ಆನೇಕಲ್: ಈಡನ್ ಗಾರ್ಡನ್‌ ಬಡಾವಣೆಯಲ್ಲಿ ಅನಧಿಕೃತ ಪಿ.ಜಿ ದರ್ಬಾರ್‌

ಆನೇಕಲ್: ಈಡನ್ ಗಾರ್ಡನ್‌ ಬಡಾವಣೆಯಲ್ಲಿ ಅನಧಿಕೃತ ಪಿ.ಜಿ ದರ್ಬಾರ್‌

ಆನೇಕಲ್: ಈಡನ್ ಗಾರ್ಡನ್‌ ಬಡಾವಣೆಯಲ್ಲಿ ಅನಧಿಕೃತ ಪಿ.ಜಿ ದರ್ಬಾರ್‌

ಆನೇಕಲ್: ಪಟ್ಟಣಕ್ಕೆ ಸಮೀಪದ ಬ್ಯಾಗಡದೇನಹಳ್ಳಿ ಮತ್ತು ಕರ್ಪೂರು ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಈಡನ್‌ ಗಾರ್ಡನ್‌ ಬಡಾವಣೆಯಲ್ಲಿ 30ಕ್ಕೂ ಹೆಚ್ಚು ಪೇಯಿಂಗ್‌ ಗೆಸ್ಟ್‌ (ಪಿ.ಜಿ) ವಸತಿ ಕಟ್ಟಡಗಳು ಅನಧಿಕೃತವಾಗಿ ಐದಾರೂ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಸ್ಥಳೀಯ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಸಕ್ಷಮ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯದೆ ನಿರ್ಮಾಣವಾಗಿರುವ ಈ ಪಿ.ಜಿಗಳು ಮಾಲೀಕರು ತೆರಿಗೆ ಪಾವತಿಸದೆ ಸರ್ಕಾರವನ್ನು ವಂಚಿಸುತ್ತಿದ್ದಾರೆ. ಅಲ್ಲದೆ ಚರಂಡಿ ನೀರು ಮತ್ತು ತಾಜ್ಯ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಮಾಡದೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

ಪಿ.ಜಿ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ, ಆನೇಕಲ್ ಯೋಜನಾ ಪ್ರಾಧಿಕಾರ, ಬೆಸ್ಕಾಂ, ಅಗ್ನಿ ಶಾಮಕ ಠಾಣೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪಡೆಯಬೇಕು. ಆದರೆ ಇಲ್ಲಿರುವ ಬಹುತೇಕ ಎಲ್ಲಾ ಪಿ.ಜಿ ನಿರ್ಮಾಣಕ್ಕೆ ಅನುಮತಿಯನ್ನೂ ಪಡೆದಿಲ್ಲ. ಎನ್‌ಒಸಿಯನ್ನೂ ಪಡೆದಿಲ್ಲ. ಕಟ್ಟಡ ನಿರ್ಮಾಣದಲ್ಲೂ ನಿಯಮ ಉಲ್ಲಂಘನೆಯಾಗಿದೆ. ಆದರೂ ಯಾವ ಭಯವು ಇಲ್ಲದೆ ರಾಜರೋಷವಾಗಿ ಪಿ.ಜಿ ನಡೆಸಲಾಗುತ್ತಿದೆ.

ಲಯನ್ಸ್‌ ವಿಶ್ವವಿದ್ಯಾಲಯ ಸಮೀಪದಲ್ಲಿ ಇರುವುದರಿಂದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ನಿಯಮ ಉಲ್ಲಂಘಿಸಿ ಪಿ.ಜಿ ನಿರ್ಮಾಣ ಮಾಡಲಾಗಿದೆ. ಈ ವಿಶ್ವವಿದ್ಯಾಲಯದ ಶೇ 20ರಿಂದ 30 ವಿದ್ಯಾರ್ಥಿಗಳು ಪಿ.ಜಿ ವಾಸಿಗಳಾದ್ದಾರೆ. ಮಾನದಂಡ ಇಲ್ಲದೆ ಮಾಲೀಕರು ಮನಸ್ಸಿಗೆ ಬಂದಂತೆ ಪ್ರತಿ ವಿದ್ಯಾರ್ಥಿಯಿಂದ ₹8 ಸಾವಿರದಿಂದ ₹12 ಸಾವಿರ ವರೆಗೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ.

ಪಿ.ಜಿಯಂತಹ ವಾಣಿಜ್ಯ ಕಟ್ಟಡಗಳಿಗೆ ಪ್ರತ್ಯೇಕ ತೆರಿಗೆ ವ್ಯವಸ್ಥೆ ಇದೆ. ಆದರೆ ಇಲ್ಲಿರುವ ಬಹುತೇಕ ಪಿ.ಜಿಗಳನ್ನು ಜನ ವಸತಿ ಗೃಹಗಳೆಂದು ಬಿಂಬಿಸಿ ತೆರಿಗೆ ವಂಚಿಸಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ.

ಆನೇಕಲ್‌ ಯೋಜನಾ ಪ್ರಾಧಿಕಾರದಿಂದ 3–4 ಅಂತಸ್ತಿನ ಕಟ್ಟಡ ನಿರ್ಮಿಸಲು ಮಾತ್ರ ಅನುಮತಿ ಇದೆ. ಆದರೆ ಇಲ್ಲಿ 5–7 ಅಂತಸ್ತಿನ ಕಟ್ಟಡಗಳಿವೆ. ಇವುಗಳಿಗೆ ಪ್ರಾಧಿಕಾರದಿಂದಲೂ ಎನ್‌ಒಸಿ ನೀಡಿಲ್ಲ ಎನ್ನುತ್ತಾರೆ ಹೆಸರೇಳಲು ಇಚ್ಛಿಸದ ಪ್ರಾಧಿಕಾರದ ಅಧಿಕಾರಿಗಳು.

ಎಲ್ಲ ಇಲಾಖೆಯ ಅಧಿಕಾರಿಗಳು ಪಿ.ಜಿಗಳ ಮೇಲೆ ಜಂಟಿ ದಾಳಿ ನಡೆಸಿ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆಗೆ ಚರಂಡಿ ಕೊಳಚೆ ನೀರು

30ಕ್ಕೂ ಹೆಚ್ಚು ಪಿ.ಜಿಗಳಲ್ಲಿ ಅಂದಾಜು ಎರಡು ಸಾವಿರಕ್ಕೂ ಅಧಿಕ ಜನ ಇದ್ದಾರೆ. ಆದರೆ ಪಿ.ಜಿಯ ಕೊಳಚೆ ನೀರು ಹರಿದು ಹೋಗಲು ಚರಂಡಿಗೆ ಸಂಪರ್ಕ ಕಲ್ಪಿಸದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರವಂಟಿಕೆಪುರದ ರೈಲ್ವೆ ಕೆಳ ಸೇತುವೆ ಬಳಿ ಕೊಳಚೆ ನೀರು ಶೇಖರಣೆಗೊಂಡಿದ್ದು, ಗಬ್ಬುನಾರುತ್ತಿದೆ. ಇಲ್ಲಿ ಮೂಗು ಮುಚ್ಚಿಕೊಂಡು ಸವಾರರು ಓಡಾಡುತ್ತಿದ್ದಾರೆ.

ಉದ್ಯಾನದಲ್ಲಿ ಎಸ್‌ಟಿಪಿ ಘಟಕ: ಚರಂಡಿ ನೀರು ರಸ್ತೆಗೆ ಬಿಡಬಾರದೆಂದು ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದ ಬಳಿಕ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಆನೇಕಲ್‌ ಯೋಜನಾ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಮಹೇಶ್‌ ಒತ್ತಾಯಿಸಿದ್ದಾರೆ.

ಅನಧಿಕೃತ ವಿದ್ಯುತ್‌ ಸಂಪರ್ಕ

30ಕ್ಕೂ ಹೆಚ್ಚು ಪಿ.ಜಿಗಳು ಬೆಸ್ಕಾಂನಿಂದ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿವೆ. ಗ್ರಾಮ ಪಂಚಾಯಿತಿ, ಆನೇಕಲ್‌ ಯೋಜನಾ ಪ್ರಾಧಿಕಾರ ಸೇರಿದಂತೆ ಯಾವುದೇ ಇಲಾಖೆಗಳ ಅನುಮತಿ ಪಡೆಯದೇ ಪಿ.ಜಿ ನಿರ್ಮಿಸಿರುವುದರಿಂದ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆಯಲು ಅನುಮತಿಯೇ ಇಲ್ಲ. ಆದರೂ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲಾಗಿದೆ. ಬೆಸ್ಕಾಂ ಅಧಿಕಾರಿಗಳು ದಾಳಿ ನಡಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು. ಪಿ.ಜಿ ಮಾಲೀಕರ ವಿರುದ್ಧ ದೂರು ದಾಖಲಿಸಬೇಕು ಎಂದು ಚಿಕ್ಕಹಾಗಡೆಯ ನಿವಾಸಿ ವೈ.ಶ್ರೀನಿವಾಸ್‌ ಆಗ್ರಹಿಸಿದ್ದಾರೆ.

ಎಲ್ಲಾ ಪಿ.ಜಿಗಳ ಮಾಲೀಕರು ಹೊರರಾಜ್ಯದವರೇ, ಪ್ರತಿ ತಿಂಗಳು ₹2 ಲಕ್ಷದಿಂದ ₹3 ಲಕ್ಷ ಬಾಡಿಗೆ ಬಂದರೆ ಸಾಕು ಎಂಬ ಮನಸ್ಥಿತಿಯಲ್ಲಿ ಇರುವ ಇರುವ ನಿಯಮ ಹಾಗೂ ಮಾನದಂಡಗಳನ್ನು ಗಾಳಿಗೆ ದೂರಿದ್ದಾರೆ. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ ಆಗುತ್ತಿದೆ. ಆದಾಯ ಹೊರ ರಾಜ್ಯದ ಪಾಲಾಗುತ್ತಿದೆ. ಸ್ಥಳೀಯ ಜನರಿಗೆ ಪಿ.ಜಿಗಳ ತ್ಯಾಜ್ಯ ಮತ್ತು ಕೊಳಚೆ ನೀರೇ ಉಡುಗೊರೆಯಾಗಿದೆ ಎಂದು ವಕೀಲೆ ಅನುರಾಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಪಿ.ಜಿಗಳಿಗೆ ಸಮರ್ಪಕ ದಾಖಲೆ ಒದಗಿಸುವಂತೆ ಹಲವು ಬಾರಿ ನೋಟಿಸ್‌ ನೀಡಿದರೂ ಯಾವುದೇ ಉಪಯೋಗವಿಲ್ಲ. ತ್ಯಾಜ್ಯ ನೀರು ರಸ್ತೆಗೆ ಹರಿಯುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇಲ್ಲಿ ಶೀಘ್ರವೇ ಯೋಜನಾ ಪ್ರಾಧಿಕಾರ, ಗ್ರಾ.ಪಂ., ಪೊಲೀಸ್‌, ಬೆಸ್ಕಾಂ, ಅಗ್ನಿಶಾಮಕ ದಳ ಸೇರಿ ವಿವಿಧ ಇಲಾಖೆ ಜಂಟಿ ದಾಳಿ ನಡೆಸಿ ಕ್ರಮ ವಹಿಸಬೇಕು ಎಂದು ಹೆಸರೇಳಲು ಇಚ್ಛಿಸದ ಗ್ರಾ.ಪಂ. ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ