
ಕೊಪ್ಪಳ: ಮೈಸೂರು ದಸರಾಕ್ಕೆ ಗವಿಶ್ರೀಗೆ ಆಹ್ವಾನ
ಕೊಪ್ಪಳ: ನಾಡಹಬ್ಬ ಮೈಸೂರು ದಸರಾದ ಈ ಬಾರಿಯ ಉದ್ಘಾಟಕರಾದ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೋಮವಾರ ಆಹ್ವಾನ ನೀಡಿದರು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಸೇರಿದಂತೆ ಅನೇಕರು ಸ್ವಾಮೀಜಿಗೆ ಆಹ್ವಾನ ಕೊಟ್ಟರು.
ನಾಡಹಬ್ಬಕ್ಕೆ ಬರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನೀಡಿದ ಆಹ್ವಾನ ಪತ್ರಿಕೆಯನ್ನು ಸಚಿವರು ಸ್ವಾಮೀಜಿಗೆ ನೀಡಿದರು.
ಸರ್ಕಾರದ ಆಹ್ವಾನವನ್ನು ಸಂತೋಷದಿಂದಲೇ ಸ್ವೀಕರಿಸಿದ ಸ್ವಾಮೀಜಿ 'ನಾಡಹಬ್ಬದಲ್ಲಿ ಸಂತೋಷದಿಂದ ಪಾಲ್ಗೊಳ್ಳುತ್ತೇನೆ' ಎಂದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ತಂಗಡಗಿ ಗವಿಮಠದ ಸ್ವಾಮೀಜಿ ಅತ್ಯಂತ ಸೂಕ್ಷ್ಮ ಮನಸ್ಸಿನ ಸಂವೇದನಾಶೀಲರಾಗಿದ್ದು ಅನಗತ್ಯವಾಗಿ ಯಾರೂ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಮನವಿ ಮಾಡಿದರು.
ಗವಿಮಠದ ಸ್ವಾಮೀಜಿ ದಸರಾ ಉದ್ಘಾಟನೆ ಮಾಡಲು ಒಪ್ಪಿರುವುದು ಅತ್ಯಂತ ಸಂತೋಷ ನೀಡಿದೆ. ಇದರಿಂದ ದಸರಾ ಘನತೆ ಹೆಚ್ಚಾಗಿದೆ ಎಂದು ಹೇಳಿದರು.