
ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಸಂಭ್ರಮದ ಗಣಪತಿ ಮೂರ್ತಿ ವಿಸರ್ಜನೆ
ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಈ ಬಾರಿ ಗೋಣಿಕೊಪ್ಪಲು ದಸರಾವನ್ನು ಮೀರಿಸುವ ಮಾದರಿಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೋತ್ಸವ ಅದ್ದೂರಿಯಾಗಿ ಜರುಗಿತು.
ಪೊನ್ನಂಪೇಟೆಯ ವಿವಿಧ ಭಾಗಗಳಲ್ಲಿ ಕೂರಿಸಿದ್ದ ಗಣಪತಿಗಳನ್ನು ಒಂದೇ ದಿನ ವ್ಯವಸ್ಥಿತವಾಗಿ ವಿಸರ್ಜನೆ ಮಾಡಲಾಯಿತು. ಹೀಗಾಗಿ ಗಣಪತಿ ವಿಸರ್ಜನೋತ್ಸವ ದಸರಾ ಮಾದರಿಯಲ್ಲಿ ಜರುಗಿತು.
ಪೊನ್ನಂಪೇಟೆಯ ಒಂಬತ್ತು ದಿಕ್ಕುಗಳಿಂದ ಸಾಗಿ ಬಂದ ಗಣಪತಿ ಮಂಟಪಗಳು ರಾತ್ರಿಯಾಗುತ್ತಿದ್ದಂತೆ ವಾದ್ಯಗಳೊಂದಿಗೆ ಪಟ್ಟಣದ ಮುಖ್ಯರಸ್ತೆಗೆ ತಲುಪಿದವು. ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮಂಟಪಗಳು ಸುಂದರವಾಗಿ ಝಗಮಗಿಸುತ್ತಿದ್ದು ನೋಡುಗರ ಕಣ್ಮನ ಸೆಳೆದವು.
ಒಂದೊಂದು ಮಂಟಪದ ಜೊತೆಯಲ್ಲಿಯೂ ನೂರಾರು ಜನರು ವಾದ್ಯ ಮೇಳದೊಂದಿಗೆ ನರ್ತಿಸುತ ಸಂಭ್ರಮಿಸಿದರು. 9 ಗಣಪತಿ ಮಂಟಪಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಾಗ ನಗರ ಬೆಳಕಿನಿಂದ ಕಂಗೊಳಿಸಿತು. ಇದರ ಜೊತೆಗೆ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಟ್ಟಣದಲ್ಲಿ ಸೇರಿದ್ದ ಸಾವಿರಾರು ಮಂದಿ ಸಾರ್ವಜನಿಕರಲ್ಲಿ ಕೆಲವರು ಗಣಪತಿ ಮಂಟಪದ ಜೊತೆಯಲ್ಲಿ ಸಾಗಿದ್ದರೆ, ಮತ್ತೆ ಕೆಲವರು ಸಂಗೀತದಲ್ಲಿ ತಲ್ಲೀನರಾಗಿದ್ದರು. ಇಡೀ ರಾತ್ರಿ ನಡೆದ ಉತ್ಸವದಲ್ಲಿ ಪೊನ್ನಂಪೇಟೆಯ ಸುತ್ತಲಿನಿಂದ ಬಂದಿದ್ದ ಸಾವಿರಾರು ಜನರು ಬೆಳಗಿನವರೆಗೂ ಸಂಭ್ರಮಿಸಿದರು.
ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರ ಕ್ರಮ ಕೈಗೊಂಡಿದ್ದರು. ಜನರು ಕೂಡ ಶಾಂತಿಯಿಂದ ವರ್ತಿಸಿ ಗಣಪತಿ ವಿಸರ್ಜನೋತ್ಸವವನ್ನು ಯಶಸ್ವಿಗೊಳಿಸಿದರು. ಇದುವರೆಗೆ ಪೊನ್ನಂಪೇಟೆ ಪಟ್ಟಣದಲ್ಲಿ ಐದು ಗಣಪತಿಗಳನ್ನು ಕೂರಿಸಲಾಗುತ್ತಿತ್ತು. ಈ ಬಾರಿ 9 ಮಂಟಪಗಳು ಇದ್ದವು.
ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿದ ಗಣಪತಿ ಮೂರ್ತಿಗಳನ್ನು ಅಲ್ಲಿನ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.