
ಕುರುಬೂರು: ಸಂಘದ ಸಭೆಯಲ್ಲಿ ರೈತರು, ಆಡಳಿತ ಮಂಡಳಿ ನಡುವೆ ತೀವ್ರ ವಾಗ್ವಾದ
ಚಿಂತಾಮಣಿ: ತಾಲ್ಲೂಕಿನ ಕುರುಬೂರು ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಸಂಘದ ಸಾಲ ಮರುಪಾವತಿ ಹಾಗೂ ಹಣಕಾಸಿನ ವಸೂಲಾತಿ ವಿಚಾರವಾಗಿ ರೈತರು ಹಾಗೂ ಆಡಳಿತ ಮಂಡಳಿ ನಡುವೆ ತೀವ್ರ ವಾಗ್ವಾದ ನಡೆಯಿತು.
ಸಂಘದಲ್ಲಿ ಅವ್ಯವಹಾರದ ನಡೆದಿದೆ. ಮಹಿಳಾ ಸಂಘಗಳ ಹೆಸರಿನಲ್ಲಿ ನಕಲಿ ಸಾಲ ಪಡೆಯಲಾಗಿದೆ ಎಂದು ಅರೋಪಿಸಿ ತಳಗವಾರದ ಪ್ರತಾಪ್ ಎಂಬುವರು ಸರ್ಕಾರ, ಪೊಲೀಸ್ ಠಾಣೆ, ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಸಿಐಡಿ ತನಿಖೆಗೆ ವಹಿಸಲಾಗಿತ್ತು. ಅಧಿಕಾರಿಗಳ ತನಿಖೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ತಡೆಯಾಜ್ಞೆ ತೆರವಾಗಿ ತನಿಖೆ ಚುರುಕುಗೊಂಡಾಗ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದರು.
ಸಭೆಯಲ್ಲಿ ರೈತ ಸದಸ್ಯರು, ಸಂಘದಿಂದ ನೀಡಿದ ಸಾಲಗಳ ಅವ್ಯವಹಾರ, ವಸೂಲಾತಿ ಪ್ರಕ್ರಿಯೆ ಮತ್ತು ಹಣದ ನಿರ್ವಹಣೆ, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದವರಿಗೆ ಸಾಲ ನೀಡದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ತ್ರೀ ಶಕ್ತಿ ಸಂಘಗಳಿಗೆ ಎಷ್ಟು ಸಾಲ ನೀಡಲಾಗಿದೆ. ಎಷ್ಟು ಸಾಲ ವಸೂಲಾತಿಯಾಗಿದೆ ಮತ್ತು ಇನ್ನೂ ಎಷ್ಟು ಬಾಕಿ ಇದೆ ಎಂದು ರೈತರು ಪ್ರಶ್ನಿಸಿದರು. ಸ್ತ್ರೀಶಕ್ತಿ ಸಂಘಗಳಿಗೆ ₹14 ಕೋಟಿ ಸಾಲ ನೀಡಿದ್ದು, ಅದರಲ್ಲಿ ಸುಮಾರು ₹10 ಕೋಟಿ ಬಾಕಿ ಇದೆ ಎಂದು ಆಡಳಿತ ಮಂಡಳಿ ತಿಳಿಸಿತು.
ಒಂದೂವರೆ ವರ್ಷ ಅಥವಾ ಎರಡು ವರ್ಷಗಳಿಂದ ನಿಯಮಿತವಾಗಿ ಕಂತು ಕಟ್ಟುತ್ತಿರುವ ರೈತರಿಗೆ ಮರುಸಾಲ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ. ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ ಸಂಘದಿಂದ ನ್ಯಾಯ ಸಿಗುತ್ತಿಲ್ಲ ಎಂದು ರೈತ ಸದಸ್ಯರು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಡಿಸಿಸಿ ಬ್ಯಾಂಕಿಗೆ ಸುಮಾರು ₹19 ಕೋಟಿ ನೀಡಬೇಕಿದ್ದು, ₹4 ಕೋಟಿ ಮಾತ್ರ ಪಾವತಿಸಲಾಗಿದೆ. ಬ್ಯಾಂಕ್ ಮರುಸಾಲ ನೀಡುತ್ತಿಲ್ಲ. ಇದರಿಂದಾಗಿ ಸಕಾಲದಲ್ಲಿ ಮರುಸಾಲ ನೀಡಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅಧ್ಯಕ್ಷ ದೊಡ್ಡ ಬೊಮ್ಮನಹಳ್ಳಿ ವೆಂಕಟರೆಡ್ಡಿ ಭರವಸೆ ನೀಡಿದರು.
ಉಪಾಧ್ಯಕ್ಷ ಕೆ.ಎಂ. ಕೃಷ್ಣಪ್ಪ, ಕೆ.ಎಂ.ಮಂಜುನಾಥ, ಕೆ.ಎಂ.ನಟರಾಜ್, ಶಿವರೆಡ್ಡಿ ಎಂ, ಶ್ರೀನಿವಾಸ್ ಗೌಡ, ನೇತಾಗೌಡ, ವಿಶ್ವನಾಥ್ ರೆಡ್ಡಿ, ಮುನಿವೆಂಕಟಪ್ಪ, ಕೃಷ್ಣಪ್ಪ, ಚಂದ್ರಕಳ, ಗಂಗಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮೂರ್ತಿ ಪಾಲ್ಗೊಂಡಿದ್ದರು.