
ವಂದೇ ಮಾತರಂ ವಿವಾದ | ರಾಜ್ಯ ಸರ್ಕಾರದ ಆದೇಶ ಸರಿಯಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಶೃಂಗೇರಿ: ವಂದೇ ಮಾತರಂ ಗೀತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅವಮಾನ ಅಥವಾ ಹಾಸ್ಯ ಮಾಡಿದವರಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ ರೂಪಿಸಿದೆ. ಕೇಂದ್ರ ಸರ್ಕಾರದ ಆದೇಶವಿದ್ದರೂ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶೃಂಗೇರಿಯ ಕುವೆಂಪು ಬಸ್ ನಿಲ್ದಾಣದಲ್ಲಿ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ವಂದೇ ಮಾತರಂ ಅಭಿಯಾನ, ಕಾಲ್ನಡಿಗೆ ಜಾಥಾ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಂದೇ ಮಾತರಂ ಗೀತೆಯಲ್ಲಿ ಹಿಂದೂ ದೇವತೆಗಳಾದ ಲಕ್ಷ್ಮೀ, ಸರಸ್ವತಿ, ದುರ್ಗೆ ಮೊದಲಾದ ಹೆಸರುಗಳು ಬಂದಿರುವ ಕಾರಣ ಆ ಕಾಲದಲ್ಲಿ ಭಾರತೀಯರಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಅವರು ತಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ ಎಂದು ವಿರೋಧಿಸಿದ್ದರು. ವಂದೇ ಮಾತರಂ ವಿರೋಧಿಸಿದವರು ಈಗ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಹಿಂದೂಸ್ತಾನದಲ್ಲಿ ಎಲ್ಲ ದೇವತೆಗಳನ್ನು ಪೂಜಿಸಲಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಸಂಪೂರ್ಣ ಗೀತೆಯನ್ನು ಹಾಡಬೇಕು ಎಂದು ಆದೇಶಿಸಿದೆ’ ಎಂದರು.
‘ರಾಷ್ಟ್ರಗೀತೆಯನ್ನು ದೇಶದ ಎಲ್ಲ ಪ್ರಜೆಗಳು ಸ್ವಾಗತಿಸುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರು ಕೇಂದ್ರ ಸರ್ಕಾರದ ಕಾನೂನನ್ನು ಗೌರವಿಸಿದ್ದಾರೆ. ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೂಚಿಸಿದೆ. ವಿಧಾನಸಭೆಯಲ್ಲಿ ಜನರು ಹಾಗೂ ರಾಜ್ಯದ ಹಿತಕ್ಕಾಗಿ ಕಾನೂನು ಜಾರಿಗೆ ತಂದು ಸುತ್ತೋಲೆ ಹೊರಡಿಸಿದಾಗ ಗ್ರಾಮ ಪಂಚಾಯಿತಿ ಅದನ್ನು ಜಾರಿಗೊಳಿಸದೆ, ‘ನಿಮ್ಮ ಕಾನೂನು ನಮಗೆ ಅನ್ವಯಿಸುವುದಿಲ್ಲ’ ಎಂದರೆ ಎಷ್ಟು ಸರಿ?’ ಎಂದು ಪ್ರಶ್ನಿಸಿದರು.
ವಂದೇ ಮಾತರಂ ಗೀತೆಯನ್ನು ಸಂಪೂರ್ಣ ಹಾಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಅಧಿಕಾರಿಗಳು ಪಾಲಿಸದಿದ್ದರೆ ಅವರನ್ನು ಅಮಾನತು ಮಾಡುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರದ ಸಚಿವರ ನೀತಿ ನೋವಿನ ಸಂಗತಿ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣಕಾರ ಕಾರ್ಕಳ ಶ್ರೀಕಾಂತ್ ಶೆಟ್ಟಿ ಮಾತನಾಡಿ, ‘ಕೆಂಪುಕೋಟೆಯಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲು ಸ್ವಾತಂತ್ರ್ಯ ಬಂದು 78 ವರ್ಷಗಳ ಬಳಿಕ ನರೇಂದ್ರ ಮೋದಿ ಅವರಿಂದ ಸಾಧ್ಯವಾಯಿತು. ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರು ವಂದೇ ಮಾತರಂ ಎಂದು ಘೋಷಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಾಣ ತ್ಯಾಗ ಮಾಡಿದ್ದಾರೆ’ ಎಂದರು.
‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರಿಗೆ ನೋವಾಗಬಹುದು ಎಂಬ ಕಾರಣಕ್ಕೆ ಮತದ ಓಲೈಕೆಗಾಗಿ ವಂದೇ ಮಾತರಂ ಗೀತೆಯನ್ನು ಮೊಟಕುಗೊಳಿಸಿ ಹಾಡಿಸುತ್ತಿದೆ. ದೇಶದ ಮೊದಲ ಧ್ವಜದಲ್ಲಿ ವಂದೇ ಮಾತರಂ ಸಾಲಿನ ಹೆಸರು ಹಾಕಲಾಗಿತ್ತು. ಭಾರತೀಯ ಸಂಸ್ಕೃತಿಯ ಪ್ರಕಾರ ಬೆಟ್ಟ, ಗುಡ್ಡ, ನದಿಗಳನ್ನು ಹೆಣ್ಣಿಗೆ ಹೋಲಿಸಿದ್ದೇವೆ. ಅದೇ ರೀತಿ ಮಾತೃಭೂಮಿಯ ಕಲ್ಪನೆ ಪ್ರಪಂಚದ ಇತರೆ ದೇಶಗಳಲ್ಲೂ ಇದೆ’ ಎಂದು ಅವರು ಹೇಳಿದರು.
ಮೆಣಸೆಯಿಂದ ಕುವೆಂಪು ಬಸ್ ನಿಲ್ದಾಣದವರೆಗೆ ವಂದೇ ಮಾತರಂ ಗೀತೆ ಹಾಡುತ್ತ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್. ಉಮೇಶ್, ಮಾಜಿ ಶಾಸಕ ಡಿ.ಎನ್. ಜೀವರಾಜ್, ಬಿಜೆಪಿ ಮುಖಂಡರಾದ ಶೃತಿ, ಮಾಲತೇಶ್ ಸಿಗಸೆ, ರಾಮಸ್ವಾಮಿ ಶೆಟ್ಟಿಗದ್ದೆ, ಅದ್ದಡ ಸತೀಶ್, ಕಚ್ಚೋಡಿ ಕೆ.ಎಸ್. ರಮೇಶ್, ಪುಣ್ಯಪಾಲ್, ಅರುಣ್ ಕುಮಾರ್, ದಿನೇಶ್ ಹೊಸೂರು, ಭಾಗ್ಯ ನಾಗೇಂದ್ರ, ಬಿ. ಶಿವಶಂಕರ್, ಹರೀಶ್ ಶೆಟ್ಟಿ ಹಾಗೂ ವೇಣುಗೋಪಾಲ್ ಭಾಗವಹಿಸಿದ್ದರು.
ವಂದೇ ಮಾತರಂ ದೇಶಪ್ರೇಮದ ಸಂಕೇತ
‘ನಮ್ಮ ಸಂಸ್ಕೃತಿಯನ್ನು ಧಿಕ್ಕರಿಸುವವರಿಗೆ ನಾವು ವಿರೋಧಿಸಬೇಕು. ವಂದೇ ಮಾತರಂ ಗೀತೆಗೆ ಎಲ್ಲ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ. ಕೇಂದ್ರ ಸರ್ಕಾರದ ಆದೇಶದಂತೆ ನಾವು ನಡೆದುಕೊಂಡಾಗ ಅದು ದೇಶಪ್ರೇಮವನ್ನು ತೋರಿಸುತ್ತದೆ’ ಎಂದು ಕಾರ್ಕಳ ಶ್ರೀಕಾಂತ್ ಶೆಟ್ಟಿ ಹೇಳಿದರು.
260927-126-1893517792