
ಬೀದರ್: ಸೆ.27ಕ್ಕೆ ಹೂಗಾರ ಮಾದಯ್ಯ ಜಯಂತಿ; ಚಂದ್ರಕಾಂತ ಹೂಗಾರ
ಬೀದರ್: ‘ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಬೀದರ್ ಜಿಲ್ಲಾ ಘಟಕದ ವತಿಯಿಂದ ಸೆ. 27ರಂದು ನಗರದಲ್ಲಿ ಹೂಗಾರ ಮಾದಯ್ಯನವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಆ ದಿನ ಭವ್ಯ ಮೆರವಣಿಗೆ ನಡೆಸಲಾಗುವುದು’ ಎಂದು ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಕಾಂತ ಹೂಗಾರ ತಿಳಿಸಿದರು.
ಮೊದಲ ಬಾರಿಗೆ ಬೀದರ್‌ನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಮುಖ್ಯ ಸಮಾರಂಭ ಆಯೋಜಿಸಲಾಗಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಈ ಹಿಂದಿನ ವರ್ಷಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಮಾದಯ್ಯನವರ ಜಯಂತಿ ಆಚರಿಸಲಾಗಿದೆ. ಈ ಸಲ ಬೀದರ್ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ಹೂಗಾರ ಸಮಾಜದ ಮುಖಂಡರು ಹಾಗೂ ಇತರ ಸಮಾಜದವನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಭಗತ್ ಸಿಂಗ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಛತ್ರಪತಿ ಶಿವಾಜಿ ಮಹಾರಾಜ ವೃತ್ತ, ಶರಣ ಹರಳಯ್ಯಾ ವೃತ್ತ, ಮೋಹನ್ ಮಾರ್ಕೆಟ್, ರೋಟರಿ ವೃತ್ತದ ಮೂಲಕ ಹಾದು ಚನ್ನಬಸವ ಪಟ್ಟದ್ದೇವರ ರಂಗಮಂದಿರ ತಲುಪಲಿದೆ ಎಂದು ಹೇಳಿದರು.
ಮೆರವಣಿಗೆಗೆ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಚಾಲನೆ ಕೊಡುವರು. ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಮುಖಂಡರಾದ ಡಾ. ರಜನೀಶ ವಾಲಿ, ದೀಪಕ್ ವಾಲಿ, ಹೂಗಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಹೂಗಾರ, ಜಿಲ್ಲಾಧ್ಯಕ್ಷ ಕಪಿಲ್ ಹೂಗಾರ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.
ಮೆರವಣಿಗೆ ಸಮಿತಿ ಅಧ್ಯಕ್ಷ ಮಂಜುನಾಥ ಹೂಗಾರ, ಸಮಾಜದ ಜಿಲ್ಲಾಧ್ಯಕ್ಷ ಕಪಿಲ್ ಹೂಗಾರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಹೂಗಾರ, ಪ್ರಮುಖರಾದ ಹಣಮಂತಪ್ಪ ಹೂಗಾರ, ಸಿದ್ದು ಹೂಗಾರ, ಸತೀಶ್ ಹೂಗಾರ, ವಿಶ್ವ ಹೂಗಾರ, ಪ್ರಭುಶೆಟ್ಟಿ ಹೂಗಾರ ಉಪಸ್ಥಿತರಿದ್ದರು.
₹100 ಕೋಟಿ ಅನುದಾನ, 15 ಎಕರೆ ಜಮೀನಿಗೆ ಆಗ್ರಹ
‘ರಾಜ್ಯ ಸರ್ಕಾರವು ಹೂಗಾರ ಮಾದಣ್ಣ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿಡಬೇಕು. ಸಮಾಜದ ಗುರುಪೀಠ, ವಿದ್ಯಾಸಂಸ್ಥೆ ಹಾಗೂ ಭವನ ನಿರ್ಮಾಣಕ್ಕೆ 15 ಎಕರೆ ಜಮೀನು ಮಂಜೂರು ಮಾಡಬೇಕು. ಮುಂದಿನ ವರ್ಷ ಸರ್ಕಾರವೇ ಹೂಗಾರ ಮಾದಣ್ಣನವರ ಜಯಂತಿ ಆಚರಿಸಬೇಕು‘ ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಬೀದರ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಿದ್ದು ಫುಲಾರಿ ಆಗ್ರಹಿಸಿದರು.
ಹೂಗಾರ ಸಮಾಜವು ರಾಜ್ಯದಲ್ಲಿಯೇ ಅತಿ ಸಣ್ಣ ಸಮುದಾಯವಾಗಿದೆ. ಕಳೆದ 40 ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೂ ಈವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. 2023ರಲ್ಲಿ ನಿಗಮ ರಚನೆಯಾಗಿದ್ದರೂ ಬಿಡಿಗಾಸೂ ಮೀಸಲಿಟ್ಟಿಲ್ಲ. ಸಿಎಂ ಡಿ.ಕೆ. ಶಿವಕುಮಾರ್ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.