ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್‌

ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್‌

ಬೀಡಿ ಕಟ್ಟಿ ಬೆಳೆಸಿದ ಅಮ್ಮನಿಗೆ 'ಚಿನ್ನ'ದ ಕಾಣಿಕೆ ಕೊಟ್ಟ ಯೋಗಪಟು ನಿಖಿಲ್‌

4 ವರ್ಷಗಳ ಹಿಂದಿನ ಮಾತು...ಎಸ್‌ಎಸ್‌ಎಲ್‌ಸಿ ಮುಗಿಸಿದ್ದ ನಿಖಿಲ್‌ ಪೂಜಾರಿ ಅವರು ಪಿಯುಸಿಗೆ ಪ್ರವೇಶ ಪಡೆದುಕೊಂಡು, ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಬಾಲ್ಯದಿಂದಲೇ ಯೋಗಾಭ್ಯಾಸ ಮಾಡುತ್ತ ಬೆಳೆದ ಅವರಿಗೆ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇನೆ ಎಂಬ ಆತ್ಮವಿಶ್ವಾಸವೂ ಇತ್ತು. ಅದೇ ಆಶಾ ಭಾವನೆಯೊಂದಿಗೆ ಸ್ಪರ್ಧೆಯೊಂದರಲ್ಲಿ ಭಾಗಿಯಾಗಿದ್ದರು. ಆದರೆ ದುರದೃಷ್ಟವಶಾತ್, ಕೇವಲ 0.5 ಅಂಕದಿಂದ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗುವ ಅವಕಾಶ ಕೈತಪ್ಪಿತ್ತು. ಆದರೂ ನಂಬಿಕೆ ಕಳೆದುಕೊಳ್ಳದ ನಿಖಿಲ್‌, ನಿರಂತರ ಪ್ರಯತ್ನದ ಫಲವಾಗಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಸಾಧಿಸುವ ಛಲ, ಹಠವಿದ್ದರೆ ಕೌಟುಂಬಿಕ ಹಿನ್ನೆಲೆ ಎಂದಿಗೂ ಮುಖ್ಯವಾಗುವುದಿಲ್ಲ ಎಂಬುದಕ್ಕೆ 18 ವರ್ಷದ ಯುವ ಯೋಗಪಟು ನಿಖಿಲ್‌ ಉತ್ತಮ ಉದಾಹರಣೆಯಾಗಿದ್ದಾರೆ. ಜನಿಸಿದ ಹತ್ತೇ ತಿಂಗಳಲ್ಲಿ ತಂದೆಯನ್ನು ಕಳೆದುಕೊಂಡು ಅವರು ಬೆಳೆದಿದ್ದು ತಾಯಿಯ ನೆರಳಿನಲ್ಲಿ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಊರಿನವರಾದ ನಿಖಿಲ್ ಎ. ಪೂಜಾರಿ (19) ಬಾಲ್ಯದಿಂದಲೇ ಕಷ್ಟಗಳ ನಡುವೆ ಬೆಳೆದವರು. ಸೆಪ್ಟೆಂಬರ್ 4 ರಿಂದ 9ರ ನಡುವೆ ಥೈಲ್ಯಾಂಡ್‌ನಲ್ಲಿ ಮುಕ್ತಾಯಗೊಂಡ ಡಬ್ಲ್ಯೂ.ಎಫ್.ಎಫ್.ವೈ.ಎಸ್.ಐ  'ಏಷ್ಯಾ ಪೆಸಿಫಿಕ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್'ನಲ್ಲಿ ಭಾಗವಹಿಸಿದ್ದ ಅವರು ಯೋಗ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ದೇಶಕ್ಕೆ ಮಾತ್ರವಲ್ಲದೆ ಹೆತ್ತವರಿಗೂ ಕೀರ್ತಿ ತಂದಿದ್ದಾರೆ.

ತಮ್ಮ ಸಾಧನೆಯ ಕುರಿತು ʼಪ್ರಜಾವಾಣಿ ಡಿಜಿಟಲ್‌ʼ ಜತೆ ಮಾತನಾಡಿರುವ ಅವರು, ʼ5ನೇ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಅಣ್ಣ ಹಾಗೂ ಅಕ್ಕನಿಂದ ಯೋಗಾಸನ ಮಾಡುವುದನ್ನು ಕಲಿತೆ. ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಮನೆಗೆ ಬಂದಾಗ ಯೋಗಾಸನ ಮಾಡುತ್ತಿದ್ದರು. ಆಗ ನಾನೂ ಅವರೊಟ್ಟಿಗೆ ಸೇರಿಕೊಳ್ಳುತ್ತಿದ್ದೆ' ಎಂದರು.

ಪ್ರಾಥಮಿಕ ಶಿಕ್ಷಣವನ್ನು ಕೆರ್ವಾಶೆಯ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಪ್ರಸ್ತುತ ಮಂಗಳೂರಿನ ಸೇಂಟ್‌ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ʼಆರ್ಟಿಫಿಶಿಯಲ್‌ ಇಂಟಲಿಜೆನ್ಸ್ ಆ್ಯಂಡ್ ಮಿಷನ್‌ ಲರ್ನಿಂಗ್‌ʼ (ಎಐಎಂಎಲ್‌) ವಿಭಾಗದಲ್ಲಿ ಪದವಿ ಪಡೆದುಕೊಳ್ಳುತ್ತಿದ್ದಾರೆ.

6ನೇ ತರಗತಿಯಿಂದ 10ನೇ ತರಗತಿಯವರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಾಂಗ ಮಾಡಿದರು. ಇಲ್ಲಿಂದ ಅಧಿಕೃತವಾಗಿ ಅವರ ಯೋಗ ಪಯಣ ಆರಂಭವಾಯಿತು. ಇಲ್ಲಿನ ದೈಹಿಕ ಶಿಕ್ಷಕರಿಂದ ಯೋಗದ ಕುರಿತು ಮಾರ್ಗದರ್ಶನ ಪಡೆದುಕೊಂಡರು. ವೇಗವಾಗಿ ಎಲ್ಲಾ ಆಸನಗಳನ್ನು ಮಾಡುವ ಕೌಶಲವನ್ನು ಕಲಿತ ಅವರು ಶಾಲಾ ಹಂತದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.

ಮೊದಲ ಬಾರಿಗೆ ಯೋಗ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನೆನಪನ್ನು ಮೆಲುಕು ಹಾಕಿರುವ ನಿಖಿಲ್‌ ʼ6ನೇ ತರಗತಿ ಓದುತ್ತಿದ್ದಾಗ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಂತರ 10ನೇ ತರಗತಿಯವರೆಗೆ ವಿವಿಧ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾದೆ. ಇನ್ನೇನು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎನ್ನುವಷ್ಟರಲ್ಲಿ ಕೋವಿಡ್‌-19 ಬಂತು. ಇದರಿಂದಾಗಿ ಯಾವುದೇ ಸ್ಫರ್ಧೆಗಳಲ್ಲಿ ಭಾಗವಹಿಸಲಿಲ್ಲʼ ಎಂದು ಹೇಳಿದ್ದಾರೆ.

ಹತ್ತಾರು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದರಿಂದ ಪಿಯುಸಿಯಲ್ಲಿಯೂ ಸ್ಪರ್ಧಿಸುವ ಅವಕಾಶಗಳು ಸಿಕ್ಕವು. ಸಿಕ್ಕ ಅವಕಾಶವನ್ನು ಬಳಸಿಕೊಂಡ ನಿಖಿಲ್‌, ರಾಜ್ಯಮಟ್ಟದ ವಿವಿಧ ಯೋಗ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದರು.

ಇದೇ ವರ್ಷ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಿಖಿಲ್‌ ಸೋಲೊ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದರು. ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಮುಕ್ತಾಯಗೊಂಡ ʼಏಷ್ಯಾ ಪೆಸಿಫಿಕ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್ʼ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದು ನಿಖಿಲ್‌ ಅವರ ಮೊದಲ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಹಾಗೂ ಟ್ರೆಡಿಷನಲ್ ಯೋಗ ಎರಡರಲ್ಲಿಯೂ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ದಿನಚರಿ ಹಾಗೂ ಯೋಗಾಭ್ಯಾಸದ ಕುರಿತು ಮಾತನಾಡಿರುವ ನಿಖಿಲ್‌, ʼಪ್ರತಿದಿನ ತಪ್ಪದೇ ಯೋಗಾಭ್ಯಾಸ ಮಾಡುತ್ತೇನೆ. ಬೆಳಿಗ್ಗೆ 5:30 ರಿಂದ 6:30ರವರೆಗೂ ಅಭ್ಯಾಸ ಮಾಡುತ್ತೇನೆ. ಯೋಗ ಮಾಡುವುದಕ್ಕೂ ಮುನ್ನ ಯಾವುದೇ ಆಹಾರ ಸೇವಿಸುವುದಿಲ್ಲ. ಜಂಕ್‌ಫುಡ್ ತಿನ್ನುವುದು ತೀರ ಅಪರೂಪ. ಲಘುವಾದ ಆಹಾರವನ್ನು ಮಾತ್ರ ಸೇವಿಸುತ್ತೇನೆʼ ಎಂದಿದ್ದಾರೆ.

ಮಗನ ಸಾಧನೆಯ ಬಗ್ಗೆ ತಾಯಿ ಕುಸುಮ ಪೂಜಾರಿ ಮಾತನಾಡಿ, ʼಬಹಳ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದೇನೆ. ಇಂದು ನನ್ನ ಮಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ಖುಷಿ ತಂದಿದೆ. ಮಗನ ಸಾಧನೆಗೆ ಊರಿನವರೆಲ್ಲರೂ ಖುಷಿ ಪಡುತ್ತಿದ್ದಾರೆʼ ಎಂದು ಹೇಳಿದ್ದಾರೆ.

ʼಪತಿಯ ಅಗಲಿಕೆಯ ಬಳಿಕ ಕುಟುಂಬದ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ಆಗ ದಾರಿ ತೋಚದೆ 10 ತಿಂಗಳ ಮಗುವಾಗಿದ್ದಾಗ ನಿಖಿಲ್‌ನನ್ನು ಕಂಕುಳಲ್ಲಿ ಎತ್ತಿಕೊಂಡು ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹಿಂತಿರುಗಿದೆ. ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟುವ ಕೆಲಸ ಆರಂಭಿಸಿದೆ. ತಿಂಗಳಿಗೆ 2 ರಿಂದ 3 ಸಾವಿರ ಸಂಬಳ ಸಿಗುತ್ತಿತ್ತು. ಅದರಿಂದ ಸಿಕ್ಕ ಬಿಡಿಗಾಸಿನಿಂದಲೇ ಮಕ್ಕಳನ್ನು ಈವರೆಗೆ ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇನೆʼ ಎಂದು ಕುಸುಮ ಭಾವುಕರಾದರು.

ʼತವರಿನಲ್ಲಿದ್ದ ನನ್ನ ಸಹೋದರರು ಮೂವರು ಮಕ್ಕಳನ್ನು ಎಂದಿಗೂ ಬೇರೆ ಎಂದು ಭಾವಿಸಲೇ ಇಲ್ಲ. ಅವರ ಮಕ್ಕಳಂತೆಯೇ ನೋಡಿಕೊಂಡರು. ಮಕ್ಕಳ ಓದಿಗೆ ಸಹಾಯ ಮಾಡಿದರುʼ ಎಂದು ಕುಸುಮ ಅವರು ತವರು ಮನೆಯ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ