
ಪ್ರಚೋದನಕಾರಿ ವಿಡಿಯೊ ಪೋಸ್ಟ್: ವ್ಯಕ್ತಿಯ ವಿರುದ್ಧ ಎಫ್‌ಐಆರ್
ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹಾಗೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಕೊಳಗಲ್ ರಸ್ತೆಯ ಇಂದಿರಾನಗರ ನಿವಾಸಿ ಗೋವಿಂದ ಹೆಚ್.ಡಿ (44) ಎಂಬುವನ ವಿರುದ್ಧ ಬ್ರೂಸ್‌ಪೇಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿ ಗೋವಿಂದ ಎಚ್.ಡಿ ಎಂಬಾತ ‘govindraj.hd’ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಜನರ ಗುಂಪೊಂದು ಮಚ್ಚು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಸಂಭ್ರಮಾಚರಣೆ ಮಾಡುತ್ತಿರುವುದು, ಆರೋಪಿ ಗೋವಿಂದರಾಜ ನಡೆದುಕೊಂಡು ಬರುತ್ತಿರುವ ದೃಶ್ಯಗಳಿದ್ದವು. ಧರ್ಮ-ಧರ್ಮಗಳ ನಡುವೆ ದ್ವೇಷ ಹರಡುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ಭೀತಿಗೊಳಿಸುವ ಉದ್ದೇಶದಿಂದ ಈ ವಿಡಿಯೊ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಂದುತ್ವಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳನ್ನು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ.
ಆರೋಪಿಯ ಮಾಹಿತಿ ಕಲೆಹಾಕಿ, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ವಿವಿಧ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.