
2026ರ ಬಜೆಟ್‌ನಲ್ಲಿ ಘೋಷಣೆ: ಚಿಂತಾಮಣಿಗೆ ಡ್ರೋನ್ ಪರೀಕ್ಷಾ ಕೇಂದ್ರ
ಚಿಂತಾಮಣಿ: ಡ್ರೋನ್‌ಗಳ ಪರೀಕ್ಷೆ ಮತ್ತು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದು 2026ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.
ಈ ಕೇಂದ್ರ ಯಾವ ತಾಲ್ಲೂಕಿಗೆ ಮಂಜೂರಾಗುತ್ತದೆ ಎನ್ನುವ ನಿರೀಕ್ಷೆ ಜಿಲ್ಲೆಯ ಜನರದ್ದಾಗಿತ್ತು. ಈಗ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದಿದೆ. ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಚಿಂತಾಮಣಿ ಪಾಲಾಗಿದೆ.
ತಾಲ್ಲೂಕಿನ ಕೈವಾರ ಹೋಬಳಿಯ ಜೀಡರಹಳ್ಳಿ ಗ್ರಾಮದಲ್ಲಿ 19.2 ಎಕರೆಯಲ್ಲಿ ₹ 42.83 ಕೋಟಿ ವೆಚ್ಚದಲ್ಲಿ ಡ್ರೋಣ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಸರ್ಕಾರದ ಆದೇಶಿಸಿದೆ. ₹ 38.15 ಕೋಟಿಯನ್ನು ಬಂಡವಾಳ ವೆಚ್ಚ ಹಾಗೂ ಮೂರು ವರ್ಷಗಳ ಕಾರ್ಯಾಚರಣೆಗೆ ₹ 4.68 ಕೋಟಿ ಮೀಸಲಿಡಲಾಗಿದೆ.
ಒಂದು ಸಾವಿರ ಮೀಟರ್ ಉದ್ದ ಹಾಗೂ 23 ಮೀಟರ್ ಅಗಲದ ಮುಖ್ಯ ರನ್ ವೇ, ದ್ವಿತೀಯ ರನ್ ವೇ, ಹವಾಮಾನ ಕೇಂದ್ರ, ಡ್ರೋನ್ ಕಂಟ್ರೋಲ್ ಕೇಂದ್ರ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ಪ್ರಯೋಗಾಲಯಗಳು, ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆ, ಸುರಕ್ಷತಾ ಸೌಲಭ್ಯಗಳ ನಿರ್ಮಾಣ, ಹೊರಾಂಗಣ ಗ್ರೌಂಡ್, ವಾಹನಗಳ ನಿಲುಗಡೆ ವ್ಯವಸ್ಥೆ, ಸುರಕ್ಷತಾ ಸೌಲಭ್ಯ, ಆಡಳಿತ ಕಚೇರಿ ಮತ್ತಿತರ ಸೌಲಭ್ಯಗಳು ಹಬ್‌ನಲ್ಲಿ ನಿರ್ಮಾಣವಾಗಲಿವೆ.
ಡ್ರೋನ್‌ಗಳ ಹಾರಾಟ, ಸಾಮರ್ಥ್ಯ, ಸುರಕ್ಷತೆ, ವಿಶ್ವಾರ್ಹತೆ ಹಾಗೂ ಪ್ರಾಮಾಣಿಕರಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲು ಕೇಂದ್ರದಲ್ಲಿ ಅವಕಾಶ ಸಿಗಲಿದೆ. ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ರಕ್ಷಣಾ ಕ್ಷೇತ್ರ ಬಳಕೆದಾರರು ಮತ್ತು ಜಾಗತಿಕ ಮೂಲ ಉಪಕರಣಗಳ ತಯಾರಿಕೆಗೆ ಈ ಕೇಂದ್ರದ ಮೂಲಕ ಪರೀಕ್ಷೆ ಮತ್ತು ಅಭಿವೃದ್ಧಿಯ ಸೌಲಭ್ಯಗಳನ್ನು ಒದಗಿಸುವುದು ಉದ್ದೇಶವಾಗಿದೆ.
ಡ್ರೋನ್ ಫೆಡರೇಷನ್ ಆಫ್ ಇಂಡಿಯಾ (ಡಿಎಫ್‌ಐ) ಸಂಸ್ಥೆಯನ್ನು ಕೇಂದ್ರದ ನೋಡಲ್ ಸಂಸ್ಥೆಯನ್ನಾಗಿ ನೇಮಿಸಲಾಗಿದೆ. ಕಾರ್ಯಾಚರಣೆ, ನಿರ್ವಹಣೆ, ಬಳಕೆದಾರರ ನೋಂದಣಿ, ವೇಳಾಪಟ್ಟಿ, ಸುರಕ್ಷತೆ, ತರಬೇತಿ ಮತ್ತು ಉದ್ಯಮ ಸಂಪರ್ಕ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಡಿಎಫ್‌ಐ ನಿರ್ವಹಿಸಲಿದೆ.
ಯೋಜನೆಯಡಿ ನಿರ್ಮಾಣವಾಗಲಿರುವ ಭೂಮಿ, ನಾಗರಿಕ ಮೂಲಸೌಕರ್ಯ ಮತ್ತು ಪ್ರಮುಖ ಆಸ್ತಿಗಳ ಮಾಲೀಕತ್ವ ರಾಜ್ಯ ಸರ್ಕಾದ್ದಾಗಿದೆ. 3 ವರ್ಷಗಳ ಅನುದಾನದ ಅವಧಿ ಪೂರ್ಣಗೊಂಡ ಬಳಿಕ ಪರೀಕ್ಷಾ ಶುಲ್ಕ, ಉಪಕರಣ ಮತ್ತು ಹ್ಯಾಂಗರ್ ಬಾಡಿಗೆ ತರಬೇತಿ, ಉದ್ಯಮ ಸಹಭಾಗಿತ್ವದ ಮೂಲಕ ಕೇಂದ್ರದ ಆರ್ಥಿಕತೆ ಸಾಧಿಸುವ ಉದ್ದೇಶವಿದೆ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.
ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾದ ವೇಳೆ ಯಾವ ತಾಲ್ಲೂಕಿನಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತದೆ ಎನ್ನುವುದನ್ನು ತಿಳಿಸಿರಲಿಲ್ಲ. ಜಿಲ್ಲೆಗೆ ಸೀಮಿತಗೊಳಿಸಿ ಯೋಜನೆ ಪ್ರಕಟಿಸಲಾಗಿತ್ತು. ಆದ ಕಾರಣ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಈ ಸೌಲಭ್ಯ ದೊರೆಯುತ್ತದೆ ಎನ್ನುವ ಮಾತುಗಳು ಇದ್ದವು.
ಆದರೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಚಿಂತಾಮಣಿ ಶಾಸಕ ಡಾ.ಎಂ.ಸಿ ಸುಧಾಕರ್ ಸ್ವಕ್ಷೇತ್ರಕ್ಕೆ ಯೋಜನೆ ತಂದಿದ್ದಾರೆ.