ್ಲಿಕೆಯಾಗಿದ್ದ 1,16,584 ಅರ್ಜಿಗಳ ಪೈಕಿ 1,07,510 ಅರ್ಜಿಗಳು ತಿರಸ್ಕಾರವಾಗಿವೆ. 1,180 ಜನರಿಗೆ ಮಾತ್ರ ಭೂಮಿ ಮಂಜೂರಾಗಿದ್ದು, 7,894 ಅರ್ಜಿಗಳು ಬಾಕಿ ಉಳಿದಿವೆ.
ಒಟ್ಟಾರೆ ಸಲ್ಲಿಕೆಯಾಗಿದ್ದ 2,58,849 ಅರ್ಜಿಗಳ ಪೈಕಿ 30,003 ಅರ್ಜಿಗಳು ಮಾತ್ರ ಭೂಮಂಜೂರಾತಿ ಪಡೆದುಕೊಂಡಿವೆ. ಉಳಿದ ಅರ್ಜಿಗಳು ತಿರಸ್ಕಾರಗೊಂಡಿವೆ. 11,373 ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಇವೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಅರ್ಜಿಗಳು ತಿರಸ್ಕಾರಗೊಂಡಿವೆ. ಬಗರ್ ಹುಕುಂ ಅರ್ಜಿಗಳನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸುತ್ತಿದೆ. ಸೊಪ್ಪಿನಬೆಟ್ಟ, ಡೀಮ್ಡ್ ಅರಣ್ಯ, ಸೆಕ್ಷನ್–4 ಜಾರಿ ಹೆಸರಿನಲ್ಲಿ ಅರಣ್ಯ ಇಲಾಖೆ ಎನ್‌ಒಸಿ ನೀಡದೆ ವಾಪಸ್ ಕಳುಹಿಸುತ್ತಿದೆ. ಇಂತಹ ಅರ್ಜಿಗಳು ನೇರವಾಗಿ ತಿರಸ್ಕಾರಗೊಳ್ಳುತ್ತಿವೆ. ಇನ್ನು ಕಂದಾಯ ಮತ್ತು ಅರಣ್ಯ ಭೂಮಿಯ ಗಡಿ ಗುರುತಿಸುವ ಕಾರ್ಯ ಪೂರ್ಣಗೊಂಡಿಲ್ಲ. ಈ ಎಲ್ಲಾ ಕಾರಣಗಳಿಂದ ಅರಣ್ಯ–ಕಂದಾಯ ಭೂಮಿ ಗೊಂದಲ ಬಗೆಹರಿದಿಲ್ಲ. ಇವು ಕೂಡ ಭೂರಹಿತರು ತಮ್ಮ ಭೂಮಿಯ ಹಕ್ಕು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಈ ನಡುವೆ ಕಸ್ತೂರಿ ರಂಗನ್ ವರದಿ ಮೂಲಕ ಪರಿಸರ ಸೂಕ್ಷ್ಮ ಪ್ರದೇಶ(ಎಎಸ್‌ಎ) ಘೋಷಣೆಗೆ ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆ ಹೊರಡಿಸಿದೆ. ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾದರೆ ಹಕ್ಕುಪತ್ರ ಇಲ್ಲದ ಭೂರಹಿತ ಮೂಲ ನಿವಾಸಿಗಳ ಭೂಮಿಯ ಹಕ್ಕು ಕನಸಾಗಿಯೇ ಉಳಿಯಲಿದೆ ಎಂಬುದು ಭೂರಹಿತ ಮಲೆನಾಡಿನ ಜನರ ಆತಂಕ.
ನಿವೇಶನ ರಹಿತರ 39 ಸಾವಿರ ಅರ್ಜಿಗಳೂ ತಿರಸ್ಕೃತ
ಗ್ರಾಮೀಣ ಪ್ರದೇಶದ 65,631 ನಿವೇಶನ ರಹಿತರು 94-ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಿವೇಶನ ಹಕ್ಕಿಗಾಗಿ ಕಾದಿದ್ದಾರೆ.
ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕಿನ ಅರ್ಜಿಗಳೇ ಹೆಚ್ಚು. 39,427 ಅರ್ಜಿಗಳು ತಿರಸ್ಕಾರಗೊಂಡಿವೆ. 4,088 ಅರ್ಜಿಗಳು ಬಾಕಿ ಇದ್ದರೆ, 22,116 ಅರ್ಜಿದಾರರು ಮಾತ್ರ ನಿವೇಶನದ ಹಕ್ಕು ಪಡೆದುಕೊಂಡಿದ್ದಾರೆ.
ನಗರ ಪ್ರದೇಶಗಳಲ್ಲೂ 94–ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ 2,491 ನಿವೇಶನ ರಹಿತರು, ನಿವೇಶನಕ್ಕಾಗಿ ಕಾದಿದ್ದಾರೆ. ಆದರೆ, 1,859 ಅರ್ಜಿಗಳು ಈಗಾಗಲೇ ತಿರಸ್ಕಾರಗೊಂಡಿದ್ದು, 292 ಅರ್ಜಿಗಳು ಮಾತ್ರ ಬಾಕಿ ಇವೆ.
ಗ್ರಾಮೀಣ ಪ್ರದೇಶದಲ್ಲಿ ನಿವೇಶನ ರಹಿತರ ಅರ್ಜಿಗಳು ತಿರಸ್ಕಾರಗೊಳ್ಳಲು ಅರಣ್ಯ–ಕಂದಾಯ ಭೂಮಿ ಗೊಂದಲವೇ ಪ್ರಮುಖ ಕಾರಣ.
260924-126-1990264773