
ಚಿಕ್ಕಮಗಳೂರು | ಸಹಕಾರ ರಂಗದಲ್ಲಿ ನಿಷ್ಠೆ ಮುಖ್ಯ: ಸಿ.ಟಿ.ರವಿ
ಚಿಕ್ಕಮಗಳೂರು: ಸಹಕಾರ ರಂಗದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು. ಒಳ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಎಂದಿಗೂ ಸಂಘ ಅಭಿವೃದ್ಧಿಯಾಗದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಹಕಾರ ಸಂಸ್ಥೆಗಳಲ್ಲಿ ಹಣಕಾಸಿನ ವಿಚಾರದಲ್ಲಿ ದಕ್ಷತೆ, ಪ್ರಾಮಾಣಿಕತೆ ಜತೆಗೆ ಮೇಲ್ವಿಚಾರಣೆ ಇರಬೇಕು. ಎಂದಿಗೂ ಮ್ಯೂಸಿಕಲ್ ಚೇರ್ ರೀತಿ ಆಗಬಾರದು. ಆಡಳಿತ ಮಂಡಳಿ ಸೊಸೈಟಿ ಬೆಳವಣಿಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸಹ ಕಾರ ರಂಗ ಅಧೋಗತಿಗೆ ಸಾಗುವ ಸಾಧ್ಯತೆ ಯಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದರು.
ಇತ್ತೀಚೆಗೆ ಬರಗಾಲದ ಸಮಸ್ಯೆ ರೈತರನ್ನು ಕಾಡುತ್ತಿದೆ. ಪ್ರತಿ ವರ್ಷ ಶೇ 40ರಷ್ಟು ವಾಡಿಕೆ ಮಳೆ ಕ್ಷೀಣಿಸುವ ಮೂಲಕ ಎಲ್ಲೆಡೆ ಬರದ ಛಾಯೆ ಆವರಿಸಿದೆ. ಇದು ಬೆಳೆನಷ್ಟ, ಸಾಲ ಮರುಪಾವತಿಗೂ ಸಮಸ್ಯೆಯಾಗುತ್ತಿದೆ. ಮಳೆ ಕ್ಷೀಣಿಸಿದರೆ ಸಹಕಾರ ಕ್ಷೇತ್ರ ಹಾಗೂ ಬ್ಯಾಂಕ್‌ಗಳಿಗೂ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಹೇಳಿದರು.
‘ಬೇರೆ ಸಹಕಾರ ಸಂಘಗಳಿಗೆ ಹೋಲಿಸಿದರೆ ಮೂಗ್ತಿಹಳ್ಳಿ ಸಂಘ ಹೆಚ್ಚು ಅವಿನಾಭಾವ ಸಂಬಂಧ ಹೊಂದಿದೆ. ಹೀಗಾಗಿ ಮೂಗ್ತಿಹಳ್ಳಿ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಕಡೆಯಿಂದ ಬಲ ತುಂಬುವ ಪ್ರಯತ್ನ ಮಾಡುತ್ತೇನೆ. ಈ ದಿಸೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಕನಿಷ್ಠ 3 ಲಕ್ಷದ ತನಕ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಮಧ್ಯಮ ವರ್ಗಕ್ಕೆ ಶೇ 3ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಸಹಕಾರ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸೇವೆ ಮತ್ತು ಲಾಭವನ್ನು ಸಮತೋಲ ನವಾಗಿ ತೆಗೆದುಕೊಳ್ಳಬೇಕು. ಸೊಸೈಟಿಗಳ ಅಭಿವೃದ್ಧಿಗೆ ಅಪೆಕ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರ ಜತೆಗೂ ಚರ್ಚಿಸಿ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ‘ಮೂಗ್ತಿಹಳ್ಳಿ ಸಂಘ ಹನ್ನೆರಡು ವರ್ಷ ಪೂರೈಸಿದೆ. ಹಿಂದೆ ಕೂದುವಳ್ಳಿ ಸೊಸೈಟಿಯಿಂದ ಹೊರಬಂದು ಮೂಗ್ತಿಹಳ್ಳಿ ಸುತ್ತಮುತ್ತಲಿನ ರೈತರನ್ನು ಒಟ್ಟುಗೂಡಿಸಿ ಸ್ವತಂತ್ರವಾಗಿ ನಿರ್ಮಿಸಿದ ಸಂಸ್ಥೆ’ ಎಂದು ಹೇಳಿದರು.
‘ಮುಖ್ಯವಾಗಿ ಸಹಕಾರ ಸಂಘ ನಿರ್ಮಾಣಕ್ಕೆ ಸಿ.ಟಿ.ರವಿ ಅವರೇ ಕಾರಣಕರ್ತರು. 2013ರಿಂದಲೂ ಪ್ರತಿವರ್ಷ ಸಂಘ ಲಾಭದಲ್ಲಿದ್ದು, ಈ ವರ್ಷ ₹15.28 ಲಕ್ಷ ನಿವ್ವಳ ಲಾಭ ಗಳಿಸಿದೆ. ನೂತನ ಕಟ್ಟಡ ನಿರ್ಮಿಸುವ ಮೂಲಕ ಸದಸ್ಯರು ಹಾಗೂ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ’ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಬಿ.ಸಿ. ಲೋಕಪ್ಪಗೌಡ ಮಾತನಾಡಿ, ‘ಮೂಗ್ತಿಹಳ್ಳಿ ಸಂಘದ ನೂತನ ಕಟ್ಟಡದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಪಹಣಿ, ಜನಔಷಧಿ ಕೇಂದ್ರ ಹಾಗೂ ಸಾಮಾನ್ಯ ಸೇವಾ ಪಾಯಿಂಟ್ ತೆರೆದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಮೂಗ್ತಿಹಳ್ಳಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಇ. ಮಂಜುನಾಥ್, ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀನ್ ಬಿ. ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್. ದಯಾನಂದ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ. ದಿವಾಕರ್, ಮೂಗ್ತಿಹಳ್ಳಿ ಸೊಸೈಟಿ ಉಪಾಧ್ಯಕ್ಷ ಎಸ್.ಟಿ. ಚಂದ್ರೇಗೌಡ, ನಿರ್ದೇಶಕರಾದ ಕುಮಾರೇಗೌಡ, ದಿನೇಶ್ ರಾಜ್ ಅರಸ್, ಗುರುಮೂರ್ತಿ, ಮನುಕುಮಾರ್, ಪ್ರಮೀಳಾ, ಸೀತಾ, ದೇವರಾಜ್, ಪದ್ಮಾ, ಪವನಕುಮಾರ್, ಹರೀಶ್ ರಾಜ್ ಇದ್ದರು.
ಮೂಗ್ತಿಹಳ್ಳಿಯ ಆಟೊ ಚಾಲಕರು ಹಾಗೂ ಮಾಲೀಕರ ಬಹುದಿನದ ಬೇಡಿಕೆಯಾಗಿದ್ದ ಆಟೊ ನಿಲ್ದಾಣಕ್ಕೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹3.5 ಲಕ್ಷ ಅನುದಾನ ನೀಡಲಾಗಿದ್ದು, ಈಗ ಅದರ ಉದ್ಘಾಟನೆ ನೆರವೇರಿಸಲಾಗಿದೆ ಎಂದು ಸಿ.ಟಿ. ರವಿ ಹೇಳಿದರು.
‘ಮೂಗ್ತಿಹಳ್ಳಿ ಭಾಗದ ಜನ ಬಿಜೆಪಿ ಮೇಲೆ ಪ್ರೀತಿ ಹಾಗೂ ವಿಶ್ವಾಸವನ್ನು ನಿರಂತರವಾಗಿ ತೋರಿಸಿದ್ದಾರೆ. ಗ್ರಾಮಸ್ಥರು ದೇವಸ್ಥಾನ, ರಸ್ತೆ, ಆಟೊ ನಿಲ್ದಾಣ, ಬಸ್ ನಿಲ್ದಾಣ, ಸಹಕಾರ ಸಂಘ, ಬ್ಯಾಂಕ್ ಹಾಗೂ ಸಮುದಾಯ ಭವನ ಸೇರಿ ವಿವಿಧ ಅಗತ್ಯಗಳ ಕುರಿತು ಮನವಿ ಮಾಡಿದ್ದರು. ಸಾಧ್ಯವಿರುವ ಬೇಡಿಕೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಲಾಗಿದೆ’ ಎಂದರು.
ಗ್ರಾಮಸ್ಥರು ಈಗ ಗಮನಕ್ಕೆ ತಂದಿರುವ ಇನ್ನಿತರ ಸಮಸ್ಯೆಗಳನ್ನೂ ಪರಿಶೀಲಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯ ಶಕ್ತಿ ಹಾಗೂ ಅವಕಾಶ ದೊರೆತಾಗ ಪರಿಹಾರ ಕಲ್ಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿಮ ಸಮಸ್ಯೆಗಳನ್ನು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಅಪಘಾತ ತಡೆಯಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಟಿ. ಚಂದ್ರೇಗೌಡ, ಮುಖಂಡರಾದ ಪದ್ಮರಾಜ್ ಜೈನ್, ಪದ್ಮಾನಂದ ಜೈನ್, ರಾಮಸ್ವಾಮಿ, ಮಧು ಮೂಗ್ತಿಹಳ್ಳಿ ಇದ್ದರು.