
ಚಿಕ್ಕಬಳ್ಳಾಪುರ: ಬದಲಾಗದ ಡಿ.ಸಿ, ಆಯುಕ್ತರ ಹೆಸರು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಈಗ ಅಧ್ಯಕ್ಷರು ಮತ್ತು ಸದಸ್ಯರ ಬದಲಾವಣೆಯ ಕಾರಣಕ್ಕೆ ಚರ್ಚೆಗೆ ಒಳಗಾಗಿದೆ. ಇಂತಿಪ್ಪ ಪ್ರಾಧಿಕಾರವು ತನ್ನ ವೆಬ್‌ಸೈಟ್ ನಿರ್ವಹಣೆಯಲ್ಲಿ ಮಾತ್ರ ಎಡವುತ್ತಲೇ ಇದೆ. ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಿಲ್ಲ.
ಖಾಸಗಿ ಬಡಾವಣೆಗಳ ಅಭಿವೃದ್ಧಿಯ ಅನುಮೋದನೆ ಹೀಗೆ ನಾನಾ ವಿಚಾರಕ್ಕೆ ಆಸಕ್ತಿವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ತನ್ನದೇ ವೆಬ್‌ಸೈಟ್ ನಿರ್ವಹಣೆಗೆ ಮಾತ್ರ ನಿರ್ಲಕ್ಷ್ಯವಹಿಸುತ್ತಲೇ ಇದ್ದಾರೆ. ಈಗ ಇಂತಹದ್ದೇ ಮತ್ತೊಂದು ನಿರ್ಲಕ್ಷ್ಯ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಕಂಡು ಬಂದಿದೆ.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಪದನಿಮಿತ್ತ ಸದಸ್ಯರಾಗಿರುವರು. ಜಿಲ್ಲಾಧಿಕಾರಿ ಜಿ.ಪ್ರಭು 2026ರ ಜನವರಿ 1ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿದರು. ಹೀಗೆ ಅವರು ಜಿಲ್ಲಾಧಿಕಾರಿಯಾಗಿ 9 ತಿಂಗಳಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಇಂದಿಗೂ ಪಿ.ಎನ್.ರವೀಂದ್ರ ಅವರೇ ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಪದನಿಮಿತ್ತ ಸದಸ್ಯ.
ಪ್ರಾಧಿಕಾರಕ್ಕೆ ಕನಿಷ್ಠ ತನ್ನ ಆಯುಕ್ತರು ಯಾರೂ ಎನ್ನುವ ಮರೆವೂ ಇದ್ದಂತಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಹ ಪದನಿಮಿತ್ತ ಸದಸ್ಯರಾಗಿರುವ. ಈ ಹಿಂದಿನ ಆಯುಕ್ತ ಬಿ.ಟಿ ರಂಗಸ್ವಾಮಿ ವರ್ಗಾವಣೆಯಾಗಿ ಐದಾರು ತಿಂಗಳಾಗಿದೆ. ಶಿಲ್ಪಾ ದೇಸಾಯಿ ಈಗಿನ ಆಯುಕ್ತರು, ಆದರೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಬಿ.ಟಿ ರಂಗಸ್ವಾಮಿ ಅವರೇ ಪದನಿಮಿತ್ತ ಸದಸ್ಯರು ಮತ್ತು ಆಯುಕ್ತರು.
ಬೆಂಗಳೂರಿಗೆ ಸಮೀಪದ ಚಿಕ್ಕಬಳ್ಳಾಪುರವು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಹಬ್ ಎನ್ನುವಂತೆ ಬೆಳೆಯುತ್ತಿದೆ. ನಗರದ ಹೊರವಲಯದಲ್ಲಿಯೂ ಬಡಾವಣೆಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ನಂದಿ ಗಿರಿಧಾಮ, ಈಶಾ ಯೋಗ ಕೇಂದ್ರ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ಇರುವ ಕಾರಣ ಚಿಕ್ಕಬಳ್ಳಾಪುರದಲ್ಲಿ ಬಡಾವಣೆಗಳ ನಿರ್ಮಾಣ ವೇಗ ಪಡೆಯುತ್ತಿದೆ. ಇದು ಒಳ್ಳೆಯ ‘ವ್ಯವಹಾರ’ ಮತ್ತು ವಹಿವಾಟಿಗೂ ಕಾರಣವಾಗಿದೆ.
ಈ ಎಲ್ಲ ಕಾರಣಗಳಿಂದ ಬೆಂಗಳೂರಿಗರು ಪ್ರಾಧಿಕಾರದ ವೆಬ್‌ಸೈಟ್ ವೀಕ್ಷಿಸುವ ಸಾಧ್ಯತೆಯೂ ಇದೆ. ಹೊಸ ಬಡಾವಣೆಗಳ ನಿರ್ಮಾಣ, ಅನುಮೋದನೆ ಹೀಗೆ ವಿವಿಧ ವಿಚಾರಗಳಿಗೆ ನಾಗರಿಕರು ಸಹ ವೆಬ್‌ಸೈಟ್ ತಡಕಾಡುವರು. ರಾಜ್ಯದ ಬಹಳಷ್ಟು ನಗರಾಭಿವೃದ್ಧಿ ಪ್ರಾಧಿಕಾರಗಳ ವೆಬ್‌ಸೈಟ್‌ಗಳು ಆಗಾಗ್ಗೆ ಅಪ್‌ಡೇಟ್ ಆಗುತ್ತಿವೆ. ಲೇಔಟ್‌ಗಳು, ಆದೇಶಗಳು, ಟೆಂಡರ್‌ಗಳು ಹೀಗೆ ವಿವಿಧ ವಿಚಾರವಾಗಿ ಜನಸಾಮಾನ್ಯರಿಗೂ ಮಾಹಿತಿ ನೀಡುತ್ತಿವೆ. ಆದರೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾತ್ರ ಇದಕ್ಕೆ ಅಪವಾದವಾಗಿದೆ.
ಬಹಳಷ್ಟು ಮಂದಿ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡುವರು. ಆದರೆ ಚಿಕ್ಕಬಳ್ಳಾಪುರ ಪ್ರಾಧಿಕಾರದ ವೆಬ್‌ಸೈಟ್ ಮಾತ್ರ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಿಲ್ಲ. ವೆಬ್‌ಸೈಟ್ ನೋಡಿದರೆ ಇದು ತಿಳಿಯಲಿದೆ.
ಈ ಹಿಂದೆಯೂ ಇದೇ ಕಥೆ: 2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಬೈರತಿ ಸುರೇಶ, ನಗರಾಭಿವೃದ್ಧಿ ಸಚಿವರಾಗಿದ್ದರು. ಆದರೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ 2024ರ ಮಾರ್ಚ್‌ವರೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಎಂದೇ ಇತ್ತು.
ವೆಬ್‌ಸೈಟ್‌ನ ‘ಇತ್ತೀಚಿನ ಫೋಟೊ ಗ್ಯಾಲರಿ’ಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಇಲಾಖೆಯ ಯೋಜನೆ ಅಥವಾ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಚಿತ್ರವಿತ್ತು. ಇದು ಗ್ಯಾಲರಿ 1ರ ಚಿತ್ರವಾದರೆ ಗ್ಯಾಲರಿ 3ರ ಚಿತ್ರದಲ್ಲಿ ಸಚಿವ ಬೈರತಿ ಬಸವರಾಜು ಅವರು ಕಾರ್ಯಕ್ರಮ ಉದ್ಘಾಟಿಸುವ ಚಿತ್ರವಿತ್ತು. ಗ್ಯಾಲರಿ2ರಲ್ಲಿ ಈ ಹಿಂದಿನ ಅಧಿಕಾರಿಗಳ ಚಿತ್ರವೇ ಪ್ರಕಟವಾಗಿತ್ತು.
‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ 2024ರ ಮಾ.1ರಂದು ‘ಬದಲಾಗದ ಪ್ರಾಧಿಕಾರದ ಗ್ಯಾಲರಿ’ ಎನ್ನುವ ವಿಶೇಷ ವರದಿ ಸಹ ಪ್ರಕಟವಾಗಿತ್ತು. ಮರು ದಿನವೇ ಗ್ಯಾಲರಿಯಲ್ಲಿನ ಚಿತ್ರಗಳು ಬದಲಾವಣೆಯಾಗಿದ್ದವು. ಆದರೆ ಈಗ ಮತ್ತೆ ಇದೇ ಅಧ್ವಾನ ಮುಂದುವರಿದಿದೆ.